ಯಲ್ಲಾಪುರ: ಮಹಾಭಾರತ, ರಾಮಾಯಣ, ಭಾಗವತ, ಗೀತೆ ಇವುಗಳ ತತ್ವ, ಚಿಂತನೆಗಳ ಅರಿವನ್ನು ಮಕ್ಕಳು ಸಣ್ಣಂದಿರುವಾಗಲೇ ನೀಡಿದಾಗ ಸುಸಂಸ್ಕೃತ ವ್ಯಕ್ತಿಗಳಾಗಿ ರೂಪುಗೊಳ್ಳುವುದಕ್ಕೆ ಸಾಧ್ಯ. ಭಾರತೀಯ ಮೌಲ್ಯಗಳು ಉತ್ತಮ ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದು ಉಮ್ಮಚಗಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಜಿ. ಭಟ್ಟ ಸಂಕದಗುಂಡಿ ತಿಳಿಸಿದರು.
ಭಗವದ್ಗೀತೆಯಂತಹ ಗ್ರಂಥದ ಕುರಿತು ಮಕ್ಕಳಿಗೆ ಬಾಲ್ಯದಲ್ಲಿ ಅರಿವು ಮೂಡಿಸಿದರೆ ಅವರ ಬದುಕಿಗೆ ಸನ್ಮಾರ್ಗ ನೀಡಿದಂತಾಗುತ್ತದೆ. ಆ ದೃಷ್ಟಿಯಲ್ಲಿ ಕೇವಲ ಐದು ನಿಮಿಷ ಮಾತನಾಡುವ ಅವಕಾಶದಲ್ಲಿ ನಾಡಿನ ೧೯ ಜಿಲ್ಲೆಗಳಿಂದ, ಬೀದರ್, ಕೋಲಾರ, ಮಂಗಳೂರು ನಂತಹ ದೂರದ ಊರುಗಳಿಂದ ಬಂದಿರುವುದೇ ಪಾಲಕರಿಗೆ ಮಕ್ಕಳ ಮೇಲಿರುವ ಪ್ರೀತಿ, ವಾತ್ಸಲ್ಯವನ್ನು ಕಾಣಬಹುದು ಎಂದರು.ಶ್ರೀಮಾತಾ ವೈದಿಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಟಿ.ವಿ. ಹೆಗಡೆ ಬೆದೆಹಕ್ಕಲು ಮಾತನಾಡಿ, ಸಮಾಜದಲ್ಲಿ ನಾವೆಲ್ಲ ಹಣವೇ ಸರ್ವಸ್ವವೆಂದು ಭಾವಿಸಿ, ಅದರ ಬೆನ್ನು ಹತ್ತಿದ್ದೇವೆ. ಅದರಿಂದ ಹೊಟ್ಟೆ ತುಂಬದು. ಉತ್ತಮ ಬದುಕು ಕೂಡಾ ದೊರೆಯದು. ಹೊಟ್ಟೆಗೆ ಅನ್ನ, ರೊಟ್ಟಿಯೇ ಬೇಕು. ಹಾಗೆಯೇ ಮಾನವನಾಗಲು ಜ್ಞಾನ ಬೇಕು. ಮಾನವೀಯತೆಯ ಜೀವನ ನಡೆಸಲು ಇಂತಹ ಸಂಸ್ಕಾರ ನೀಡುವ ಕಾರ್ಯಕ್ರಮಗಳು ಎಂದರು.ಅ.ಭಾ.ಸಾ.ಪ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್ಟ ಮಾತನಾಡಿ, ಪ್ರಕೃತಿ ನಮ್ಮನ್ನು ಸದಾ ಆಕರ್ಷಿಸುತ್ತದೆ. ಆ ನೆಲೆಯಲ್ಲಿ ನಾವು ಉಮ್ಮಚಗಿಯನ್ನು ಕೇಂದ್ರವಾಗಿಟ್ಟುಕೊಂಡು ಮಕ್ಕಳ ಕೇಂದ್ರವನ್ನಾಗಿಸುವ ಸದಿಚ್ಛೆಯಿಂದ ಇಲ್ಲಿ ಈ ಕಾರ್ಯಕ್ರಮ ಆಯೋಜಿಸಿದ್ದೇವೆ. ನಮ್ಮ ಮಕ್ಕಳಿಗೆ ಭಾರತೀಯ ಮೌಲ್ಯ, ಪರಂಪರೆಯ ಅರಿವು ಮೂಡಿಸಬೇಕಾಗಿದೆ ಎಂದರು.ಸಂಜನಾ ಭಟ್ಟ ಪ್ರಾರ್ಥಿಸಿದರು. ಯಲ್ಲಾಪುರ ತಾಲೂಕು ಸಮಿತಿಯ ಕಾರ್ಯದರ್ಶಿ ಶ್ರೀರಾಮ ಲಾಲಗುಳಿ ಸ್ವಾಗತಿಸಿದರು. ಮಕ್ಕಳ ಪ್ರಕಾರ ರಾಜ್ಯ ಸಮಿತಿಯ ಸದಸ್ಯೆ ಸುಜಾತಾ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಕಲಾ ಭಟ್ಟ ನಿರ್ವಹಿಸಿ, ವಂದಿಸಿದರು. ಪುಷ್ಪಾ ಮಾಳಕೊಪ್ಪ, ಪ್ರಿಯಾ ಭಟ್ಟ, ಪುಷ್ಕರ ಕೆ.ಎನ್., ಅಖಿಲಾ ಭಟ್ಟ ಗೋಷ್ಠಿಯನ್ನು ನಿರ್ವಹಿಸಿದರು.