ರಾಮನಗರ: ಹಾರೋಹಳ್ಳಿ ತಾಲೂಕಿನ ಯಲಚವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾಸುಪಟ್ಟಣ ಗ್ರಾಮದ ರಸ್ತೆ ಬದಿ ಗೋಣಿಚೀಲದಲ್ಲಿ ಪತ್ತೆಯಾದ ಮೃತ ಕೋತಿಗಳ ಸಾವು ವಿಷಪೂರಿತ ಆಹಾರ ಸೇವನೆಯಿಂದಲೇ ಆಗಿದೆ ಎಂಬುದು ಮರಣೋತ್ತರ ಪರೀಕ್ಷೆಯಿಂದ ದೃಢಪಟ್ಟಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸೋಮವಾರ ವಾಸುಪಟ್ಟಣದ ಬಳಿ ಅಂತ್ಯಸಂಸ್ಕಾರ ಮಾಡಲಾಗಿದ್ದ ಕೋತಿಗಳ ಕಳೇಬರಗಳನ್ನು ಹೊರ ತೆಗೆದರು. ಮರಣೋತ್ತರ ಪರೀಕ್ಷೆ ನಡೆಸಿದ ಪಶು ವೈದ್ಯಕಿಯ ಅಧಿಕಾರಿಗಳು, ವಿಷಮಿಶ್ರಿತ ತೆಂಗಿನಕಾಯಿ ಮತ್ತು ಶೇಂಗಾ (ಕಡಲೆ ಬೀಜ) ಸೇವನೆಯಿಂದಲೇ ಕೋತಿಗಳು ಮೃತಪಟ್ಟಿವೆ ಎನ್ನುವುದನ್ನು ಪತ್ತೆ ಹಚ್ಚಿದ್ದಾರೆ. ಇದರೊಂದಿಗೆ ಕೋತಿಗಳನ್ನು ಉದ್ದೇಶಪೂರ್ವಕವಾಗಿಯೇ ಹತ್ಯೆ ಮಾಡಲಾಗಿದೆ ಎನ್ನುವುದು ಖಚಿತಪಟ್ಟಿದೆ. ಕಳೆದ ಭಾನುವಾರ ವಾಸುಪಟ್ಟಣದ ದೊಡ್ಡೂರು ರಸ್ತೆಬದಿಯಲ್ಲಿ ಗೋಣಿ ಚೀಲದಲ್ಲಿ ಮೃತ ಕೋತಿಗಳನ್ನು ತಂದು ಬಿಸಾಡಲಾಗಿತ್ತು. ಇದನ್ನು ಕಂಡು ಮಮ್ಮಲ ಮರುಗಿದ ಸ್ಥಳಿಯರು ಮೃತ ಕೋತಿಗಳಿಗೆ ಪೂಜೆ ನೆರವೇರಿಸಿ, ನಂತರ ಅಲ್ಲಿಯೇ ಗುಂಡಿ ತೆಗೆದು ಅಂತ್ಯಸಂಸ್ಕಾರ ಮಾಡಿದ್ದರು. ಅಷ್ಟೇ ಅಲ್ಲದೆ, ಕೋತಿಗಳನ್ನು ಬೇಕಂತಲೇ ಹತ್ಯೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಆಗ್ರಹಿಸಿದ್ದರು. ಈ ಸಂಬಂಧ ಮಾಧ್ಯಮಗಳಲ್ಲಿಯೂ ವರದಿ ಪ್ರಕಟ ಮಾಡಿತ್ತು. ಇದರಿಂದ ಎಚ್ಚೆತ್ತ ಕನಕಪುರ ಪ್ರಾದೇಶಿಕ ಅರಣ್ಯ ಉಪವಿಭಾಗದ ಎಸಿಎಫ್ ಗಣೇಶ್, ಆರ್ಎಫ್ಒ ದಾಳೇಶ್ ಸ್ಥಳಕ್ಕೆ ಭೇಟಿ ನೀಡಿ ಕೋತಿಗಳ ಮೃತದೇಹಗಳನ್ನು ಹೊರತೆಗೆದು ಪರಿಶೀಲನೆ ನಡೆಸಿದರು. ಮೊದಲಿಗೆ ಇವುಗಳನ್ನು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಸಾಯಿಸಲಾಗಿದೆ ಎಂದು ಹೇಳಲಾಗಿತ್ತಾದರೂ. ಪರಿಶೀಲನೆ ನಂತರ ವಿಷ ಉಣಿಸಿ ಸಾಯಿಸಿರುವುದು ದೃಢಪಟ್ಟಿದೆ. ಬೆಳೆ ರಕ್ಷಣೆಗಾಗಿ ಕೋತಿಗಳನ್ನು ಅಮಾನುಷವಾಗಿ ಹತ್ಯೆ ಮಾಡಿದ್ದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದಷ್ಟೇ ಅಲ್ಲದೆ, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಆಗ್ರಹ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ವನ್ಯಜಿವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ನ್ಯಾಯಾಲಯಕ್ಕೆ ಎಫ್ಐಆರ್ ಸಲ್ಲಿಕೆ ಮಾಡಿದ್ದಾರೆ. ಅಲ್ಲದೆ, ತನಿಖೆ ಕೈಗೊಂಡಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. 1ಕೆಆರ್ ಎಂಎನ್ 7.ಜೆಪಿಜಿ ಮೃತ ಕೋತಿಗಳ ಮರಣೋತ್ತರ ಪರೀಕ್ಷೆ ನಡೆಸುತ್ತಿರುವುದು.