ಕನ್ನಡಪ್ರಭ ವಾರ್ತೆ ಶಿರಾ ಶಿರಾ ನಗರಸಭಾ ವ್ಯಾಪ್ತಿಯಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಶೀಘ್ರವಾಗಿ ಮಾಡಿಕೊಡುವಂತೆ ಎಲ್ಲಾ ಅಧಿಕಾರಿ ಸಿಬ್ಬಂದಿಗಳಿಗೆ ಸೂಚಿಸಿದ್ದು, ಅ. 2ಕ್ಕೆ ಮನೆ ಬಾಗಿಲಿಗೆ ಈ-ಸ್ವತ್ತು ನೀಡುವ ಕಾರ್ಯಕ್ಕೆ ಚಾಲನೆ ನೀಡಲಿದ್ದೇವೆ. ಹಾಗೂ ಶೀಘ್ರದಲ್ಲಿ ಪೌರ ಕಾರ್ಮಿಕರಿಗೆ ನಿವೇಶನ ನೀಡುತ್ತೇವೆ ಎಂದು ನಗರಸಭಾ ನೂತನ ಅಧ್ಯಕ್ಷ ಜೀಷಾನ್ ಮೊಹಮ್ಮದ್ ಹೇಳಿದರು.ಅವರು ಸೋಮವಾರ ನಗರಸಭಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದರು. ಇಂದು ಪೌರಕಾರ್ಮಿಕರ ದಿನಾಚರಣೆಯ ಪ್ರಯುಕ್ತ ಅಧಿಕಾರ ಸ್ವೀಕರಿಸಿದ್ದೇನೆ. ಶಿರಾ ನಗರವನ್ನು ಸ್ವಚ್ಛ ಸುಂದರ ನಗರವನ್ನಾಗಿಸಲು ಬದ್ಧನಾಗಿದ್ದು, ಎಲ್ಲಾ 31 ಸದಸ್ಯರು ಅಭಿವೃದ್ಧಿಗೆ ಕೈಜೋಡಿಸಬೇಕು. ದೂರು ದಾಖಲಿಸಲು ಶೀಘ್ರದಲ್ಲೇ ಸಹಾಯವಾಣಿ ಪ್ರಾರಂಭಿಸುತ್ತೇವೆ ಎಂದರು.ನೂತನ ನಗರಸಭಾ ಅಧ್ಯಕ್ಷರಿಗೆ ಶುಭಾಷಯ ಕೋರಿ ಮಾತನಾಡಿದ ಶಾಸಕ ಡಾ.ಟಿ.ಬಿ.ಜಯಚಂದ್ರ ಎಲ್ಲಾ ಜನಪ್ರತಿನಿಧಿಗಳೂ ಕೂಡ ಜನಸೇವಕರು, ಜನರ ಸೇವೆ ಮಾಡಲು ನಮ್ಮನ್ನು ಆಯ್ಕೆಮಾಡಿದ್ದಾರೆ. ಜನರಿಗೆ ಒಳ್ಳೆಯ ಕೆಲಸ ಮಾಡಬೇಕು ಎಂದರು.