ಚಂಗ್ರಾಂದಿ ಪತ್ತಲೋದಿ ಕಾರ್ಯಕ್ರಮಕ್ಕೆ ಚಾಲನೆ

KannadaprabhaNewsNetwork |  
Published : Oct 21, 2024, 12:39 AM IST
ಚಿತ್ರ : 19ಎಂಡಿಕೆ2 : ಟಿ. ಶೆಟ್ಟಿಗೇರಿ ಕೊಡವ ಸಮಾಜ ಚಂಗ್ರಾಂದಿ ಪತ್ತಾಲೋದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಗಣ್ಯರು, ಕಲಾವಿದರು. | Kannada Prabha

ಸಾರಾಂಶ

ಹತ್ತು ದಿನಗಳ ವರೆಗೆ ಜನೋತ್ಸವ ರೀತಿಯಲ್ಲಿ ಚಂಗ್ರಾಂದಿ ಪತ್ತಲೋದಿಯನ್ನು ಆಚರಿಸುತ್ತಿದ್ದು 8ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಭಕ್ತಾದಿಗಳಿಗೆಲ್ಲ ಪವಿತ್ರ ಕಾವೇರಿ ತೀರ್ಥ ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಶ್ರೀಮಂಗಲ

ಟಿ.ಶೆಟ್ಟಿಗೇರಿಯಲ್ಲಿರುವ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜವು ಕಳೆದ ಏಳು ವರ್ಷಗಳಿಂದ ತುಲಾ ಸಂಕ್ರಮಣದಂದು ಕಾವೇರಿ ತೀರ್ಥಪೂಜೆ ಮಾಡಿ ತೀರ್ಥ ವಿತರಣೆಯೊಂದಿಗೆ ಮೊದಲ್ಗೊಂಡು ಹತ್ತು ದಿನಗಳವರೆಗೆ ಜನೋತ್ಸವದ ರೀತಿಯಲ್ಲಿ ಚಂಗ್ರಾಂದಿ ಪತ್ತಲೋದಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಿದ್ದು 8ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ.

ಶುಕ್ರವಾರ ಕೊಡವ ಸಮಾಜದ ಅಧ್ಯಕ್ಷ ಕೈಬಿಲೀರ ಹರೀಶ್ ಅಪ್ಪಯ್ಯರವರ ಮುಂದಾಳತ್ವದಲ್ಲಿ ಕೊಡವ ಸಮಾಜದ ನಿರ್ದೇಶಕರು ಹಾಗೂ ಸದಸ್ಯರ ಸಹಭಾಗಿತ್ವದಲ್ಲಿ ಕಾವೇರಿ ತೀರ್ಥ ಪೂಜೆ ಹಾಗೂ ಕಣಿ ಪೂಜೆಯೊಂದಿಗೆ 8ನೇ ವರ್ಷದ ಚಂಗ್ರಾಂದಿ ಪತ್ತಲೋದಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ಭಕ್ತಾದಿಗಳಿಗೆಲ್ಲ ಪವಿತ್ರ ಕಾವೇರಿ ತೀರ್ಥ ವಿತರಿಸಲಾಯಿತು.

ಅಂದು ಸಂಜೆ ಕಿಕ್ಕಿರಿದ ಪ್ರೇಕ್ಷಕರ ಸಮ್ಮುಖದಲ್ಲಿ ಕುಟ್ಟ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಸದಸ್ಯೆಯರಿಂದ ವಿಶೇಷ ಸಾಂಸ್ಕೃತಿಕ ಪ್ರದರ್ಶನ ನಡೆಯಿತು.

ಈ ಸಂದರ್ಭ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಟಿ.ಶೆಟ್ಟಿಗೇರಿ ಕೊಡವ ಸಮಾಜದ ಮಾಜಿ ಅಧ್ಯಕ್ಷ ಚೊಟ್ಟೆಯಾಂಡಮಾಡ ಬೋಸು ವಿಶ್ವನಾಥ್ ಮಾತನಾಡಿ, ಕೊಡವ ಸಮಾಜವು ಕೇವಲ ಮದುವೆ ಮಂಟಪಕ್ಕೆ ಸೀಮಿತವಾಗದೆ ಕೊಡವ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿಯ ಬೆಳವಣಿಗೆಯೊಂದಿಗೆ ಕೊಡವ ಜನಾಂಗದ ಸರ್ವತೋಮುಖ ಅಭಿವೃದ್ಧಿಯ ಜವಾಬ್ದಾರಿಯನ್ನು ನಿರ್ವಹಿಸುತ್ತದೆ ಎಂಬುದನ್ನು ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜ ನಿರೂಪಿಸಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮತ್ತೋರ್ವ ಮುಖ್ಯ ಅತಿಥಿ ಇರ್ಪು ಶ್ರೀರಾಮೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷ ಮದ್ರೀರ ಪಿ.ವಿಷ್ಣು ಮಾತನಾಡಿ ಕೊಡವ ಜನಾಂಗಕ್ಕೆ ಸಂಬಂಧಿಸಿದ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಅಭಿವೃದ್ಧಿಯತ್ತ ಮುನ್ನಡೆಯುತ್ತಿರುವ ಈ ಕೊಡವ ಸಮಾಜಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದರು.

ಕುಟ್ಟ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಮುಕ್ಕಾಟಿರ ಅರ್ಚನ ಮಾದಪ್ಪ ಹಾಗೂ ಸಲಹೆಗಾರ್ತಿ ಕಳ್ಳಿಚಂಡ ಶಾಲಿನಿ ಕಾರ್ಯಪ್ಪ ಮಾತನಾಡಿ, ಕಳೆದ ಏಳು ವರ್ಷಗಳಿಂದ ಹತ್ತುದಿನಗಳ ಜನೋತ್ಸವವನ್ನು ನಡೆಸುತ್ತಿರುವುದು ಶ್ಲಾಘನೀಯ. ಈ ಕಾರ್ಯಕ್ರಮದಿಂದ ನಮ್ಮ ಕೂಟದ ಸದಸ್ಯರ ಪ್ರತಿಭೆ ಅನಾವರಣಗೊಳಿಸಲು ಉತ್ತಮ ವೇದಿಕೆ ಸಿಕ್ಕಿದಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಕೊಡವ ಸಮಾಜದ ಅಧ್ಯಕ್ಷ ಕೈಬಿಲೀರ ಹರೀಶ್ ಅಪ್ಪಯ್ಯ ಕೊಡವ ಸಮಾಜದ ಕಾರ್ಯಚಟುವಟಿಕೆಗಳೊಂದಿಗೆ ಚಂಗ್ರಾಂದಿ ಪತ್ತಲೋದಿ ಕಾರ್ಯಕ್ರಮದ ವಿಶೇಷತೆ ಹಾಗೂ ನಿರ್ವಹಣೆಯ ಬಗ್ಗೆ ಸಭೆಗೆ ಮಾಹಿತಿ ನೀಡಿದರು.

ಕೊಡವ ಸಮಾಜದ ನಿರ್ದೇಶಕಿ ಚಂಗುಲಂಡ ಅಶ್ವಿನಿ ಸತೀಶ್ ಪ್ರಾರ್ಥಿಸಿ ನಿರೂಪಿಸಿದರು. ಕಾರ್ಯದರ್ಶಿ ಕೋಟ್ರಮಡ ಸುಮಂತ್ ಮಾದಪ್ಪ ಸ್ವಾಗತಿಸಿ ವಂದಿಸಿದರು. ಉಪಾಧ್ಯಕ್ಷ ಮಚ್ಚಮಾಡ ಸುಮಂತ್, ಖಜಾಂಚಿ ಚಂಗುಲಂಡ ಸತೀಶ್, ನಿರ್ದೇಶಕರಾದ ಬಾದುಮಂಡ ವಿಷ್ಣು, ಮುಕ್ಕಾಟಿರ ಸಂದೀಪ್ ಹಾಗೂ ತೀತೀರ ಅನಿತ ಸುಬ್ಬಯ್ಯ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು.

ಶನಿವಾರ ಸಂಜೆ ಮಹಿಳೆಯರಿಗೆ ಅಡುಗೆ ಸ್ಪರ್ಧೆ ಹಾಗೂ ಗೋಣಿಕೊಪ್ಪ ಜನನಿ ಪೊಮ್ಮಕ್ಕಡ ಕೂಟದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಇಂದು(ಭಾನುವಾರ) ಕೊಡಗು ಆರ್ಟ್ ಆಫ್ ಲಿವಿಂಗ್ ಕಲಾವಿದರಿಂದ ಕಾರ್ಯಕ್ರಮ ನಡೆಯಲಿದೆ. 21ರಂದು ತಿಂಗಕೋರ್ ಮೊಟ್ಟ್ ತಲಕಾವೇರಿಕ್ ಕೂಟದಿಂದ, 22ರಂದು ಪೊನ್ನಂಪೇಟೆ ಕೊಡವ ಸಮಾಜ ಕಲಾವಿದರಿಂದ, 23ರಂದು ಬೇಗೂರ್ ಸಾಂಸ್ಕೃತಿಕ ಕೂಟದಿಂದ, 24ರಂದು ಗೋಣಿಕೊಪ್ಪ ಕಾವೇರಿ ಕಾಲೇಜು ವಿದ್ಯಾರ್ಥಿಗಳಿಂದ, 25ರಂದು ಮರೆನಾಡ್ ಕೊಡವ ಸಮಾಜ ಕಲಾವಿದರಿಂದ, 26ರಂದು ಶ್ರೀಮಂಗಲ ಕೊಡವ ಸಮಾಜ ಪೊಮ್ಮಕ್ಕಡ ಕೂಟದವರಿಂದ, 27ರಂದು ಟಿ.ಶೆಟ್ಟಿಗೇರಿ ರೂಟ್ಸ್ ವಿದ್ಯಾಸಂಸ್ಥೆ ವಿದ್ಯಾರ್ಥಿಗಳಿಂದ ಹಾಗೂ ಚೆಟ್ಟಂಗಡ ಕುಟುಂಬ ಪೊಮ್ಮಕ್ಕಡ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. 26ರಂದು ಟಿ.ಶೆಟ್ಟಿಗೇರಿ ಪಂಚಾಯ್ತಿ ವ್ಯಾಪ್ತಿಯ ಪುರುಷರಿಗೆ ನಿಧಾನ ಬೈಕ್ ಚಾಲನೆ ಸ್ಪರ್ಧೆ, 27ರಂದು ಟಿ.ಶೆಟ್ಟಿಗೇರಿ ಪಂಚಾಯ್ತಿ ವ್ಯಾಪ್ತಿಯ ಪುರುಷ ಹಾಗೂ ಮಹಿಳೆಯರಿಗೆ ಹಗ್ಗ ಜಗ್ಗಾಟ, ಮಹಿಳೆಯರಿಗೆ ವಿಷಚೆಂಡು ಹಾಗೂ ಸಂಗೀತ ಕುರ್ಚಿ ಸ್ಪರ್ಧೆ ನಡೆಯಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ದ್ವೇಷ ಮಸೂದೆಯಿಂದ ಭಿನ್ನ ದನಿ ದಮನ ಆಗಲ್ಲ ''
3 ವರ್ಷ ಮೊಮ್ಮಗನಿಗೆ ಬಾರಲ್ಲಿ ಹೆಂಡ ಕುಡಿಸಿದ ಅಜ್ಜ: ಆಕ್ರೋಶ