ಕನ್ನಡಪ್ರಭ ವಾರ್ತೆ ರಾಮನಗರಪುರಸಭೆ ಅಧ್ಯಕ್ಷ ಹರಿಪ್ರಸಾದ್ ಮತ್ತು ವಿಪಕ್ಷ ನಾಯಕ ಸಿ.ಉಮೇಶ್ ನೇತೃತ್ವದ ತಂಡ ಪಕ್ಷಬೇಧ ಮರೆತು ಬುಧವಾರ ಬೆಳ್ಳಂಬೆಳಗ್ಗೆ ಜೆಸಿಬಿಗಳನ್ನು ಬಳಸಿ ಬಿಡದಿ ಪಟ್ಟಣದ ಸರ್ಕಾರಿ ಜಾಗ ಹಾಗೂ ಮುಖ್ಯರಸ್ತೆಯ ಫುಟ್ ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿತು.ಬಿಜಿಎಸ್ ವೃತ್ತದಿಂದ ರೇಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿನ ಫುಟ್ ಪಾತ್ ಗಳನ್ನು ಒತ್ತುವರಿ ಮಾಡಿಕೊಂಡು ವರ್ತಕರು ಅಂಗಡಿಗಳನ್ನು ವಿಸ್ತರಿಸಿಕೊಂಡಿದ್ದರು. ಅಲ್ಲದೆ, ಸಣ್ಣ ಅಂಗಡಿಗಳನ್ನಿಟ್ಟು ಅದರಿಂದಲೂ ಆದಾಯ ಗಳಿಸುತ್ತಿದ್ದರು. ಇದರಿಂದ ಪಾದಚಾರಿಗಳು ಹಾಗೂ ವಾಹನ ಸವಾರರ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಪುರಸಭೆ ಒತ್ತುವರಿ ತೆರವಿಗೆ ಹಲವು ಬಾರಿ ಎಚ್ಚರಿಕೆ ನೀಡಿತ್ತಲ್ಲದೆ ನೋಟಿಸ್ ಕೂಡ ಜಾರಿ ಮಾಡಿತ್ತು. ನೋಟಿಸ್ ಗೂ ಬಗ್ಗದ ಅಂಗಡಿ ಮಾಲೀಕರಿಗೆ ಪುರಸಭೆ ಶಾಕ್ ನೀಡಿತು. ಬೆಳಿಗ್ಗೆ ತೆರವು ಕಾರ್ಯಾಚರಣೆಗೆ ಬೀದಿಗಿಳಿಯುತ್ತಿದ್ದಂತೆ ವ್ಯಾಪಾರಿಗಳು ಆತಂಕಕ್ಕೊಳಗಾದರು. ದಿಢೀರ್ ಕಾರ್ಯಾಚರಣೆಯನ್ನು ವಿರೋಧಿಸಿದ ಬೀದಿವ್ಯಾಪಾರಿಗಳು ಏರುದನಿಯಲ್ಲಿ ಅಧಿಕಾರಿಗಳನ್ನು ಮತ್ತು ಪುರಸಭೆ ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು. ತಮ್ಮ ಮೇಲಿನ ದೌರ್ಜನ್ಯವನ್ನು ಖಂಡಿಸಿದರು. ಆದರೆ ಯಾರ ಮುಲಾಜಿಗೂ ಒಳಗಾಗದ ಪುರಸಭೆ ಸದಸ್ಯರು ಮತ್ತು ಅಧಿಕಾರಿಗಳು ತೆರವು ಕಾರ್ಯಾಚರಣೆ ಆರಂಭಿಸಿದರು.ಬೆಳಿಗ್ಗೆ 6 ಗಂಟೆ ವೇಳೆಗೆ ಬಿಜಿಎಸ್ ವೃತ್ತದಿಂದ ಆರಂಭವಾದ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಸಂಜೆವರೆಗೆ ಮುಂದುವರೆಯಿತು. ಅಧ್ಯಕ್ಷ ಹರಿಪ್ರಸಾದ್ ಮತ್ತು ವಿಪಕ್ಷ ನಾಯಕ ಸಿ.ಉಮೇಶ್ ಖುದ್ದು ಮುಂದೆ ನಿಂತು ಜೆಸಿಬಿ ಯಂತ್ರಗಳಿಂದ ವಾಣಿಜ್ಯ ಮಳಿಗೆಗಳ ಮಾಲೀಕರು ಫುಟ್‌ಪಾತ್‌ನಲ್ಲಿ ನಿರ್ಮಿಸಿದ್ದ ಅನಧಿಕೃತ ನಿರ್ಮಾಣಗಳನ್ನು ತೆರವು ಮಾಡಿದರು.ಈ ರಸ್ತೆಯಲ್ಲಿ ಪುರಸಭೆ ಕಚೇರಿ, ಹೈಸ್ಕೂಲ್ ಸಹ ಇದೆ. ರೈಲು ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯೂ ಇದಾಗಿದ್ದು, ವಾಹನ ಚಾಲನೆಗೆ ಇಲ್ಲಿ ತೀರ್ವ ಅಡಚಣೆಯಾಗುತ್ತಿತ್ತು. ಈ ರಸ್ತೆಯಲ್ಲಿ ಒಂದು ಕಾರು ಬಂದರೆ ಸಾಕು ಸಂಚಾರಿ ದಟ್ಟಣೆ ಉಂಟಾಗುತ್ತಿತ್ತು. ಪಾರ್ಕಿಂಗ್ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಪಾದಾಚಾರಿಗಳು ಸಹ ನಡು ರಸ್ತೆಯಲ್ಲಿ ನಡೆದುಕೊಂಡು ಹೋಗಬೇಕಿತ್ತು. ಶೇ.30 ರಷ್ಟು ರಸ್ತೆ ಒತ್ತುವರಿಯಾಗಿತ್ತು. ಚರಂಡಿ ಮೇಲೆ ಮತ್ತು ಅದಕ್ಕಿಂತ ಮುಂದೆ ಬಂದು ಅನಧಿಕೃತ ನಿರ್ಮಾಣಗಳು ತಲೆ ಎತ್ತಿದ್ದವು.ಪಟ್ಟಣದ ಮುಖ್ಯ ರಸ್ತೆಯಲ್ಲಿ ಹಲವು ವರ್ಷಗಳಿಂದ ಪಾದಾಚಾರಿಗಳು, ವಾಹನ ಸವಾರರಿಗೆ ತುಂಬಾ ಕಿರಿಕಿರಿಗೆ ಕಾರಣವಾಗಿದ್ದ ಫುಟ್ ಪಾತ್ ಹಾಗೂ ರಸ್ತೆ ಒತ್ತುವರಿಯನ್ನು ಪುರಸಭೆ ಅಧ್ಯಕ್ಷರು, ವಿಪಕ್ಷ ನಾಯಕರು ಹಾಗೂ ಅಧಿಕಾರಿಗಳು ಯಶಸ್ವಿಯಾಗಿ ತೆರವುಗೊಳಿಸಿದರು. ಕೆಲ ಮಳಿಗೆ ಮತ್ತು ಮನೆ ಮಾಲಿಕರಿಂದ ವಿರೋಧ ವ್ಯಕ್ತವಾಯಿತಾದರೂ ಸಾರ್ವಜನಿಕರು, ವಾಹನ ಸವಾರರಿಂದ ಮೆಚ್ಚುಗೆ ವ್ಯಕ್ತವಾಯಿತು.2 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ:ಈ ವೇಳೆ ಪುರಸಭೆ ಸದಸ್ಯ ಸಿ.ಉಮೇಶ್ ಮಾತನಾಡಿ, ಬಿಡದಿ ಅತಿ ವೇಗವಾಗಿ ಬೆಳೆಯುತ್ತಿರುವ ಪಟ್ಟಣವಾಗಿದೆ. ಇಲ್ಲಿ ರಸ್ತೆ, ಫುಟ್ ಪಾತ್ ಒತ್ತುವರಿಯ ಕಾರಣ ಸುಗಮ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಗುತ್ತಿತ್ತು. ಒತ್ತುವರಿ ತೆರವು ಮಾಡಲೇಬೇಕಾದ ಒತ್ತಡ ಮತ್ತು ಅನಿವಾರ್ಯತೆ ಎದುರಾಗಿತ್ತು. ಪುರಸಭೆ, ಶಾಸಕ ಎಚ್.ಸಿ.ಬಾಲಕೃಷ್ಣ, ಜಿಲ್ಲಾಧಿಕಾರಿಗಳು, ಪೊಲೀಸರ ಸಹಕಾರದಲ್ಲಿ ಕಾರ್ಯಾಚರಣೆ ಯಶಸ್ವಿಯಾಗಿ ನಡೆದಿದೆ ಎಂದರು.ಸುಂದರ ಪಟ್ಟಣವನ್ನು ನಿರ್ಮಿಸುವುದು ನಮ್ಮ ಗುರಿಯಾಗಿದೆ. ಮುಂದಿನ ದಿನಗಳಲ್ಲಿ ಈ ರಸ್ತೆಗೆ ಹೊಸರೂಪ ಕೊಟ್ಟನಂತರ ತೆರವು ಕಾರ್ಯದ ಬಗ್ಗೆ ಜನರಿಗೆ ಅರಿವಾಗಲಿದೆ. ಶಾಸಕರ ನಿದೇರ್ಶನದ ಮೇರೆಗೆ ತಕ್ಷಣವೇ ತುರ್ತುಸಭೆ ಕರೆದು 2 ಕೋಟಿ ರೂ. ಅನುದಾನದಡಿಯಲ್ಲಿ ಯುಜಿಡಿ, ಚರಂಡಿ, ಗ್ಯಾಸ್ ಪೈಪ್ ಲೈನ್ , ನೀರಿನ ಸಂಪರ್ಕದ ಲೈನ್ ಗಳು , ವಿದ್ಯುತ್ ಕಂಬಗಳು ಆಧುನಿಕ ಬೀದಿ ದೀಪಗಳನ್ನು ಅಳವಡಿಸಲಾಗುವುದು ಎಂದು ತಿಳಿಸಿದರು.
ಪಟ್ಟಣದ ಸೌಂದರ್ಯ ವೃದ್ಧಿ:ಪುರಸಭೆ ಅಧ್ಯಕ್ಷ ಎಂ.ಎನ್.ಹರಿಪ್ರಸಾದ್ ಮಾತನಾಡಿ, ಸಾರ್ವಜನಿಕರಿಗೆ ತೊಂದರೆ ಮಾಡುವುದು ಪುರಸಭೆಯ ಉದ್ದೇಶವಿಲ್ಲ. ರಸ್ತೆಯನ್ನು ಅತಿಕ್ರಮಿಸಿದ ಜಾಗವನ್ನು ತೆರವು ಮಾಡುವ ಕೆಲಸ ಮಾಡಲಾಗುತ್ತಿದೆ. ಶಾಲಾ ಮಕ್ಕಳು, ರೈಲು ನಿಲ್ದಾಣಕ್ಕೆ ಓಡಾಡುವ ಜನರಿಗೆ ಬಹಳ ತೊಂದರೆ ಆಗಿದ್ದನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯಾಚರಣೆ ಮಾಡಲಾಗಿದ್ದು, ಇದರಿಂದ ಪಟ್ಟಣದ ಸೌಂದರ್ಯ ವೃದ್ಧಿಯಾಗುವ ಜೊತೆಗೆ ಸಾರ್ವಜನಿಕರಿಗೆ ಆಗುತ್ತಿದ್ದ ತೊಂದರೆ ತಪ್ಪಲಿದೆ. ಸುಗಮ ವಾಹನ ಸಂಚಾರ ಸಾಧ್ಯವಾಗಲಿದೆ ಎಂದರು.ತೆರವು ಕಾರ್ಯಾಚರಣೆ ವೇಳೆ ಪುರಸಭೆ ಮುಖ್ಯಾಧಿಕಾರಿ ಕೆ.ಜಿ.ರಮೇಶ್, ಸದಸ್ಯರಾದ ಎನ್.ಕುಮಾರ್, ಶ್ರೀನಿವಾಸ್, ನಾಮನಿರ್ದೇಶಿತ ಸದಸ್ಯರಾದ ರೇಣುಕಯ್ಯ, ಶಿವರಾಮ್, ಮುಖಂಡರಾದ ಶಶಿಕುಮಾರ್, ಮಹೇಶ್, ನಾಗೇಶ್, ಪುರಸಭೆ ಅಧಿಕಾರಿಗಳಾದ ನಂಜುಂಡಸ್ವಾಮಿ, ಶ್ಯಾಮ್, ಶೃತಿ , ಶಿಲ್ಪಾ ಮುಂತಾದವರು ಇದ್ದರು.
ಬಿಡದಿ ಪೋಲೀಸ್ ಠಾಣೆ ಇನ್ಸ್ ಪೆಕ್ಟರ್ ಶಂಕರ ನಾಯಕ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ...ಬಾಕ್ಸ್ ...ಸಾರ್ವಜನಿಕರಿಂದ ಉತ್ತಮ ಸ್ಪಂದನೆಬಿಡದಿ ಪಟ್ಟಣದ ಬಿಜಿಎಸ್ ವೃತ್ತದಿಂದ ಮುಖ್ಯರಸ್ತೆ ರೈಲ್ವೇ ಸ್ಟೇಷನ್ ರಸ್ತೆ ಮತ್ತು ಬಿಜಿಎಸ್ ವೃತ್ತದಿಂದ ಮೀನಿನ ಅಂಗಡಿ ಮೂಲಕ ಹೊಸ ಹೆದ್ದಾರಿವರೆಗೆ ಜೆಸಿಬಿ ಯಂತ್ರಗಳ ಮೂಲಕ ತೆರವು ಕಾರ್ಯ ನಡೆಯಿತು. ಬಿಡದಿ ಪುರಸಭೆ ಆಡಳಿತ ಮಂಡಳಿ ಒಮ್ಮತದ ತೀರ್ಮಾನ ಕೈಗೊಂಡು ಮಹತ್ವದ ತೆರವು ಕಾರ್ಯಕ್ಕೆ ಕೆಲವು ಅಂಗಡಿ-ಮುಂಗಟ್ಟುಗಳ ಮಾಲೀಕರು ವಿರೋಧ ವ್ಯಕ್ತಪಡಿಸಿದರಾದರೂ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.
ಹಲವಾರು ವರ್ಷಗಳಿಂದ ಕಾಡುತ್ತಿದ್ದ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಪುರಸಭೆ ಆಡಳಿತ ಮಂಡಳಿ ಕೈಗೊಂಡ ದಿಟ್ಟ ಕ್ರಮ ನಾಗರಿಕರ ಪ್ರಶಂಸೆಗೆ ಪಾತ್ರವಾಯಿತು.-------9ಕೆಆರ್ ಎಂಎನ್ 8,9.ಜೆಪಿಜಿಬಿಡದಿ ಪಟ್ಟಣದಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ನಡೆಯಿತು.