ನಾಗಮಂಗಲ ತಾಲೂಕು ಕಚೇರಿ ಮೇಲೆ ಇ.ಡಿ. ದಾಳಿ

KannadaprabhaNewsNetwork |  
Published : Jan 24, 2026, 02:30 AM IST
೨೩ಕೆಎಂಎನ್‌ಡಿ-7 ನಾಗಮಂಗಲ ತಾಲೂಕು ಕಚೇರಿ ಎದುರು ನಿಂತಿರುವ ಜಾರಿ ನಿರ್ದೇಶನಾಲಯ ಅಧಿಕಾರಿಗಳ ಕಾರು. | Kannada Prabha

ಸಾರಾಂಶ

ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ ವೇಳೆ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಪರಭಾರೆ ಮಾಡಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ೨೦೦ ಕೋಟಿ ರು.ನಷ್ಟ ಉಂಟಾಗಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಿದ್ದರು. ಈ ಹಣಕಾಸಿನ ವರ್ಗಾವಣೆ ಕುರಿತಂತೆ ಮಾಹಿತಿ ಸಂಗ್ರಹಿಸಲು ಹಾಗೂ ದಾಖಲೆಗಳ ಪರಿಶೀಲನೆಗಾಗಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆಗಮಿಸಿದ್ದರು ಎಂದು ತಿಳಿದುಬಂದಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಕಬಳಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗಮಂಗಲ ತಾಲೂಕು ಕಚೇರಿಗೆ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿ ಪರಿಶೀಲನೆ ನಡೆಸಿದರು.

ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ ವೇಳೆ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಪರಭಾರೆ ಮಾಡಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ೨೦೦ ಕೋಟಿ ರು.ನಷ್ಟ ಉಂಟಾಗಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಿದ್ದರು. ಈ ಹಣಕಾಸಿನ ವರ್ಗಾವಣೆ ಕುರಿತಂತೆ ಮಾಹಿತಿ ಸಂಗ್ರಹಿಸಲು ಹಾಗೂ ದಾಖಲೆಗಳ ಪರಿಶೀಲನೆಗಾಗಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆಗಮಿಸಿದ್ದರು ಎಂದು ತಿಳಿದುಬಂದಿದೆ.

ಲೋಕಾಯುಕ್ತ ಅಧಿಕಾರಿಗಳ ದಾಳಿ ನಡೆಸಿದ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿರುವುದು ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. ಈ ಪ್ರಕರಣದಲ್ಲಿ ಹಣಕಾಸಿನ ಹರಿದಾಟ ಯಾವ ರೀತಿ ನಡೆದಿದೆ, ಯಾರ್ಯಾರ ನಡುವೆ ನಡೆದಿದೆ, ತಾಲೂಕು ಕಚೇರಿ ನೌಕರರು, ಸಿಬ್ಬಂದಿ ಹಾಗೂ ಹೊರಗಿನ ಖಾಸಗಿ ವ್ಯಕ್ತಿಗಳಲ್ಲದೆ ಪ್ರಭಾವಿ ರಾಜಕಾರಣಿಗಳ ನಡುವೆಯೂ ಹಣಕಾಸಿನ ವಹಿವಾಟು ನಡೆದಿರಬಹುದೇ ಎಂಬ ಬಗ್ಗೆಯೂ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ ಎನ್ನಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ದಾಖಲೆ ಪತ್ರಗಳನ್ನು ಕೊಂಡೊಯ್ದಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹೆಚ್ಚುವರಿ ಮಾಹಿತಿಯನ್ನು ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಹಾಗೂ ಪೊಲೀಸ್ ತನಿಖಾಧಿಕಾರಿಯಿಂದಲೂ ಸಂಗ್ರಹಿಸಿದ್ದಾರೆ. ನೂರಾರು ಕೋಟಿ ರು. ಸರ್ಕಾರದ ಬೊಕ್ಕಸಕ್ಕೆ ನಷ್ಟಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳೇ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುವ ಸಾಧ್ಯತೆಗಳಿವೆ. ಪ್ರಕರಣದಲ್ಲಿ ಭಾಗಿಯಾಗಿರುವವರನ್ನು ಬಂಧಿಸುವ, ವಿಚಾರಣೆಗೊಳಪಡಿಸುವ ಅಧಿಕಾರವೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಇದೆ ಎಂದು ಹೇಳಲಾಗುತ್ತಿದೆ.

ಸಾರ್ವಜನಿಕರು ನೀಡಿದ್ದ ದೂರಿನನ್ವಯ ಜ.೧೩ರಂದು ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ತಾಲೂಕು ಕಚೇರಿ ಸೇರಿ ಏಳು ಸ್ಥಳಗಳ ಮೇಲೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಸಾಗುವಳಿ ವಿತರಣಾ ವಹಿಗಳಲ್ಲಿ ತಿದ್ದುಪಡಿ, ಸರ್ಕಾರಿ ದಾಖಲೆಗಳ ತಿದ್ದುಪಡಿ, ಹೆಚ್ಚುವರಿ ಫಲಾನುಭವಿಗಳ ಹೆಸರು ಅಕ್ರಮ ಸೇರ್ಪಡೆ, ಅಕ್ರಮವಾಗಿ ಸರ್ಕಾರಿ ಜಮೀನು ಮಂಜೂರು, ತಾಲೂಕು ಕಚೇರಿಯ ದಾಖಲೆಗಳ ಕೊಠಡಿಗಳಲ್ಲಿರಬೇಕಾದ ಅಸಲು ಹಕ್ಕು ಬದಲಾವಣೆ ರಿಜಿಸ್ಟರ್‌ಗಳು ಸಿಬ್ಬಂದಿ ಮನೆಯಲ್ಲಿ ಪತ್ತೆ, ನಕಲಿ ಸಾಗುವಳಿ ಚೀಟಿಗಳ ಸೃಷ್ಟಿ ಸೇರಿದಂತೆ ಹಲವು ಅಕ್ರಮಗಳು ಬಯಲಿಗೆ ಬಂದಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ತಾಲೂಕು ಕಚೇರಿಯ ನೌಕರರು, ಸಿಬ್ಬಂದಿಯನ್ನು ಪೊಲೀಸರ ವಶಕ್ಕೆ ಒಪ್ಪಿಸಿ, ಒಟ್ಟು ಹತ್ತು ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಈ ಪ್ರಕರಣದ ತನಿಖಾಧಿಕಾರಿಯನ್ನಾಗಿ ನಾಗಮಂಗಲ ಡಿವೈಎಸ್ಪಿ ಬಿ.ಚಲುವರಾಜು ಅವರನ್ನು ನೇಮಿಸಲಾಗಿತ್ತು.

ಜಿಲ್ಲೆಗೆ ಮೊದಲ ಬಾರಿ ಇ.ಡಿ. ದಾಳಿ

ನಾಗಮಂಗಲ ತಾಲೂಕು ಕಚೇರಿ ಮೇಲೆ ಇ.ಡಿ. ನಡೆಸಿರುವ ದಾಳಿ ಜಿಲ್ಲೆಯ ಮೊಟ್ಟಮೊದಲ ಪ್ರಕರಣವಾಗಿದೆ. ಈ ಹಿಂದೆ ಜಿಲ್ಲೆಯ ಕೆಲವು ಪ್ರಕರಣಗಳು ಜಾರಿ ನಿರ್ದೇಶನಾಲಯದ ವ್ಯಾಪ್ತಿಗೆ ವರ್ಗಾವಣೆಯಾಗಿದ್ದು ಇದೆ. ಆದರೆ, ಅಧಿಕಾರಿಗಳು ಸ್ವತಃ ದಾಳಿ ನಡೆಸಿ ತನಿಖೆಗಿಳಿದಿರುವ ಮೊದಲ ಪ್ರಕರಣ ಇದಾಗಿದೆ.

ನೂರಾರು ಕೋಟಿ ರು. ಮೌಲ್ಯದ ಆರ್ಥಿಕ ನಷ್ಟವಾಗಿರುವುದನ್ನು ಲೋಕಾಯುಕ್ತ ಅಧಿಕಾರಿಗಳು ವರದಿಯಲ್ಲಿ ಉಲ್ಲೇಖಿಸಿದ್ದು ಹಾಗೂ ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿ ಮಾಹಿತಿಯನ್ನು ಆಧರಿಸಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ತಂಡ ತನಿಖೆಗೆ ಆಗಮಿಸಿತ್ತು. ಇದರಿಂದ ಸರ್ಕಾರಿ ಭೂಮಿ ಅಕ್ರಮ ಪರಭಾರೆ ಪ್ರಕರಣ ಹೊಸ ತಿರುವನ್ನು ಪಡೆದುಕೊಂಡಂತಾಗಿದೆ.

ದಾಳಿ ಕುರಿತಂತೆ ದಿಕ್ಕುತಪ್ಪಿಸುವ ಯತ್ನ

ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಾಲೂಕು ಕಚೇರಿ ಮೇಲೆ ದಾಳಿ ನಡೆಸಿರುವ ವಿಷಯ ತಿಳಿದು ಮಾಹಿತಿ ಸಂಗ್ರಹಿಸಲು ತೆರಳಿದ ಸುದ್ದಿಗಾರರಿಗೆ ಡಿವೈಎಸ್ಪಿ ಚೆಲುವರಾಜು ಅವರು ದಿಕ್ಕುತಪ್ಪಿಸಲು ಯತ್ನಿಸಿದರು. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆಗಮಿಸಿಲ್ಲ. ಪೊಲೀಸ್ ಅಧಿಕಾರಿಗಳು ಮಾತ್ರ ತನಿಖೆ ನಡೆಸುತ್ತಿದ್ದಾರೆ ಎಂದು ಮಾಹಿತಿ ಬಿಟ್ಟುಕೊಡಲು ಹಿಂದೇಟು ಹಾಕಿದರು. ಜಾರಿ ನಿರ್ದೇಶನಾಲಯದ ಅಧಿಕಾರಿಗಳ ತಂಡ ಆಗಮಿಸಿರುವ ವಿಷಯ ತಿಳಿದು ಲೋಕಾಯುಕ್ತ ಪೊಲೀಸರೂ ಕೂಡ ತಾಲೂಕು ಕಚೇರಿಗೆ ತೆರಳಿ ತನಿಖಾ ಸಮಯದಲ್ಲಿ ತಾವು ಸಂಗ್ರಹಿಸಿದ್ದ ಮಾಹಿತಿ, ದಾಖಲೆಗಳನ್ನು ನೀಡಿ ಇ.ಡಿ. ಅಧಿಕಾರಿಗಳ ತಂಡದ ತನಿಖೆಗೆ ಸಹಕರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣಕ್ಕೆ ಸಿದ್ಧಗಂಗಾ ಮಠದ ಕೊಡುಗೆ ಅನನ್ಯ
ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರ ಹಿತ ಕಾಪಾಡಿ