ಶಿಗ್ಗಾಂವಿ ಕೈ ಟಿಕೆಟ್‌, ಲಿಂಗಾಯತರಿಗೋ ಅಲ್ಪಸಂಖ್ಯಾತರಿಗೋ

KannadaprabhaNewsNetwork |  
Published : Oct 23, 2024, 01:52 AM IST
ಪೋಟೋ ಇದೆ. | Kannada Prabha

ಸಾರಾಂಶ

ಶಿಗ್ಗಾಂವಿ ಉಪಚುನಾವಣೆಗೆ ಕಾಂಗ್ರೆಸ್‌ ಟಿಕೆಟ್‌ ಹಂಚಿಕೆ ಕಗ್ಗಂಟು ಮುಂದುವರಿದೆ. ಅಲ್ಪಸಂಖ್ಯಾತರಿಗೆ ನೀಡಬೇಕೋ ಅಥವಾ ಲಿಂಗಾಯತರಿಗೋ ಎಂಬ ಗೊಂದಲದಲ್ಲಿ ಕೈ ನಾಯಕರಿದ್ದು, ಬಹುತೇಕ ಬುಧವಾರ ಅಭ್ಯರ್ಥಿ ಹೆಸರು ಫೈನಲ್‌ ಆಗುವ ಸಾಧ್ಯತೆಯಿದೆ.

ನಾರಾಯಣ ಹೆಗಡೆ

ಕನ್ನಡಪ್ರಭ ವಾರ್ತೆ ಹಾವೇರಿ

ಶಿಗ್ಗಾಂವಿ ಉಪಚುನಾವಣೆಗೆ ಕಾಂಗ್ರೆಸ್‌ ಟಿಕೆಟ್‌ ಹಂಚಿಕೆ ಕಗ್ಗಂಟು ಮುಂದುವರಿದೆ. ಅಲ್ಪಸಂಖ್ಯಾತರಿಗೆ ನೀಡಬೇಕೋ ಅಥವಾ ಲಿಂಗಾಯತರಿಗೋ ಎಂಬ ಗೊಂದಲದಲ್ಲಿ ಕೈ ನಾಯಕರಿದ್ದು, ಬಹುತೇಕ ಬುಧವಾರ ಅಭ್ಯರ್ಥಿ ಹೆಸರು ಫೈನಲ್‌ ಆಗುವ ಸಾಧ್ಯತೆಯಿದೆ.

ಬಿಜೆಪಿಯಿಂದ ಈಗಾಗಲೇ ಬಸವರಾಜ ಬೊಮ್ಮಾಯಿ ಪುತ್ರ ಭರತ್‌ಗೆ ಟಿಕೆಟ್‌ ನೀಡಿದ್ದು, ಅವರಿಗೆ ಠಕ್ಕರ್‌ ನೀಡಲು ಸೂಕ್ತ ಅಭ್ಯರ್ಥಿಯನ್ನೇ ಕಣಕ್ಕಿಳಿಸಲು ಕಾಂಗ್ರೆಸ್‌ ಮುಂದಾಗಿದೆ. ಚುನಾವಣೆ ಘೋಷಣೆಯಾದ ದಿನದಿಂದಲೂ ಈ ನಿಟ್ಟಿನಲ್ಲಿ ಟಿಕೆಟ್‌ ಆಕಾಂಕ್ಷಿಗಳು, ಪಕ್ಷದ ಜಿಲ್ಲೆಯ ಶಾಸಕರೊಂದಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎ ಡಿಕೆಶಿ ಸರಣಿ ಸಭೆ ನಡೆಸುತ್ತಲೇ ಬಂದಿದ್ದಾರೆ. ಈ ವೇಳೆ ಯಾರಿಗೆ ಟಿಕೆಟ್‌ ನೀಡಿದರೆ ಕ್ಷೇತ್ರ ಗೆಲ್ಲಬಹುದು ಎಂಬ ಗಂಭೀರ ಚರ್ಚೆ ನಡೆದಿದೆ.

ಮುಸ್ಲಿಂರಿಗೆ ಕೊಡಿ: ಶಿಗ್ಗಾಂವಿ ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಹೆಚ್ಚಿದೆ. ಅದಕ್ಕಾಗಿ ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್‌ 2004ರಿಂದಲೂ ಶಿಗ್ಗಾಂವಿ ಕ್ಷೇತ್ರವನ್ನು ಮುಸ್ಲಿಂರಿಗೆ ಮೀಸಲಿಟ್ಟಿದೆ. ಈ ಸಲ ಬದಲಾಯಿಸಿದರೆ ಆ ಸಮುದಾಯಕ್ಕೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಕೆಲವು ನಾಯಕರು ಹೇಳುತ್ತಿದ್ದಾರೆ. ಮಾಜಿ ಶಾಸಕ ಅಜ್ಜಂಫೀರ್ ಖಾದ್ರಿ, ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಯಾಸೀರ್ ಖಾನ್‌ ಪಠಾಣ್‌ ಈ ಸಲ ಟಿಕೆಟ್‌ಗೆ ಭಾರಿ ಪೈಪೋಟಿ ನಡೆಸಿದ್ದಾರೆ. ಆದರೆ, ಇವರಿಬ್ಬರಲ್ಲಿ ಖಾದ್ರಿಗೆ ಟಿಕೆಟ್‌ ನೀಡಬೇಕು ಎಂದು ಕೆಲವರು ಹೇಳುತ್ತಿದ್ದರೆ, ಇನ್ನು ಕೆಲ ನಾಯಕರು ಪಠಾಣ್‌ ಪರ ಬ್ಯಾಟಿಂಗ್‌ ಮಾಡುತ್ತಿದ್ದಾರೆ.

ಬಿಜೆಪಿ ವಿರುದ್ಧ ಲಿಂಗಾಯತ ಅಸ್ತ್ರ?: ಹಿಂದಿನ ಐದು ಚುನಾವಣೆಗಳಲ್ಲಿ ಮುಸ್ಲಿಂರಿಗೆ ಟಿಕೆಟ್‌ ನೀಡಲಾಗಿದೆ. ಆದರೆ, ಒಂದು ಸಲವೂ ಗೆಲ್ಲಲು ಸಾಧ್ಯವಾಗಿಲ್ಲ. ಆದ್ದರಿಂದ ಈ ಸಲ ಲಿಂಗಾಯತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ ಬಿಜೆಪಿಗೆ ಠಕ್ಕರ್‌ ಕೊಡಬಹುದು ಎಂಬ ಲೆಕ್ಕಾಚಾರ ಕೆಲ ಕೈ ನಾಯಕರದ್ದಾಗಿದೆ. ಇದರಿಂದ ಅಹಿಂದ ಮತಗಳೊಂದಿಗೆ ಲಿಂಗಾಯತರ ಮತಗಳೂ ಬರಲಿದ್ದು, ಗೆಲುವು ಸುಲಭ ಎನ್ನುವುದು ಕೆಲ ಕೈ ನಾಯಕರ ಲೆಕ್ಕಾಚಾರವಾಗಿದೆ. ಮಾಜಿ ಸಂಸದ ಮಂಜುನಾಥ ಕುನ್ನೂರ ಪುತ್ರ ರಾಜು ಕುನ್ನೂರ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಕಾಡಾ ಅಧ್ಯಕ್ಷ ಸೋಮಣ್ಣ ಬೇವಿನಮರದ ಟಿಕೆಟ್‌ ರೇಸ್‌ನಲ್ಲಿ ಮುಂದಿದ್ದಾರೆ. ಇವರನ್ನು ಬಿಟ್ಟು ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸರೆ ಹೇಗೆ ಎಂಬ ಚರ್ಚೆಯೂ ನಡೆದಿದೆ ಎಂದು ತಿಳಿದುಬಂದಿದೆ. ಟಿಕೆಟ್‌ ಆಕಾಂಕ್ಷಿಗಳು ನಾಲ್ಕೈದು ದಿನಗಳಿಂದ ಬೆಂಗಳೂರಿನಲ್ಲೇ ಠಿಕಾಣಿ ಹೂಡಿದ್ದಾರೆ. ಸಿಎಂ, ಡಿಸಿಎಂ, ಸಚಿವರ ಭೇಟಿ ಮಾಡುತ್ತ ಪ್ರಯತ್ನ ಮುಂದುವರಿಸುತ್ತಲೇ ಇದ್ದಾರೆ.

ಇತ್ತ ಬಿಜೆಪಿ ಅಭ್ಯರ್ಥಿ ಭರತ್‌, ಅಪ್ಪ ಬಸವರಾಜ ಬೊಮ್ಮಾಯಿ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಚಾರ ಶುರು ಮಾಡಿದ್ದಾರೆ. ಪಕ್ಷದ ಇನ್ನುಳಿದ ಟಿಕೆಟ್ ಆಕಾಂಕ್ಷಿಗಳ ಅಸಮಾಧಾನ ಶಮನಗೊಳಿಸುವಲ್ಲಿ ನಿರತರಾಗಿದ್ದಾರೆ. ನಾಲ್ಕು ಸಲ ಬಸವರಾಜ ಬೊಮ್ಮಾಯಿ ಅವರಿಗೆ ನೇರ ಪೈಪೋಟಿ ನೀಡಿದ್ದ ಅಜ್ಜಂಫೀರ್‌ ಖಾದ್ರಿಗೆ ಮತ್ತೆ ಕೈ ಮಣೆ ಹಾಕುತ್ತಾ ಅಥವಾ ಬಿಜೆಪಿಯಲ್ಲಿ ಅಭ್ಯರ್ಥಿ ಬದಲಾದ್ದರಿಂದ ತನ್ನ ಅಭ್ಯರ್ಥಿಯನ್ನೂ ಬದಲಾಯಿಸುತ್ತಾ ಎಂಬುದನ್ನು ಕಾದುನೋಡಬೇಕಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಲ್ಲಿ ಬಸವಣ್ಣ ಜೀವ ವೈವಿಧ್ಯ ಉದ್ಯಾನವನ
ಕೆಎಂಎಫ್‌ನಲ್ಲಿ ಉದ್ಯೋಗದ ನೆಪದಲ್ಲಿ50 ಲಕ್ಷ ವಂಚನೆ:ಇಬ್ಬರ ವಿರುದ್ಧ ಕೇಸ್‌