- ಶಿವನಕೆರೆ ಬಸವಲಿಂಗಪ್ಪ ಕಳಿಸಿದ್ದ ಫೋಟೋ ಮಾಹಿತಿಗೆ ಸ್ಪಂದಿಸಿದ ಜಿಲ್ಲಾಡಳಿತ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿ ಸಮೀಪದ ಎಸ್‌ಜೆಎಂ ನಗರದ ನಿವಾಸಿ ಹುಲಿಗೆಮ್ಮ ತನ್ನ ಕುಟುಂಬದ ನಾಲ್ವರು ಸದಸ್ಯರೊಂದಿಗೆ ಎಂ.ಸಿ. ಕಾಲನಿ ಬಿ ಬ್ಲಾಕ್‌ನ ಹಿರಿಯ ನಾಗರೀಕರ ಪಾರ್ಕ್‌ನಲ್ಲಿ ನಾಲ್ಕೈದು ದಿನಗಳಿಂದ ಹಗಲು, ರಾತ್ರಿ ದಿನದೂಡಿದ್ದರು.
ಹಿರಿಯ ನಾಗರೀಕರ ಪಾರ್ಕ್‌ಗೆ ನಿತ್ಯ ವಾಯು ವಿಹಾರಕ್ಕೆ ಹೋಗುವ ಸರ್ವೋದಯ ಸಮುದಾಯದ ಶಿವನಕೆರೆ ಬಸವಲಿಂಗಪ್ಪ ಮತ್ತಿತರರು 4 ದಿನಗಳಿಂದ ಹುಲಿಗೆಮ್ಮ ಮತ್ತು ಕುಟುಂಬದವರನ್ನು ಮಾತನಾಡಿಸಿ, ಕಷ್ಟ ಕೇಳಿದ್ದಾರೆ. ಆಗ ಮೈಕ್ರೋ ಫೈನಾನ್ಸ್‌ನವರು, ಇತರೆಡೆ ತಮಗೆ ಸಾಲ ಕೊಟ್ಟವರ ಕಿರುಕುಳ ತಾಳದೇ ಮನೆ ಬಿಟ್ಟು ಬಂದು, ಪಾರ್ಕ್‌ನಲ್ಲಿ ವಾಸವಿರುವ ವಿಚಾರ ಗೊತ್ತಾಗಿದೆ.ಬಳಿಕ ಹುಲಿಗೆಮ್ಮ ಮತ್ತು ಕುಟುಂಬದ ಪರಿಸ್ಥಿತಿಯನ್ನು ಶಿವನಕೆರೆ ಬಸವಲಿಂಗಪ್ಪ ಅವರು ಫೋಟೋ ಸಮೇತ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅವರಿಗೆ ಕಳಿಸಿ, ಈ ವಿಚಾರವಾಗಿ ಸಹಾಯ ಮಾಡುವಂತೆ ಮನವಿ ಮಾಡಿದ್ದರು. ಅಲ್ಲದೇ, ಹುಲಿಗೆಮ್ಮನ ಕುಟುಂಬಕ್ಕೆ ಕೈಲಾದ ನೆರವನ್ನು ನೀಡಿ, ಬಸವಲಿಂಗಪ್ಪ ಮಾನವೀಯತೆ ಮೆರೆದಿದ್ದರು.
ಮಾಹಿತಿ ತಿಳಿದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಸಂಬಂಧಿಸಿದ ಅಧಿಕಾರಿಗಳನ್ನು ಎಂಸಿಸಿ ಕಾಲನಿ ಬಿ ಬ್ಲಾಕ್‌ನ ಹಿರಿಯ ನಾಗರೀಕರ ಉದ್ಯಾನವನಕ್ಕೆ ಕಳಿಸಿದರು. ಹುಲಿಗೆಮ್ಮನ ಕುಟುಂಬವನ್ನು ಭೇಟಿ ಮಾಡಿ, ಸೂಕ್ತ ಪರಿಹಾರ ಒದಗಿಸಲು ಸೂಚನೆ ನೀಡಿದ್ದರು. ಅನಂತರ ಶಿವನಕೆರೆ ಬಸವಲಿಂಗಪ್ಪ ಅವರಿಗೆ ಹುಲಿಗೆಮ್ಮನ ಕುಟುಂಬಕ್ಕೆ ಕೈಲಾದ ನೆರವು ನೀಡಿ, ಸೂಕ್ತ ವ್ಯವಸ್ಥೆ ಮಾಡುವುದಾಗಿ ಡಿಸಿ ಪ್ರತಿಕ್ರಿಯಿಸಿದರು.ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಅವರ ಮಾನವೀಯ ಸ್ಪಂದನೆ ಹಾಗೂ ಕರ್ತವ್ಯಪ್ರಜ್ಞೆಯನ್ನು ಶಿವನಕೆರೆ ಬಸವಲಿಂಗಪ್ಪ ಶ್ಲಾಘಿಸಿದ್ದಾರೆ.
- - - -24ಕೆಡಿವಿಜಿ5: ದಾವಣಗೆರೆ ಎಂಸಿಸಿ ಬಿ ಬ್ಲಾಕ್‌ನ ಪಾರ್ಕ್‌ನಲ್ಲಿ ಮೈಕ್ರೋ ಫೈನಾನ್ಸ್, ಸಾಲ ಕೊಟ್ಟವರಿಗೆ ಹೆದರಿ ನಾಲ್ಕು ದಿನದಿಂದ ಹಗಲು-ರಾತ್ರಿ ತಂಗಿರುವ ಹುಲಿಗೆಮ್ಮನ ಕುಟುಂಬ ಸದಸ್ಯರು, ಮಕ್ಕಳು. -24ಕೆಡಿವಿಜಿ6: ದಾವಣಗೆರೆ ಎಂಸಿಸಿ ಬಿ ಬ್ಲಾಕ್‌ನ ಪಾರ್ಕ್‌ನಲ್ಲಿ ಮೈಕ್ರೋ ಫೈನಾನ್ಸ್, ಸಾಲ ಕೊಟ್ಟವರಿಗೆ ಹೆದರಿ 4 ದಿನದಿಂದ ಹಗಲು-ರಾತ್ರಿ ನೆಲೆಸಿದ್ದ ಹುಲಿಗೆಮ್ಮನ ಕುಟುಂಬ ಸದಸ್ಯರು, ಮಕ್ಕಳಿಗೆ ಅಧಿಕಾರಿ, ಪೊಲೀಸ್ ಸಿಬ್ಬಂದಿ ಧೈರ್ಯ ಹೇಳಿದರು.