ಉಡುಪಿ ಜಿಲ್ಲಾದ್ಯಂತ ಈಸ್ಟರ್ ಜಾಗರಣೆ

KannadaprabhaNewsNetwork |  
Published : Apr 20, 2025, 01:50 AM IST
19ಈಶ್ಟರ್‌ | Kannada Prabha

ಸಾರಾಂಶ

ಯೇಸು ಕ್ರಿಸ್ತರು ಶಿಲುಬೆಗೇರಿ ಪುನರುತ್ಥಾನರಾದ ಈಸ್ಟರ್ ಜಾಗರಣೆಯನ್ನು ಶನಿವಾರ ರಾತ್ರಿ ಜಿಲ್ಲೆಯಾದ್ಯಂತ ಕ್ರೈಸ್ತ ಬಾಂಧವರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಯೇಸು ಕ್ರಿಸ್ತರು ಶಿಲುಬೆಗೇರಿ ಪುನರುತ್ಥಾನರಾದ ಈಸ್ಟರ್ ಜಾಗರಣೆಯನ್ನು ಶನಿವಾರ ರಾತ್ರಿ ಜಿಲ್ಲೆಯಾದ್ಯಂತ ಕ್ರೈಸ್ತ ಬಾಂಧವರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಜೆರಾಲ್ಡ್ ಐಸಾಕ್ ಲೋಬೊ ನೇತೃತ್ವದಲ್ಲಿ ಧರ್ಮಪ್ರಾಂತ್ಯದ ಪ್ರಧಾನ ದೇವಾಲಯ ಮಿಲಾಗ್ರಿಸ್ ಕ್ಯಾಥೆಡ್ರಲ್ ಚರ್ಚ್ನಲ್ಲಿ ಧಾರ್ಮಿಕ ವಿಧಿವಿಧಾನಗಳು ಜರುಗಿದವು. ಚರ್ಚಿನ ಪ್ರಧಾನ ಧರ್ಮಗುರು ಹಾಗೂ ಧರ್ಮಪ್ರಾಂತ್ಯದ ಶ್ರೇಷ್ಠಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಸಹಾಯಕ ಧರ್ಮಗುರು ಪ್ರದೀಪ್ ಕಾರ್ಡೊಜಾ, ಡಾ.ಜೆನ್ಸಿಲ್ ಆಲ್ವಾ, ಪಿಲಾರ್ ಸಭೆಯ ಮನೋಜ್ ಫುರ್ಟಾಡೊ, ಪರೇಲ್ ಫರ್ನಾಂಡಿಸ್ ಕಟಪಾಡಿ ಹೋಲಿ ಕ್ರೊಸ್ ಸಂಸ್ಥೆಯ ನಿರ್ದೇಶಕ ರೋನ್ಸನ್ ಡಿಸೋಜಾ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಬೃಹತ್ ಗಾತ್ರದ ಈಸ್ಟರ್ ಕ್ಯಾಂಡಲ್ ಹಚ್ಚಿ ಮೆರವಣಿಗೆಯಲ್ಲಿ ಸಾಗಿ ಬಂದು ಚರ್ಚ್ನ ಪ್ರಧಾನ ಸ್ಥಳದಲ್ಲಿ ಪ್ರತಿಷ್ಠಾಪಿಸಲಾಯಿತು. ಬಳಿಕ ಹಳೆ ಹಾಗೂ ಹೊಸ ಒಡಂಬಡಿಕೆಯ ಆಯ್ದ ಭಾಗಗಳ ವಾಚನ ಮಾಡಲಾಯಿತು. ಧರ್ಮಾಧ್ಯಕ್ಷ ರು ಮತ್ತು ಧರ್ಮಗುರುಗಳು ಆಶೀರ್ವಚನ ನೆರವೇರಿಸಿ ನೆರೆದ ಭಕ್ತಾದಿಗಳ ಮೇಲೆ ಹೊಸ ನೀರನ್ನು ಪ್ರೋಕ್ಷಿಸಿ ಆಶೀರ್ವಾದಿಸಿದರು.

ಬಳಿಕ ನಡೆದ ಬಲಿಪೂಜೆಯಲ್ಲಿ ಯೇಸುವಿನ ಕಷ್ಟಗಳು, ಪುನರುತ್ಥಾನದ ಸಂದೇಶವನ್ನು ವಿವರಿಸಿದ ಧರ್ಮಗುರುಗಳು, ಕ್ರೈಸ್ತ ವಿಶ್ವಾಸ, ಸತ್ಯದ ಮರು ಹುಟ್ಟನ್ನು ದೃಢೀಕರಣ ನಡೆಸಿದರು.

ಬಲಿಪೂಜೆಯಲ್ಲಿ ಸಂದೇಶ ನೀಡಿದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಈಸ್ಟರ್ ನಮ್ಮ ಹೃದಯಗಳಲ್ಲಿ ನಂಬಿಕೆ, ನವೀಕರಣ ಮತ್ತು ಆನಂದವನ್ನು ತುಂಬುವ ಪವಿತ್ರ ದಿನ. ಈ ಹಬ್ಬ ಒಂದು ಧಾರ್ಮಿಕ ಆಚರಣೆಯಲ್ಲ, ಬದಲಾಗಿ ಸೋಲಿನ ಮೇಲೆ ಗೆಲುವು ಕತ್ತಲೆಯ ಮೇಲೆ ಬೆಳಕು ಮತ್ತು ಮರಣದ ಮೇಲೆ ಜೀವದ ವಿಜಯದ ಸಂಕೇತ ಎಂದರು. ಬಲಿಪೂಜೆಯ ಬಳಿಕ ಭಾಗವಹಿಸಿದ ಕ್ರೈಸ್ತ ಬಾಂಧವರು ಈಸ್ಟರ್ ಹಬ್ಬದ ಶುಭಾಶಯ ವಿನಿಮಯ ಮಾಡಿ ಸಂಭ್ರಮಿಸಿದರು.

ಕ್ರೈಸ್ತರು ವಿಭೂತಿ ಬುಧವಾರದಿಂದ ಆರಂಭಿಸಿ 40 ದಿನಗಳ ಉಪವಾಸ ವೃತ ಹಾಗೂ ಧ್ಯಾನದಲ್ಲಿ ಯೇಸುವಿನ ಕಷ್ಟಗಳನ್ನು ನೆನೆದು ಈಸ್ಟರ್ ಹಬ್ಬದಂದು ಯೇಸುವಿನ ಪುನರುತ್ಥಾನದ ಮೂಲಕ ವೃತ ಅಂತ್ಯಗೊಳಿಸುತ್ತಾರೆ. ಈಸ್ಟರ್ ಹಬ್ಬವೂ ಕ್ರಿಸ್ಮಸ್ ಹಬ್ಬದಂತೆ ಕ್ರೈಸ್ತರಿಗೆ ಪ್ರಮುಖ ಹಬ್ಬವಾಗಿದೆ. ಜಿಲ್ಲೆಯ ವಿವಿಧ ಚರ್ಚುಗಳಲ್ಲಿ ಆಯಾ ಚರ್ಚುಗಳ ಧರ್ಮಗುರುಗಳ ನೇತೃತ್ವದಲ್ಲಿ ಪವಿತ್ರ ಶುಕ್ರವಾರದ ವಿಧಿ ವಿಧಾನಗಳು ಜರುಗಿದವು.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ