ಕನ್ನಡಪ್ರಭ ವಾರ್ತೆ ವಿಜಯಪುರ
ಮಲಬದ್ಧತೆ ಮೂಲವ್ಯಾಧಿ ರೋಗಕ್ಕೆ ಮುಖ್ಯ ಕಾರಣವಾಗಿದೆ. ಹೆಚ್ಚಿನ ನಾರಿನಂಶ ಮತ್ತು ನೀರಿನಾಂಶ ಅಧಿಕವಿರುವ ಹಣ್ಣು, ತರಕಾರಿ ಸೇವನೆಯಿಂದ ಮೂಲವ್ಯಾಧಿಯನ್ನು ದೂರವಿಡಬಹುದು ಎಂದು ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಮಂಜುನಾಥ ಕೋಟೆಣ್ಣವರ ಹೇಳಿದರು.ವಿಶ್ವ ಮೂಲವ್ಯಾದಿ ದಿನದ ಅಂಗವಾಗಿ ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಬಿ.ಎಂ.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಶಸ್ತ್ರ ಚಿಕಿತ್ಸೆ ವಿಭಾಗ, ಜಿಲ್ಲಾ ಶಸ್ತ್ರ ಚಿಕಿತ್ಸಕರ ಸಂಘ, ಭಾರತೀಯ ವೈದ್ಯಕೀಯ ಸಂಘ ಹಾಗೂ ಭಾರತೀಯ ದೊಡ್ಡ ಕರುಳು ಮತ್ತು ಗುದದ್ವಾರದ ಶಸ್ತ್ರ ಚಿಕಿತ್ಸಕರ ಸಂಘದ ಸಹಯೋಗದಲ್ಲಿ ಜನಜಾಗೃತಿ ಜಾಥಾದಲ್ಲಿ ಮಾತನಾಡಿದ ಅವರು, ನಿಯಮಿತ ಮಾಂಸಾಹಾರ ಸೇವನೆ ಒಳ್ಳೆಯದಲ್ಲ. ಪ್ರತಿನಿತ್ಯ ನಿಯಮಿತ ವ್ಯಾಯಾಮ, ಆರೋಗ್ಯಕರ ಜೀವನಶೈಲಿ ಪಾಲನೆ ಮತ್ತು ದುಶ್ಚಟಗಳಿಂದ ದೂರವಿರಬೇಕು ಎಂದು ಸಲಹೆ ನೀಡಿದರು.ಭಾರತೀಯ ದೊಡ್ಡ ಕರುಳು ಮತ್ತು ಗುದದ್ವಾರದ ಶಸ್ತ್ರ ಚಿಕಿತ್ಸಕರ ಸಂಘದ ಸಹಕಾರ್ಯದರ್ಶಿ ಡಾ.ಜಸ್ಪಾಲಸಿಂಗ್ ತೆಹಲಿಯಾ ಮಾತನಾಡಿ, ಜನಸಾಮಾನ್ಯರಲ್ಲಿ ಮೂಲವ್ಯಾಧಿಯ ಬಗ್ಗೆ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಶೌಚಾಲಯದಲ್ಲಿ ಮಲವಿಸರ್ಜನೆಗಾಗಿ 10-15 ನಿಮಿಷಕ್ಕಿಂತ ಹೆಚ್ಚು ಸಮಯ ವ್ಯಯಿಸಬಾರದು. ಭಾರತೀಯ ಶೈಲಿಯ ಶೌಚಾಲಯಗಳು ಮೂಲವ್ಯಾಧಿಯನ್ನು ತಡೆಯಲು ಉತ್ತಮವಾಗಿವೆ. ಮಲದಲ್ಲಿ ರಕ್ತ ಬೀಳುವುದು ಇದರ ಮುಖ್ಯ ಲಕ್ಷಣವಾಗಿದ್ದು, ಸೀಳು ಮೂಲವ್ಯಾಧಿ ಮತ್ತು ಗುದದ್ವಾರದ ಕ್ಯಾನ್ಸರ್ ಸಹ ಆಗಿರಬಹುದು. ಆದ್ದರಿಂದ ಯಾವುದೇ ನಾಚಿಕೆ, ಸಂಕೋಚ ಪಡದೆ ತಜ್ಞ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು.ಅಲ್ ಅಮೀನ್ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯ ಅಧೀಕ್ಷಕ ಡಾ.ಜಿಲಾನಿ ಅವಟಿ ಮಾತನಾಡಿ, ವಿಶ್ವ ಮೂಲವ್ಯಾಧಿ ದಿನಾಚರಣೆಯ ಅಂಗವಾಗಿ ನಗರದ ಬಿಎಲ್‌ಡಿಇ, ಅಲ್- ಅಮೀನ್ ಮತ್ತು ಜಿಲ್ಲಾಸ್ಪತ್ರೆಗಳಲ್ಲಿ ಉಚಿತ ತಪಾಸಣೆ ಮತ್ತು ಚಿಕಿತ್ಸೆ ಶಿಬಿರಗಳನ್ನು ಆಯೋಜಿಸಲಾಗಿದೆ. ಜಿಲ್ಲೆಯ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಜನರು ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಗಾಂಧಿ ಚೌಕಿನಿಂದ ಗಗನ ಮಹಲವರೆಗೆ ಆಯೋಜಿಸಿದ ವಾಕಾಥಾನ್‌ದಲ್ಲಿ ಮೂಲವ್ಯಾಧಿ ರೋಗದ ಜನಜಾಗೃತಿಯ ಕುರಿತು ಭಿತ್ತಿ ಪತ್ರಗಳನ್ನು ಪ್ರದರ್ಶಿಸಿ ಸಾರ್ವಜನಿಕರಿಗೆ ಕರಪತ್ರಗಳನ್ನು ಹಂಚಲಾಯಿತು. ಗಗನ ಮಹಲ್ ಉದ್ಯಾನದಲ್ಲಿ ಜನಜಾಗೃತಿ ಶಿಬಿರ ನಡೆಯಿತು.
ಈ ಸಂದರ್ಭದಲ್ಲಿ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಗಿರೀಶ ಕುಲ್ಲೊಳ್ಳಿ, ಅಲ್ ಅಮೀನ್ ವೈದ್ಯಕೀಯ ಮಹಾವಿದ್ಯಾಲಯ ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ.ಸಾಜಿದ ಮುಧೋಳ, ಜಿಲ್ಲಾ ಶಸ್ತ್ರ ಚಿಕಿತ್ಸಕರ ಸಂಘದ ಅಧ್ಯಕ್ಷ ಡಾ.ಅಶೋಕ ಜಾಧವ, ಕಾರ್ಯದರ್ಶಿ ಡಾ.ರಮಾಕಾಂತ ಬಳೂರಕರ, ಡಾ.ಎಂ.ಬಿ.ಪಾಟೀಲ, ಡಾ. ವಿಕ್ರಂ.ಸಿಂದಗಿಕರ, ಡಾ.ಶೈಲೇಶ ಕನ್ನೂರ, ಡಾ.ವಿಜಯ ಪಾಟೀಲ, ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಕಿರಿಯ ವೈದ್ಯರು ಉಪಸ್ಥಿತರಿದ್ದರು.