ಪುತ್ತೂರು: ಜೀವನ, ವೃತ್ತಿಯಲ್ಲಿ ಧರ್ಮ ಪಾಲನೆ ಮೊದಲ ಕರ್ತವ್ಯವಾಗಿರಬೇಕು. ಒಳ್ಳೆಯದರ ರಕ್ಷಣೆಗಾಗಿ ಕೆಟ್ಟದ್ದು ನಶಿಸಬೇಕಾಗಿರುವುದು ಅನಿವಾರ್ಯ. ನಾವು ಧರ್ಮ ಪಾಲಿಸಿದರೆ ಅದೇ ನಮ್ಮನ್ನು ರಕ್ಷಿಸುತ್ತದೆ ಎಂದು ಆಂಧ್ರಪ್ರದೇಶದ ರಾಜ್ಯಪಾಲ, ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎಸ್. ಅಬ್ದುಲ್ ನಝೀರ್ ಹೇಳಿದರು.ಇಲ್ಲಿನ ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಆಯೋಜಿಸಲಾದ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆಯನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ರಾಮಾಯಣ, ಮಹಾಭಾರತದಲ್ಲಿ ಧರ್ಮಪಾಲನೆ ಮಾಡಿದವರು ಗೆಲುವನ್ನೇ ಸಾಧಿಸಿದ್ದಾರೆ ಎನ್ನುವುದನ್ನು ಉಲ್ಲೇಖಿಸಿದರು.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎನ್. ಕೋಟೀಶ್ವರ್ ಸಿಂಗ್ ಮಾತನಾಡಿ, ವಿವೇಕಾನಂದರ ಹೆಸರಿನ ಶಿಕ್ಷಣ ಸಂಸ್ಥೆ ನೀಡುತ್ತಿರುವ ಶಿಕ್ಷಣದ ಸೇವೆ ಅನನ್ಯ. ಈಗ ಹಮ್ಮಿಕೊಂಡಿರುವ ಅಣಕು ನ್ಯಾಯಾಲಯ ಸ್ಪರ್ಧೆಯು ಯುವ ವಕೀಲರಿಗೆ ಪ್ರೇರಣೆ ತುಂಬುವ ಜತೆಗೆ ಕೌಶಲ್ಯ ವರ್ಧನೆಗೆ ಸಹಾಯಕ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿ. ಬಸವರಾಜು ಮಾತನಾಡಿ, ಹಲವರಿಗೆ ಕಾನೂನು ಅರಿವು ಇರುವುದಿಲ್ಲ. ಆದರೆ ಕಾನೂನು ತಿಳಿದುಕೊಂಡಿರುವುದು ಸಾಮಾಜಿಕ ಜವಾಬ್ದಾರಿ. ಕಾನೂನು ವಿದ್ಯಾರ್ಥಿಗಳು ಕಾನೂನು ಅರಿವಿನ ಜಾಗೃತಿ ಮಾಡಬೇಕು. ಎಲ್ಲಾ ರೀತಿಯ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಲು ಕಾನೂನಿನಿಂದ ಸಾಧ್ಯ ಎಂದರು.ಅಧ್ಯಕ್ಷತೆ ವಹಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್ ಮಾತನಾಡಿ, ಶಿಕ್ಷಣದಿಂದ ವ್ಯಕ್ತಿ ನಿರ್ಮಾಣ, ವ್ಯಕ್ತಿಯಿಂದ ರಾಷ್ಟ್ರ ನಿರ್ಮಾಣ ಈ ವಿದ್ಯಾಸಂಸ್ಥೆಯ ಕನಸು. ಇದೇ ಹಾದಿಯಲ್ಲಿ ನ್ಯಾಯಾಂಗ ವ್ಯವಸ್ಥೆಯನ್ನೂ ಬಲಪಡಿಸುವ ಭಾಗವಾಗಿ ಆಯೋಜಿಸಿರುವ ಅಣಕು ನ್ಯಾಯಾಲಯ ಸ್ಪರ್ಧೆಯಲ್ಲಿ ನ್ಯಾಯಾಂಗ ಕ್ಷೇತ್ರದ ಗಣ್ಯರು ಪಾಲ್ಗೊಂಡಿರುವುದು ಕಾಲೇಜಿಗೆ ಅವಿಸ್ಮರಣೀಯ ಕ್ಷಣ ಎಂದರು.‘ಲೀಗಲ್ ಸೆಕ್ಷನ್’ ಪುಸ್ತಕ ಬಿಡುಗಡೆಗೊಳಿಸಲಾಯಿತು. ಸರ್ವೋಚ್ಛ ನ್ಯಾಯಾಲಯದ ಹಿರಿಯ ನ್ಯಾಯವಾದಿ ಶೇಖರ್ ಜಿ. ದೇವಸ, ವಿವೇಕಾನಂದ ಕಾನೂನು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಸುರೇಂದ್ರ ಕಿಣಿ, ವಿವೇಕಾನಂದ ಕಾನೂನು ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಪಿ.ಕೆ. ರವೀಂದ್ರ ಇದ್ದರು.ಪ್ರಾಂಶುಪಾಲೆ ಡಾ. ಅಕ್ಷತಾ ಎ.ಪಿ. ಸ್ವಾಗತಿಸಿದರು. ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ. ವಂದಿಸಿದರು. ದಿವ್ಯಾ ದಾಸ್ ನಿರ್ವಹಿಸಿದರು.