ಹಾವಿನ ದ್ವೇಷದ ಭಯಕ್ಕೆ ಒಂದೇ ದಿನ ರಾತ್ರಿ ದೇವಸ್ಥಾನ ನಿರ್ಮಾಣ

KannadaprabhaNewsNetwork |  
Published : Oct 21, 2024, 12:40 AM IST
20ಡಿಡಬ್ಲೂಡಿ1,2ಕಲಘಟಗಿ ತಾಲೂಕು ಗಳಗಿ ಹುಲಕೊಪ್ಪದಲ್ಲಿ ಒಂದೇ ದಿನ ರಾತ್ರಿ ನಿರ್ಮಾಣವಾಗಿರುವ ನಾಗರ ದೇವರ ದೇವಸ್ಥಾನದಲ್ಲಿ ಜೋಡಿ ನಾಗರ ದೇವರಿಗೆ ಪೂಜೆ ಸಲ್ಲಿಸುತ್ತಿರುವ ಬಾಲಕಿಯರು. | Kannada Prabha

ಸಾರಾಂಶ

ಒಂದು ನಾಗರಹಾವು ಕೊಂದ ಕಾರಣಕ್ಕೆ ಇನ್ನೊಂದು ನಾಗರ ಹಾವು ಎಡೆಬಿಡದೇ ಬೆನ್ನು ಹತ್ತಿದೆ ಎಂದು ಗ್ರಾಮವೊಂದರಲ್ಲಿ ಗ್ರಾಮಸ್ಥರು ಒಂದೇ ದಿನದಲ್ಲಿ ನಾಗ ದೇವರ ಮಂದಿರ ನಿರ್ಮಿಸಿರುವ ವಿಶೇಷ ಘಟನೆಯೊಂದು ನಡೆದಿದೆ.

ಧಾರವಾಡ: ಹಾವಿನ ದ್ವೇಷ ಹನ್ನೆರಡು ವರ್ಷ ಎನ್ನುವ ನಂಬಿಕೆ ಇದೆ. ಅಲ್ಲದೇ, ಜೋಡಿ ನಾಗರಹಾವುಗಳಿದ್ದಲ್ಲಿ ಆ ಪೈಕಿ ಒಂದನ್ನು ಅಗಲಿಸಿದರೆ ಇನ್ನೊಂದು ಹಾವು ಸೇಡು ಇಟ್ಟುಕೊಳ್ಳುತ್ತದೆ ಎನ್ನುವ ಬಲವಾದ ನಂಬಿಕೆಯೂ ನಮ್ಮ ಸಮಾಜದಲ್ಲಿದೆ. ಹಾವಿನ ದ್ವೇಷ, ಸೇಡಿನ ಕುರಿತಾಗಿ ಅನೇಕ ಸಿನಿಮಾಗಳೂ ಬಂದಿವೆ. ಈ ನಂಬಿಕೆಗಳಿಗೆ ಯಾವುದೇ ವೈಜಾನಿಕ ಆಧಾರ ಇಲ್ಲದಿದ್ದರೂ ಜನರು ಹಾವಿನ ದ್ವೇಷದ ಬಗ್ಗೆ ನಂಬಿಕೆ ಮಾತ್ರ ಎಳ್ಳಷ್ಟು ಕಡಿಮೆಯಾಗಿಲ್ಲ ಎನ್ನುವುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ.

ಒಂದು ನಾಗರಹಾವು ಕೊಂದ ಕಾರಣಕ್ಕೆ ಇನ್ನೊಂದು ನಾಗರ ಹಾವು ಎಡೆಬಿಡದೇ ಬೆನ್ನು ಹತ್ತಿದೆ ಎಂದು ಗ್ರಾಮವೊಂದರಲ್ಲಿ ಗ್ರಾಮಸ್ಥರು ಒಂದೇ ದಿನದಲ್ಲಿ ನಾಗ ದೇವರ ಮಂದಿರ ನಿರ್ಮಿಸಿರುವ ವಿಶೇಷ ಘಟನೆಯೊಂದು ನಡೆದಿದೆ.

ಇದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಗಳಗಿ ಹುಲಕೊಪ್ಪ ಗ್ರಾಮದಲ್ಲಿ ನಡೆದಿರುವ ಸಂಗತಿ. ಗ್ರಾಮದ ಹನುಮಂತ ಜಾಧವ ಎಂಬುವರ ಹಿತ್ತಲಿನಲ್ಲಿ ಹಾವಿನ ದ್ವೇಷದಿಂದ ಪಾರಾಗಲು ಒಂದೇ ದಿನ ರಾತ್ರಿಯಲ್ಲಿ ನಾಗರ ದೇವರ ದೇವಸ್ಥಾನ ನಿರ್ಮಿಸಿ ಪೂಜೆ ಮಾಡಲಾಗುತ್ತಿದೆ.

ಆಗಿದ್ದೇನು?

ನಾಗರ ಪಂಚಮಿ ಮುನ್ನಾದಿನ ಹನುಮಂತ ಜಾಧವ ಅವರ ಹಿತ್ತಲಿನಲ್ಲಿ ದೊಡ್ಡ ನಾಗರಹಾವೊಂದು ಕಂಡಿದೆ. ತುಂಬಾ ದಿನಗಳಿಂದ ಓಡಾಡಿಕೊಂಡಿದ್ದ ಈ ಹಾವು ಕಂಡ ತಕ್ಷಣವೇ ಭಯದಿಂದ ಅದನ್ನು ಹೊಡೆದು ಕೊಲ್ಲಲಾಗಿದೆ. ಅದಾದ ಒಂದು ವಾರದಲ್ಲಿ ಈ ಮನೆಯ 11 ವರ್ಷದ ಪೂಜಾ ಎಂಬ ಬಾಲಕಿಗೆ ಇದೇ ಹಿತ್ತಲಿನಲ್ಲಿ ಮತ್ತೊಂದು ನಾಗರಹಾವು ಪದೇ ಪದೇ ಕಾಣಿಸಿಕೊಂಡಿದೆ. ಆಕೆಗೆ ಮಾತ್ರವಲ್ಲ, ಅಕ್ಕಪಕ್ಕದ ಮನೆಗಳ ಜನರಿಗೂ ಹಾವು ಕಾಣಿಸಿದೆ. ಜೋಡಿ ಹಾವಿನ ಪೈಕಿ ಒಂದನ್ನು ಕೊಂದಿದ್ದು, ಇನ್ನೊಂದು ಹಾವು ನಮ್ಮ ಬೆನ್ನು ಬಿದ್ದಿದೆ. ಸೇಡು ತೀರಿಸಿಕೊಳ್ಳಲು ಹಾವು ಬಂದಿದೆ ಎಂದು ಹೆದರಿದ ಜಾಧವ ಕುಟುಂಬ ಹಾಗೂ ಗ್ರಾಮಸ್ಥರು ಅದಕ್ಕೆ ಪರಿಹಾರವಾಗಿ ಒಂದೇ ದಿನ ರಾತ್ರಿ ನಾಗರ ಹಾವಿಗೆ ದೇವಸ್ಥಾನ ಕಟ್ಟಿ ಇದೀಗ ಪೂಜೆ ಸಲ್ಲಿಸುತ್ತಿರುವುದು ವಿಶೇಷ ಸಂಗತಿ.

ಒಂದೇ ರಾತ್ರಿಯಲ್ಲಿ ದೇವಸ್ಥಾನ

ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿದ ಹನುಮಂತ ಜಾಧವ, ನಮ್ಮ ಮನೆ ಹಿತ್ತಲಿನಲ್ಲಿ ಸತ್ತ ಹಾವಿನ ದಹನ ಮಾಡಿದರೂ ಅದು ಸಂಪೂರ್ಣ ದಹನ ಆಗಲಿಲ್ಲ. ಆಗಲೇ ನಮಗೆ ಆತಂಕ ಶುರುವಾಗಿತ್ತು. ಅಲ್ಲದೇ ಮಕ್ಕಳಿಗೆ ಕಂಡ ಹಾವು ನಾಗದೇವತೆ ಎಂದೇ ನಂಬಿದ್ದೇವೆ. ಹಾವು ನೋಡಿದ ಮಕ್ಕಳೊಂದಿಗೆ ನಾವೆಲ್ಲರೂ ಪ್ರಾಯಶ್ಚಿತಕ್ಕಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೂ ಹೋಗಿ ಪೂಜೆ ಸಹ ಸಲ್ಲಿಸಿ ಬಂದೆವು. ಅಲ್ಲಿಯೂ ದೋಷ ಪರಿಹಾರಕ್ಕೆ ಒಂದೇ ರಾತ್ರಿಯಲ್ಲಿ ದೇವಸ್ಥಾನ ನಿರ್ಮಾಣದ ಸೂತ್ರವನ್ನು ಅರ್ಚಕರು ನೀಡಿದರು. ಅಲ್ಲಿಂದ ಬಂದ ದಿನ ರಾತ್ರಿಯೇ ಗ್ರಾಮಸ್ಥರೆಲ್ಲ ಸೇರಿ, ದೇವಸ್ಥಾನ ಕಟ್ಟಿ, ಜೋಡಿ ನಾಗರ ಕಲ್ಲಿನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸುತ್ತಿದ್ದೇವೆ ಎಂದರು.

ಜಾಧವ ಅವರ ಮನೆಯ ಹಿತ್ತಲಿನಲ್ಲಿ ಈಗಷ್ಟೇ ನಿರ್ಮಾಣವಾಗಿರುವ ಪುಟ್ಟ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಆಗಿರುವ ಕಲ್ಲಿನ ನಾಗ ದೇವರ ದರ್ಶನಕ್ಕೆ ಗ್ರಾಮದ ಜನರು ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಬಂದು ಪೂಜೆ ಸಲ್ಲಿಸುತ್ತಿದ್ದಾರೆ. ಸ್ಥಳೀಯರು ಈಗ ನಿರ್ಮಾಣವಾಗಿರುವ ದೇವಸ್ಥಾನಕ್ಕೆ ಕಳಸ ಸಹಿತ ಇನ್ನಿತರ ಅಭಿವೃದ್ಧಿ ಮಾಡಲು ಮುಂದಾಗಿದ್ದಾರೆ.

ನಮ್ಮಲ್ಲಿ ನಾಗರ ಹಾವಿನ ಬಗ್ಗೆ ಅನೇಕ ಕಥೆಗಳು, ನಂಬಿಕೆಗಳಿವೆ. ಅಲ್ಲದೇ ನಾಗರ ಹಾವಿನ ಕೋಪ ತುಂಬಾ ಕಠೋರ ಹಾಗೂ ಪವಾಡದ ರೀತಿ ಇರುತ್ತದೆ ಎನ್ನಲಾಗಿದೆ. ಅಂತಹ ನಂಬಿಕೆಗಳ ಪಾಲಿಗೆ ಈ ದೇವಸ್ಥಾನವೊಂದು ಇದೀಗ ಹೊಸದಾಗಿ ಸೇರ್ಪಡೆಯಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಟಿ ಆತ್ಮ*ತ್ಯೆಗೆ ಸರ್ಕಾರಿ ನೌಕರಿಗೆ ಸೇರುವಂತೆ ಕುಟುಂಬ ಒತ್ತಡ ಕಾರಣ?
ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ