ಗ್ರೀಷ್ಮ ಡೇ ಕೇರ್ ಸೆಂಟರ್ ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವದಲ್ಲಿ ಸೀಮಾ ಹೇಳಿಕೆಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಸಮರ್ಥ ಹಾಗೂ ಸದೃಢ ಭಾರತ ದೇಶದ ನಿರ್ಮಾಣಕ್ಕಾಗಿ ನಮ್ಮ ಮಕ್ಕಳಿಗೆ ಬಾಲ್ಯದಲ್ಲಿ ಉತ್ತಮ ಶಿಕ್ಷಣವು ಅತ್ಯಂತ ಮಹತ್ವದ್ದಾಗಿದೆ. ಉತ್ತಮ ಪೂರ್ವ ಪ್ರಾಥಮಿಕ ಶಿಕ್ಷಣವು ಸದೃಢ ಭಾರತ ನಿರ್ಮಾಣದ ಬುನಾದಿಯಾಗಿದೆ. ಇದು ಮಕ್ಕಳ ಮತ್ತು ದೇಶದ ಭವಿಷ್ಯದ ಅಡಿಪಾಯವನ್ನು ನಿರ್ಮಿಸುತ್ತದೆ ಎಂದು ಗ್ರೀಷ್ಮ ಡೇ ಕೇರ್ ಸೆಂಟರ್ ಆಡಳಿತ ಅಧಿಕಾರಿ ಸೀಮಾ ಅಭಿಪ್ರಾಯಪಟ್ಟರು.ನಗರದ ಮಲ್ಲಯ್ಯ ಬಡಾವಣೆಯ ಗ್ರೀಷ್ಮ ಡೇ ಕೇರ್ ಸೆಂಟರ್ ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವದ ಅಂಗವಾಗಿ ತರಾಸು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಪೂರ್ವ ಪ್ರಾಥಮಿಕ ಶಿಕ್ಷಣವು ಮಕ್ಕಳನ್ನು ಜವಾಬ್ದಾರಿಯುತ ಮತ್ತು ಸಕ್ರಿಯ ನಾಗರಿಕರನ್ನಾಗಿ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ಮದಕರಿಪುರ ಸರ್ಕಾರಿ ಶಾಲಾ ಶಿಕ್ಷಕಿ ನಾಗಲತಾ ಮಾತನಾಡಿ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಕಲಿಸುವುದು ಇಂದಿನ ಅವಶ್ಯವಾಗಿದೆ. ಶಿಕ್ಷಣದಿಂದ ಮಕ್ಕಳು ಅಕ್ಷರಸ್ಥರಾಗಬಹುದು, ಜ್ಞಾನ ಪಡೆಯಬಹುದು, ಉದ್ಯೋಗ ಪಡೆಯಬಹುದು ಆದರೆ ಸಂಸ್ಕಾರವಿಲ್ಲದಿದ್ದರೆ ಆ ಜ್ಞಾನವನ್ನು ಸಮಾಜಕ್ಕೆ ಒಳ್ಳೆಯದಕ್ಕಾಗಿ ಬಳಸಲು ಸಾಧ್ಯವಿಲ್ಲ. ಸಂಸ್ಕಾರವು ನೈತಿಕ ಮೌಲ್ಯಗಳನ್ನು, ಸದಾಚಾರವನ್ನು, ದೊಡ್ಡವರನ್ನು ಗೌರವಿಸುವ ಗುಣವನ್ನು, ಸತ್ಯ ನುಡಿಯುವ ಮತ್ತು ನ್ಯಾಯಯುತವಾಗಿರುವಂತಹ ವಿಷಯಗಳನ್ನು ಕಲಿಸುತ್ತದೆ ಎಂದರು.ಮಕ್ಕಳಿಗೆ ಸಂಸ್ಕಾರವನ್ನು ಕಲಿಸಲು ಹಲವಾರು ಮಾರ್ಗಗಳಿವೆ. ತಂದೆ ತಾಯಿ ಮತ್ತು ಹಿರಿಯರ ನಡವಳಿಕೆ ತಮ್ಮ ಮಕ್ಕಳ ಮುಂದೆ ಉತ್ತಮ ಉದಾಹರಣೆಯಾಗಿರಬೇಕು. ಅವರು ಹೇಗೆ ನಡೆದುಕೊಳ್ಳುತ್ತಾರೆ, ಮಾತನಾಡುತ್ತಾರೆ, ಇತರರೊಂದಿಗೆ ಹೇಗೆ ವ್ಯವಹರಿಸುತ್ತಾರೆ ಎಂಬುದನ್ನು ಮಕ್ಕಳು ಗಮನಿಸುತ್ತಾರೆ ಮತ್ತು ಅನುಕರಿಸುತ್ತಾರೆ. ಶಾಲೆಗಳಲ್ಲಿ ಪಠ್ಯದ ಜೊತೆಗೆ ನೈತಿಕ ಶಿಕ್ಷಣವನ್ನು ನೀಡುವ ಮೂಲಕ, ಕಥೆಗಳ ಮೂಲಕ ಮಕ್ಕಳಿಗೆ ಉತ್ತಮ ಮೌಲ್ಯಗಳನ್ನು ತಿಳಿಸಬಹುದು. ಮಕ್ಕಳು ಸಮಾಜದಲ್ಲಿನ ಒಳ್ಳೆಯ ಮತ್ತು ಕೆಟ್ಟ ಸಂಗತಿಗಳನ್ನು ನೋಡುವ ಮೂಲಕ ಕಲಿಯುತ್ತಾರೆ.ಆದ್ದರಿಂದ ಸಮಾಜದಲ್ಲಿ ಉತ್ತಮ ವಾತಾವರಣವನ್ನು ನಿರ್ಮಿಸುವುದು ಅವಶ್ಯಕ.ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ನೀಡುವುದರಿಂದ ಅವರು ಉತ್ತಮ ವ್ಯಕ್ತಿಗಳಾಗಿ ಬೆಳೆಯುತ್ತಾರೆ ಮತ್ತು ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡುತ್ತಾರೆ ಎಂದರು.
ಈ ಸಂದರ್ಭದಲ್ಲಿ ಜ್ಞಾನಸೌರಭ ವಿದ್ಯಾ ಸಂಸ್ಥೆಯ ಅಧ್ಯಕ್ಷ ಟಿ ಸಿದ್ದಲಿಂಗಪ್ಪ, ಆಯುರ್ವೇದ ಚಿಕಿತ್ಸಕ ಡಾ.ಅಶ್ವಿನಿ ನಟರಾಜ್, ಡಾ. ರುದ್ರೇಶ್, ಪದ್ಮ ಮಾತಾಜಿ, ಪವಿತ್ರ,ರಂಜಿತಾ ಮುಂತಾದವರು ಉಪಸ್ಥರಿದ್ದರು. ವಿದ್ಯಾಸಂಸ್ಥೆಯ ಪುಟ್ಟ ಮಕ್ಕಳು ಪ್ರಸ್ತುತಪಡಿಸಿದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಕಣ್ಮನ ಸೆಳೆದವು.