ಜಿಸಿಪಿಎಎಸ್ ನಲ್ಲಿ ‘ದ್ವಮ್ದ್ವ’ ಚಲನಚಿತ್ರ ಪ್ರದರ್ಶನ, ಸಂವಾದ

KannadaprabhaNewsNetwork |  
Published : Apr 02, 2024, 01:01 AM IST
ಫಿಲ್ಮ್1 | Kannada Prabha

ಸಾರಾಂಶ

ಚಲನಚಿತ್ರದ ಉದ್ದೇಶ ಲಿಂಗ ಸಂಬಂಧಿ ವಿಷಯಗಳ ಬಗ್ಗೆ ಜನರಿಗೆ ಶಿಕ್ಷಣ ನೀಡುವುದಾಗಿದೆ. ಸಮಾಜಗಳು ಶಿಕ್ಷಣ ಪಡೆಯಬೇಕು.

ಕನ್ನಡಪ್ರಭ ವಾರ್ತೆ ಮಣಿಪಾಲ

‘ದ್ವಮ್ದ್ವ’ ಚಲನಚಿತ್ರದ ಉದ್ದೇಶವು ಲಿಂಗ ಸಂಬಂಧೀ ವಿಷಯಗಳ ಬಗ್ಗೆ ಜನರಿಗೆ ಶಿಕ್ಷಣ ನೀಡುವುದಾಗಿದೆ ಎಂದು ಚಿತ್ರದ ನಿರ್ದೇಶಕ ಕ್ಲಿಂಗ್ ಜಾನ್ಸನ್ ಹೇಳಿದರು.

ಅವರು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (ಜಿಸಿಪಿಎಎಸ್) ಆಶ್ರಯದಲ್ಲಿ ತಾವು ನಿರ್ದೇಶಿಸಿದ ‘ದ್ವಮ್ದ್ವ’ ಚಲನಚಿತ್ರವನ್ನು ಪ್ರದರ್ಶಿಸಿದ ನಂತರ ಸಂವಾದ ನಡೆಸಿದರು.

ಸಾಂಪ್ರದಾಯಿಕ ಸಮಾಜಗಳು ಲಿಂಗ ಸಂಬಂಧೀ ವಿಷಯಗಳ ಕುರಿತು ಪೂರ್ವಾಗ್ರಹ ಹೊಂದಿವೆ. ಲಿಂಗದ ಬಗ್ಗೆ, ಜ್ಞಾನದ ಬೆಳವಣಿಗೆಯೊಂದಿಗೆ, ನಮ್ಮ ದೃಷ್ಟಿಕೋನವು ಬದಲಾಗಬೇಕು ಮತ್ತು ಅದರಿಂದ ಸಮಾಜಗಳು ಶಿಕ್ಷಣ ಪಡೆಯಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಈ ಸಿನೆಮಾ ಲೇಖಕ ಸುಶಾಂತ್ ಅವರ ‘ದೀಪವಿರದ ದಾರಿಯಲ್ಲಿ’ ಕಾದಂಬರಿ ಆಧಾರಿತವಾಗಿದ್ದು, ಯುವ ಯಕ್ಷಗಾನ ಕಲಾವಿದನ ಕಥೆಯ ಮೂಲಕ ಇದು ಲಿಂಗ ಸಂಬಂಧೀ ಸಂಕೀರ್ಣತೆಗಳನ್ನು ತೆರೆದಿಡುತ್ತದೆ. ನನ್ನ ಸ್ನೇಹಿತರು ಮತ್ತು ಸಹಪಾಠಿಗಳ ಮೂಲಕ ಕ್ರೌಡ್ ಫಂಡಿಂಗ್ ಮೂಲಕ ಹಣ ಸಂಗ್ರಹಿಸಿ ಈ ಚಲನಚಿತ್ರವನ್ನು ನಿರ್ಮಿಸಿದ್ದೇನೆ ಎಂದವರು ವಿವರಿಸಿದರು.

ಈಗಾಗಲೇ ಹಲವಾರು ಕಿರುಚಿತ್ರಗಳನ್ನು ನಿರ್ಮಿಸಿದ ಕ್ಲಿಂಗ್ ಜಾನ್ಸನ್ ಅವರ ಮೊದಲ ಪೂರ್ಣಪ್ರಮಾಣದ ಚಲನಚಿತ್ರ ಇದಾಗಿದೆ. ಸ್ವತಃ ಬರಹಗಾರರಾದ ಅವರು ಕಸ್ತೂರ್ಬಾ ಆಸ್ಪತ್ರೆಯಲ್ಲಿ ಅಗ್ನಿಶಾಮಕ ಸುರಕ್ಷತಾ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕಾರ್ಯಕ್ರಮದ ಅತಿಥಿಯಾಗಿದ್ದ ಕಸ್ತೂರ್ಬಾ ಆಸ್ಪತ್ರೆಯ ಯೋಜನಾ ಸಹಾಯ ನಿರ್ದೇಶಕ ಜಿಬು ಥಾಮಸ್, ಚಿತ್ರಕಲೆಯಂತಹ ಕಲೆಗಳ ಅಗತ್ಯ ಮತ್ತು ಅದಕ್ಕೆ ಪ್ರೋತ್ಸಾಹವನ್ನು ಒತ್ತಿ ಹೇಳಿದರು.

ಜಿಸಿಪಿಎಎಸ್ ಮುಖ್ಯಸ್ಥ ಪ್ರೊ. ವರದೇಶ್ ಹಿರೇಗಂಗೆ ಅವರು, ನಿರ್ದೇಶಕರು ಸೂಕ್ಷ್ಮ ವಿಷಯವನ್ನು ಸಂವೇದನಾಶೀಲವಾಗಿ ಚಲನಚಿತ್ರದಲ್ಲಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಸ್ಥಳೀಯ ಭಾಷೆ, ಸ್ಥಳೀಯತೆ ಮತ್ತು ಪಾತ್ರಗಳು ಚಿತ್ರವನ್ನು ಮನಮುಟ್ಟುವಂತೆ ಮಾಡಿದೆ ಎಂದರು.

ಮನಶಾಸ್ತ್ರಜ್ಞೆ ಡಾ.ಜಯಶ್ರೀ ಭಟ್ ಅವರು ಲಿಂಗ ಸಂಬಂಧಿ ಬಿಕ್ಕಟ್ಟಿನಿಂದ ಬಳಲುತ್ತಿರುವವರ ಸೂಕ್ಷ್ಮತೆಗಳನ್ನು ಚಿತ್ರ ಹೊರತಂದಿದೆ ಎಂದು ಶ್ಲಾಘಿಸಿದರು.

ದ್ವಮ್ದ್ವ ಚಿತ್ರದ ಸಹನಿರ್ದೇಶಕ ಸಿತೇಶ್ ಸಿ. ಗೋವಿಂದ್ (ಸಹ ನಿರ್ದೇಶಕ), ಕಲಾವಿದರಾದ ರಾಜೇಂದ್ರ ನಾಯಕ್, ಬೆನ್ಸು ಪೀಟರ್, ಅಭಿಲಾಷ್ ಶೆಟ್ಟಿ, ಪ್ರಭಾಕರ ಕುಂದರ್, ಭಾಸ್ಕರ್ ಮಣಿಪಾಲ್, ಆಡನ್ ಕ್ಲಿಯೋನ್, ಗಣೇಶ್, ರಾಧಿಕಾ ಭಟ್, ಭಾರತಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಅವರನ್ನು ಅಭಿನಂದಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಂಗಡಗಿ, ನಾಲತವಾಡಗೆ ಪಿಯು ಕಾಲೇಜು ಪರಿಶೀಲಿಸಿ ಮಂಜೂರು
ಲಗಾನಿ ಹೆಸರಿನಲ್ಲಿ ಕಬ್ಬು ಬೆಳೆಗಾರರ ಲೂಟಿ