ಸಿರಿಧಾನ್ಯ ಆಹಾರ ಸೇವಿಸಿ ಆರೋಗ್ಯ ವೃದ್ಧಿಸಿ

KannadaprabhaNewsNetwork |  
Published : Dec 14, 2023, 01:30 AM IST
ಜಿಲ್ಲಾಮಟ್ಟದ ಸಿರಿಧಾನ್ಯ ಪಾಕ ಸ್ಪರ್ಧೆಯನ್ನು ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದುಗಲ್ ವೀಕ್ಷಿಸಿದರು. | Kannada Prabha

ಸಾರಾಂಶ

ಸದ್ಯ ಹಲವು ರೋಗಗಳು ಜನರನ್ನು ಬಾಧಿಸುತ್ತಿವೆ. ಆರೋಗ್ಯ ಕಾಪಾಡಿಕೊಳ್ಳಲು ಸೇವಿಸಬೇಕಾದ ಪೌಷ್ಟಿಕ ಆಹಾರದ ಕುರಿತು ಜನರಲ್ಲಿ ಅರಿವು ಮೂಡಿಸಲು ಇಂತಹ ಆಹಾರ ಮೇಳಗಳು ಹೆಚ್ಚು ಉಪಯುಕ್ತ. ಜನರು ಬಳಸುವ ಅಕ್ಕಿಗಿಂತ ಸಿರಿಧಾನ್ಯಗಳು ಆರೋಗ್ಯಕ್ಕೆ ಉತ್ತಮ ಎಂಬುದು ಈಗ ಸಿದ್ಧಗೊಂಡಿದ್ದು, ಇಲ್ಲಿನ ಜನತೆಯೂ ಆರೋಗ್ಯಪೂರ್ಣ ಬದುಕಿಗೆ ಸಿರಿಧಾನ್ಯಗಳನ್ನು ಅಧಿಕವಾಗಿ ಬಳಸುವಂತೆ ಪ್ರೇರೇಪಿಸಬೇಕಾದ ಅಗತ್ಯವಿದೆ

ಕನ್ನಡಪ್ರಭ ವಾರ್ತೆ ಹೊಸಪೇಟೆ

ಇಂದಿನ ಆಧುನಿಕ ಯುಗದ ಒತ್ತಡದ ಬದುಕಿಗೆ ಸಿರಿಧಾನ್ಯ ಆಹಾರ ಸೇವನೆ ಉತ್ತಮ ನಡೆಯಾಗಿದೆ. ಇದರಿಂದ ಆರೋಗ್ಯ ಕಾಪಾಡಿಕೊಳ್ಳುವುದರ ಜತೆಗೆ ರೋಗಗಳಿಂದ ಮುಕ್ತರಾಗಬಹುದು ಎಂದು ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದುಗಲ್ ತಿಳಿಸಿದರು.

ಸಿರಿಧಾನ್ಯ ಹಬ್ಬದ ಪ್ರಯುಕ್ತ ಕೃಷಿ ಇಲಾಖೆ, ಕೃಷಿ ತಜ್ಞರ ಸಂಸ್ಥೆಯಿಂದ ನಗರದಲ್ಲಿ ಬುಧವಾರ ನಡೆದ ನಮ್ಮ ನಡಿಗೆ ಸಿರಿಧಾನ್ಯದ ಕಡೆ ಜಿಲ್ಲಾಮಟ್ಟದ ಸಿರಿಧಾನ್ಯ ಪಾಕ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸದ್ಯ ಹಲವು ರೋಗಗಳು ಜನರನ್ನು ಬಾಧಿಸುತ್ತಿವೆ. ಆರೋಗ್ಯ ಕಾಪಾಡಿಕೊಳ್ಳಲು ಸೇವಿಸಬೇಕಾದ ಪೌಷ್ಟಿಕ ಆಹಾರದ ಕುರಿತು ಜನರಲ್ಲಿ ಅರಿವು ಮೂಡಿಸಲು ಇಂತಹ ಆಹಾರ ಮೇಳಗಳು ಹೆಚ್ಚು ಉಪಯುಕ್ತ. ಜನರು ಬಳಸುವ ಅಕ್ಕಿಗಿಂತ ಸಿರಿಧಾನ್ಯಗಳು ಆರೋಗ್ಯಕ್ಕೆ ಉತ್ತಮ ಎಂಬುದು ಈಗ ಸಿದ್ಧಗೊಂಡಿದ್ದು, ಇಲ್ಲಿನ ಜನತೆಯೂ ಆರೋಗ್ಯಪೂರ್ಣ ಬದುಕಿಗೆ ಸಿರಿಧಾನ್ಯಗಳನ್ನು ಅಧಿಕವಾಗಿ ಬಳಸುವಂತೆ ಪ್ರೇರೇಪಿಸಬೇಕಾದ ಅಗತ್ಯವಿದೆ ಎಂದರು.

ಸಿರಿಧಾನ್ಯಗಳಿಂದ ಅತಿ ಕಡಿಮೆ ಪ್ರಮಾಣದ ಸಕ್ಕರೆ ಅಂಶ ರಕ್ತಕ್ಕೆ ಸೇರ್ಪಡೆಗೊಳ್ಳುವ ಕಾರಣ, ಮಧುಮೇಹದಂತಹ ಕಾಯಿಲೆ ಇದರಲ್ಲಿ ನಿಯಂತ್ರಿಸಲ್ಪಡುತ್ತದೆ. ಸಿರಿಧಾನ್ಯಗಳು ಎಲ್ಲ ಹವಾಗುಣಕ್ಕೂ ಹೊಂದಿಕೊಂಡು, ಪ್ರತಿಕೂಲ ವಾತಾವರಣದಲ್ಲೂ ಸುಲಭದಲ್ಲಿ ಬೆಳೆಯುವುದರಿಂದ ಜಿಲ್ಲೆಯಲ್ಲಿ ನವಣೆ, ಉದಲು, ಸಾಮೆ, ರಾಗಿ, ಸಜ್ಜೆ ಮುಂತಾದವುಗಳನ್ನು ಬೆಳೆಸಲು ಇಲ್ಲಿನ ರೈತರಿಗೆ ಪ್ರೋತ್ಸಾಹಿಸಬೇಕು ಎಂದರು.

ಪಾಕ ಸ್ಪರ್ಧೆ ಆಯೋಜನೆ:

ಪಾಕ ಸ್ಪರ್ಧೆಯಲ್ಲಿ 29 ಮಹಿಳೆಯರು ಭಾಗವಹಿಸಿ 90 ನಿಮಿಷದಲ್ಲಿ ಪಾಯಸ, ಶಾಮ್ಯ ಪಾಯಸ, ಉದಲು ಕಟ್ಲೇಟ್, ಸಿರಿಧಾನ್ಯ ರೊಟ್ಟಿ, ಟೊಮೇಟೊ ಬಾತ್, ಮಿಲೆಟ್ ಮಲಾಯಿ, ನವಣಕ್ಕಿ ಬಿಸಿಬೇಳೆಬಾತ್, ರಾಗಿ ದೋಸೆ, ಸಾಮೇಕ್ಕಿ ಪೊಂಗಲ್ ಸೇರಿ ಇತರೆ ರುಚಿಕರವಾದ ಖಾದ್ಯಗಳನ್ನು ಸಿದ್ಧಪಡಿಸಿದರು.

ರುಚಿಕರ, ಅಲಂಕಾರ, ಸ್ವಚ್ಛತೆ ಹಾಗೂ ನೈರ್ಮಲ್ಯ, ಪ್ರಶ್ನೋತ್ತರ ಆಯ್ಕೆಯಲ್ಲಿ ಹಗರಿಬೊಮ್ಮನಹಳ್ಳಿ ಮಾರೆಮ್ಮ ಮೊದಲ ಸ್ಥಾನ, ಹೊಸಪೇಟೆಯ ಕವಿತಾ ಎರಡನೇ ಸ್ಥಾನ, ಯು. ಶೋಭಾ ತೃತೀಯ ಸ್ಥಾನ ಪಡೆದರು. ವಿಜೇತರಿಗೆ ಕ್ರಮವಾಗಿ ಸ್ಥಾನ ₹5 ಸಾವಿರ, ₹3 ಸಾವಿರ, ₹2 ಸಾವಿರ ನಗದು ಹಾಗೂ ಪ್ರಶಸ್ತಿ ನೀಡಲಾಯಿತು. ಜಿಲ್ಲೆಯಿಂದ ಇಬ್ಬರು ವಿಜೇತರು ಡಿ. 23ರಂದು ಬೆಂಗಳೂರಿನಲ್ಲಿ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

ಕೃಷಿ ಉಪನಿರ್ದೇಶಕ ನಯಿಂಬಾಷಾ, ಎಡಿ ವಾಮದೇವ ಕೊಳ್ಳಿ, ಗೃಹ ವಿಜ್ಞಾನಿ ಡಾ. ಸುನೀತಾ, ಕೃಷಿ ಅಧಿಕಾರಿಗಳಾದ ಪ್ರಿಯಾಂಕ, ರಾಜು ಮತ್ತಿತರರಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ