-ಅಧಿಕಾರಿಗಳಿಗೆ ಶಾಸಕ ಶರಣಗೌಡ ಕಂದಕೂರ ಸೂಚನೆ । ಕಷ್ಟ ಹೇಳಿಕೊಂಡ ಬಂದ ಜನರಿಗೆ ಸ್ಪಂದಿಸುವಂತೆ ಕಿವಿಮಾತು
ಕನ್ನಡಪ್ರಭ ವಾರ್ತೆ ಯಾದಗಿರಿ
ಜನರು ನಾಡಕಚೇರಿಗೆ ತಮ್ಮ ಕಷ್ಟಗಳನ್ನು ಹೇಳಿಕೊಂಡು ಸಮಸ್ಯೆಗಳನ್ನು ತೆಗೆದುಕೊಂಡು ಬಂದಾಗ ಅವರಿಗೆ ಸೂಕ್ತವಾಗಿ ಸ್ಪಂದಿಸಬೇಕು. ಕೆಲಸ ಮಾಡಿ ಕ್ಷೇತ್ರದ ಜನರಿಗೆ ತೊಂದರೆ ಕೊಡುವ ಕೆಲಸ ಮಾಡಬೇಡಿ ಎಂದು ಶಾಸಕ ಶರಣಗೌಡ ಕಂದಕೂರು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸಲಹೆ ನೀಡಿದರು.ಜಿಲ್ಲೆಯ ಬಳಿಚಕ್ರ ಗ್ರಾಮದಲ್ಲಿ 60 ಲಕ್ಷ ರು.ಗಳು ವೆಚ್ಚದಲ್ಲಿ ನಿರ್ಮಿಸಲಾದ ನೂತನ ನಾಡಕಚೇರಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಕಂದಾಯ ಇಲಾಖೆಯು ಜನಸಾಮಾನ್ಯರ, ರೈತ ಸ್ನೇಹಿ ಇಲಾಖೆಯಾಗಿದೆ. ಈ ಇಲಾಖೆ ಸೇವೆಗಳ ಸುಧಾರಣೆಗೆ ಸರಕಾರ ಆದ್ಯತೆ ನೀಡಿದೆ. ಬಳಿಚಕ್ರ ನಾಡಕಚೇರಿಗೆ ಅತ್ಯುತ್ತಮವಾದ ನೂತನ ಕಟ್ಟಡ ನಿರ್ಮಾಣ ಮಾಡಿ ಜನಸೇವೆಗೆ ಸಮರ್ಪಿಸಲಾಗಿದೆ. ಅರ್ಜಿ ಹಿಡಿದು ಬರುವ ನಾಗರಿಕರು ಬಿಸಿಲಲ್ಲಿ ನಿಲ್ಲಬಾರದು ಎನ್ನುವ ಕಾರಣಕ್ಕೆ ತಂಪಾದ ನೆರಳು ಸಿಗಲಿ ಎನ್ನುವ ಸದುದ್ದೇಶದಿಂದ ಸರತಿ ನಿಲ್ಲುವ ಜಾಗಕ್ಕೆ ಕೋಣೆ ನಿರ್ಮಾಣ ಮಾಡಲಾಗಿರುವುದು ಒಳ್ಳೆಯ ಸಂಗತಿ ಎಂದರು.
ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ ಮಾತನಾಡಿ, ಕಂದಾಯ ಇಲಾಖೆ ಎಲ್ಲರಿಗೂ ಸೇವೆ ನೀಡುತ್ತದೆ. ಕೆಲಸದ ಒತ್ತಡವಿದ್ದರೂ ಕಂದಾಯ ಇಲಾಖೆ ಅಧಿಕಾರಿ, ಸಿಬ್ಬಂದಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿ, ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಜಿಲ್ಲೆಯ ಎಲ್ಲರಿಗೂ ಜನಸ್ನೇಹಿ ಆಡಳಿತ ನೀಡಲು ಎಲ್ಲರೂ ಬದ್ಧವಾಗಿದ್ದು, ಸಾರ್ವಜನಿಕರು ಸಹಕಾರವು ಮುಖ್ಯವಾಗಿದೆ ಎಂದರು.ಈ ಸಂದರ್ಭದಲ್ಲಿ ಬಳಿಚಕ್ರ ಗ್ರಾಮಸ್ಥರು ಶಾಸಕ ಶರಣಗೌಡ ಕಂದಕೂರು ಅವರನ್ನು ಸನ್ಮಾನಿಸಿ, ಅಹವಾಲುಗಳನ್ನು ಸಲ್ಲಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಕಟಕಟಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ತಹಸೀಲ್ದಾರ್, ಕಂದಾಯ ಇಲಾಖೆ ಅಧಿಕಾರಿಗಳು, ನಿರ್ಮಿತಿ ಕೇಂದ್ರದ ಅಧಿಕಾರಿಗಳು ಇದ್ದರು.---ಬಾಕ್ಸ್ ---
ಭಾಷಣ ಮಾಡಲು ಬಂದಿಲ್ಲ, ಅನುದಾನ ತೆಗೆದುಕೊಂಡು ಬಂದಿರುವೆನಾನು ಭಾಷಣ ಮಾಡ್ಲಿಕ್ಕೆ ಬಂದಿಲ್ಲ, ನಿಮ್ಮೂರಿಗೆ ಬರುವಷ್ಟರಲ್ಲಿ ಕಾಮಗಾರಿಗೆ ಅನುದಾನ ತೆಗೆದುಕೊಂಡು ಬಂದಿದ್ದೇನೆ ಎಂದು ಶಾಸಕ ಶರಣಗೌಡ ಕಂದಕೂರು ಅವರು ಹೇಳಿದರು. ಜಿಲ್ಲೆಯ ಬಳಿಚಕ್ರ ಗ್ರಾಮದಲ್ಲಿ ನಡೆದ ನೂತನ ನಾಡಕಚೇರಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಬಳಿಚಕ್ರ ಗ್ರಾಮಸ್ಥರು ಬಹಳ ದಿನಗಳಿಂದ ಕೇಳುತ್ತಿರುವ ನಿಮ್ಮೂರಿನ ಮೂರು ಮಾರ್ಗ ರಸ್ತೆಗಳನ್ನು ಅಭಿವೃದ್ಧಿಪಡಿಸಲು, ಸುಮಾರು 70 ಲಕ್ಷ ಅನುದಾನವನ್ನು ಈಗಾಗಲೇ ಬಿಡುಗಡೆಗೊಳಿಸಿದ್ದೇನೆ. ನೀವು ಸಹಕಾರ ನೀಡಿ ರಸ್ತೆ ಅಭಿವೃದ್ಧಿಗೆ ಸ್ಪಂದಿಸಬೇಕು. ಅದರ ಜೊತೆಗೆ ಕುಡಿಯುವ ನೀರಿಗಾಗಿ ಎಷ್ಟು ಹಣಬೇಕಾದರೂ ಶಾಸಕರ ಅನುದಾನದಲ್ಲಿ ನೀಡುತ್ತೇನೆ. ಗ್ರಾಮ ಪಂಚಾಯಿತಿಯವರು ಕೂಡಲೇ ಕೆಲಸ ಆರಂಭಿಸಬೇಕು. ಈಗಾಗಲೇ ಬೇಸಿಗೆ ಪ್ರಾರಂಭವಾಗಿದ್ದು, ಕುಡಿಯುವ ನೀರಿನ ವಿಷಯದಲ್ಲಿ ಜನರಿಗೆ ತೊಂದರೆಯಾದರೆ ಸಹಿಸುವುದಿಲ್ಲ ಎಂದರು.-----ಫೋಟೊ: ಬಳಿಚಕ್ರ ಗ್ರಾಮದಲ್ಲಿ 60 ಲಕ್ಷ ರು.ಗಳು ವೆಚ್ಚದಲ್ಲಿ ನಿರ್ಮಿಸಲಾದ ನೂತನ ನಾಡಕಚೇರಿಯನ್ನು ಲೋಕಾರ್ಪಣೆಗೊಳಿಸಿ ಶಾಸಕ ಕಂದಕೂರ ಮಾತನಾಡಿದರು.
-24ವೈಡಿಆರ್11-----
ಫೋಟೊ:ಬಳಿಚಕ್ರ ಗ್ರಾಮಸ್ಥರು ಶಾಸಕ ಶರಣಗೌಡ ಕಂದಕೂರು ಅವರನ್ನು ಸನ್ಮಾನಿಸಿ, ಅಹವಾಲುಗಳನ್ನು ಸಲ್ಲಿಸಿದರು.
24ವೈಡಿಆರ್12