ಶಿವಾನಂದ ಪಿ.ಮಹಾಬಲಶೆಟ್ಟಿ
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಅಟಲ್ ಆವಾಸ್, ಪ್ರಧಾನಮಂತ್ರಿ ಗೃಹ ಯೋಜನೆಗಳಲ್ಲಿ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ನಿಗದಿತ ಕಾಲದಲ್ಲಿ ಮನೆಗಳ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದರೂ ಫಲಾನುಭವಿಗಳಿಗೆ ಹಂಚಿಕೆ ಮಾಡದೇ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.
ಖಾಸಗಿ ಬಡ್ಡಿಯಡಿ ತಮಗೊಂದು ಸ್ವಂತ ಸೂರು ಸಿಗುವ ಭರವಸೆಯಲ್ಲಿ ಸಾಲ ಮಾಡಿ 2021ರಲ್ಲಿ ಲಕ್ಷಾಂತರ ರೂ. ಭರಿಸಿದ್ದ ಫಲಾನುಭವಿಗಳು 5 ವರ್ಷಗಳ ಕಾಲ ಬಡ್ಡಿ ತುಂಬಿ ಹೈರಾಣಾಗಿದ್ದಾರೆ. ತಮಗೂ ಒಂದು ಮನೆ ಹಂಚಿಕೆಯಾಗುತ್ತೆ ಎಂಬ ನಿರೀಕ್ಷೆಯಲ್ಲಿ ಬಕಪಕ್ಷಿಗಳಂತೆ ಕಾದು ಕೂತಿದ್ದರೂ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ಸ್ವಯಂ ಮೆಟ್ಟಿಕೊಂಡಿರುವ ಕೊಳೆಯಲ್ಲೇ ಗಾಢ ನಿದ್ರೆಯಲ್ಲಿ ಮಲಗಿರುವುದು ಫಲಾನುಭವಿಗಳ ನಿದ್ದೆಗೆಡಿಸಿದೆ.ಇದು ರಬಕವಿಯಲ್ಲಿ ಒಟ್ಟು 25540 ಚ.ಮೀ. ವಿಶಾಲ ಜಾಗದಲ್ಲಿ ಜಿ1 ಮಾದರಿಯ ಒಟ್ಟು 565 ಮನೆಗಳು ನಿರ್ಮಾಣಗೊಂಡು ವಿತರಣೆಗೆ ಸಿದ್ಧವಾಗಿದ್ದರೂ ಹಾಳಾಗುವವರೆಗೆ ವಿತರಿಸುತ್ತಿಲ್ಲವೆಂಬ ಆಣೆಗೆ ಕಟ್ಟುಬಿದ್ದಂತಿರುವ ಅಧಿಕಾರಿಗಳು ಹಾಗೂ ಸೌಜನ್ಯಕ್ಕೂ ಇತ್ತ ತಿರುಗಿ ನೋಡುತ್ತಿಲ್ಲ. ಆಡಳಿತ ವರ್ಗವಾಗಲಿ, ಜನಪ್ರತಿನಿಧಿಗಳಾಗಲಿ ಯಾರೂ ಇತ್ತ ಚಿತ್ತ ಹರಿಸಿಲ್ಲ ಎಂಬುವುದೇ ಅಪಸವ್ಯವಾಗಿದೆ.
2025ರ ನವೆಂಬರ್‌ನಲ್ಲಿ ಮನೆ ವಿತರಣೆಗೆ ಬೆಳಗ್ಗೆ 10ಕ್ಕೆ ಸಮಯ ನಿಗದಿ ಮಾಡಿದ್ದ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಎಂದಿನಂತೆ ತಡವಾಗಿ ಮಧ್ಯಾಹ್ನ 2.05ಕ್ಕೆ ಬಂದು ಕಾಟಾಚಾರ ಎಂಬಂತೆ ಬಂದಷ್ಟೇ ವೇಗವಾಗಿ ತೆರಳಿದ್ದರು.
ಒಟ್ಟು 25,340 ಚ.ಮೀ.ಜಾಗೆಯಲ್ಲಿ 18,815 ಚ.ಮೀ.ಜಾಗದಲ್ಲಿ ಪ್ರತಿ ಮನೆಗೆ ₹ 7 ಲಕ್ಷ ಹಣ ವ್ಯಯಿಸಿ, ಎಸ್.ಸಿ.ಫಲಾನುಭವಿಗಳಿಗೆ ₹ 69,500 ಹಾಗೂ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ₹ 1.38 ಲಕ್ಷ ಮೊತ್ತ ನಿಗದಿಗೊಳಿಸಿ ಕೊಳಚೆ ಮಂಡಳಿ ಭರಿಸಿಕೊಂಡಿದೆ. ಒಟ್ಟು 565 ಮನೆಗಳನ್ನು ನಿರ್ಮಿಸಿದ್ದು, 384 ಜಿ-1 ಮನೆಗಳಾಗಿದ್ದರೆ ಸ್ವಂತ ಜಾಗೆಗಳಲ್ಲಿ ಒಟ್ಟು 157 ಫಲಾನುಭವಿಗಳು ಮನೆ ನಿರ್ಮಿಸಿಕೊಳ್ಳುತ್ತಿದ್ದು, ಈವರೆಗೆ 24 ಫಲಾನುಭವಿಗಳು ಮನೆ ನಿರ್ಮಾಣ ಪೂರ್ಣಗೊಳಿಸಿಕೊಂಡಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪಾಲು ₹37,09,77,000ಗಳಷ್ಟು ಬೃಹತ್ ಮೊತ್ತದ ಅನುದಾನ ಬಳಕೆಯಾಗಿದ್ದರೂ ಫಲಾನುಭವಿಗಳಿಗೆ ದೊರಕುತ್ತಿಲ್ಲ.
ಸಕಾಲದಲ್ಲಿ ಫಲಾನುಭವಿಗಳಿಗೆ ಮನೆಗಳ ಹಸ್ತಾಂತರ ಮಾಡಿದ್ದರೆ ಇಂಥ ಅಕ್ರಮಗಳಿಗೆ ಕಡಿವಾಣ ಹಾಕಬಹುದಿತ್ತು. ಮನೆಗಳ ಕಾವಲಿಗೆ ವಯಸ್ಸಾದ ವ್ಯಕ್ತಿಯನ್ನು ಮಾಸಿಕ ₹2 ಸಾವಿರ ಮೊತ್ತ ನೀಡಿ ಇಟ್ಟಿದ್ದರೂ ನಿಷ್ಪ್ರಯೋಜಕವಾಗಿದೆ. ಫಲಾನುಭವಿಗಳಿಗೆ ವಿತರಣೆಗೆ ಸಿದ್ಧಗೊಂಡ ಮನೆಗಳು ಶೇ.40ರಷ್ಟು ದುಷ್ಕರ್ಮಿಗಳ ಅಟ್ಟಹಾಸಕ್ಕೆ ಹಾಳಾಗಿದೆ. ಫಲಾನುಭವಿಗಳಿಗೆ ವಿತರಿಸುವ ಮೊದಲು ಸ್ಲಂ ಬೋರ್ಡ್ ಅಧಿಕಾರಿಗಳು ದುರಸ್ತಿ ಮಾಡಿಸಬೇಕು ಇಲ್ಲವಾದಲ್ಲಿ ಫಲಾನುಭವಿಗಳಿಗೇ ರಿಪೇರಿ ಭಾಗ್ಯದ ಹೊರೆ ಖಚಿತ.
ಈ ಪ್ರಕರಣದ ಹಿನ್ನೆಲೆಯಲ್ಲಿ ನಿಗಮ ಸುಧಾರಿಸಬೇಕಿತ್ತಾದರೂ ಅಧಿಕಾರಿಗಳು ಏನೇ ಆದರೂ ಸುಧಾರಿಸುವುದಿಲ್ಲ ಎಂಬುದು ಸ್ಪಷ್ಟವಾಗುತ್ತಿದ್ದರೆ, ಇತ್ತ ಖಾಸಗಿ ವ್ಯಕ್ತಿಗಳಿಂದ ಪಡೆದ ಸಾಲಕ್ಕೆ ಬಡ್ಡಿ ಹಣ ತುಂಬಿ ಸುಸ್ತಾಗಿರುವ ಫಲಾನುಭವಿಗಳು ಮಾತ್ರ ಐದು ವರ್ಷಗಳಾದರೂ ತಮಗೆ ಯಾವಾಗ ಮನೆ ಸಿಗುತ್ತದೆ ಎಂಬ ಚಿಂತೆಯಲ್ಲಿದ್ದಾರೆ. ಕೇಳುವವರಿಲ್ಲದೇ ಮನಬಂದಂತೆ ನಡೆದುಕೊಳ್ಳುತ್ತಿರುವ ಪುಢಾರಿಗಳಿಗೆ ಮಾತ್ರ ಪುಷ್ಕಳ ರಸಗವಳ ನಿರಂತರ ದೊರೆಯುತ್ತಿದೆ ಎನ್ನುತ್ತಾರೆ ಇಲ್ಲಿನ ನಾಗರಿಕರು.
ರಾಷ್ಟ್ರೀಕೃತ ಬ್ಯಾಂಕ್‌ಗಳ ಮೂಲಕ ಕೊಳಚೆ ನಿರ್ಮೂಲನಾ ಮಂಡಳಿಗೆ ಹಣ ಭರಣಾ ಮಾಡಿ ಐದು ವರ್ಷಗಳಾದರೂ ಇನ್ನೂ ಮನೆಗಳ ನೀಡಿಲ್ಲ. ನಾವು ಕೂಲಿ ಮಾಡುವ ಮನೆಯೊಡೆಯರ ಬಳಿ ಸಾಲ ಪಡೆದುಕೊಂಡಿದ್ದು, ನಾವು ದುಡಿದ ಹಣ ಬಡ್ಡಿಗೇ ಸರಿಯಾಗುತ್ತಿದೆ. ಮನೆಯಾಸೆಗೆ ಬಿದ್ದು ಸದ್ಯ ಮನೆ ನಡೆಸುವುದೇ ದುಸ್ತರವಾಗಿದೆ. ಸರ್ಕಾರ ನೀಡುವ ಅಕ್ಕಿ, ಗೃಹಲಕ್ಷ್ಮೀ, ಗೃಹಜ್ಯೋತಿ ಯೋಜನೆಗಳೇ ನಮಗೆ ಆಸರೆಯಾಗಿವೆ. ಮನೆ ಬಾಡಿಗೆ ನೀಡುವುದು ತಪ್ಪುವತ್ತ ಸ್ಲಂ ಬೋರ್ಡ ಅಧಿಕಾರಿಗಳು ತಕ್ಷಣ ನಮಗೆ ಮನೆಗಳನ್ನು ವಿತರಿಸಬೇಕು. ಇಲ್ಲವಾದಲ್ಲಿ ವಿಜಯಪುರದ ಕಚೇರಿ ಎದುರು ನಿರಶನ ನಡೆಸಲು ನಾವು ಸಿದ್ಧರಿದ್ದೇವೆ.
ನಾನು ಖಾಸಗಿ ಮನೆಗಳಲ್ಲಿ ಕೂಲಿ ಮಾಡುತ್ತಿದ್ದು, ಎರಡು ಮಕ್ಕಳೊಡನೆ ಬಾಡಿಗೆ ಮನೆಯಲ್ಲಿ ವಾಸವಿದ್ದೇನೆ. ಮಕ್ಕಳ ಶಿಕ್ಷಣ ವೆಚ್ಚ, ಮನೆ ನಿರ್ವಹಣೆ, ಬಾಡಿಗೆ ಪಾವತಿಸುವುದು ಹೊರೆಯಾಗಿದ್ದರಿಂದ ಸ್ಲಂ ಬೋರ್ಡ್ಗೆ ಎಸ್‌ಬಿಐ ಮೂಲಕ ಹಣ ಪಾವತಿಸಿದ್ದು, ಮನೆಗಳ ಫಲಾನುಭವಿಗಳ ಪಟ್ಟಿಯಲ್ಲಿ ಹೆಸರಿದೆ ಆದರೆ ಇನ್ನೂ ವಿತರಣೆಯಾಗಿಲ್ಲ. ಮನೆಗಾಗಿ ನೀಡಿದ ಹಣದ ಬಡ್ಡಿ ಹಾಗೂ ಮನೆ ಬಾಡಿಗೆ ತುಂಬಿ ಸುಸ್ತಾಗಿದ್ದು ತಯಾರಾಗಿರುವ ಮನೆಗಳನ್ನು ವಿತರಿಸಿದರೆ ಮಹದುಪಕಾರವಾಗುತ್ತದೆ.
-ಪದ್ಮಾಕ್ಷಿ ಅಪ್ಪಾಸಾಹೇಬ ಪೋತೆ. ಫಲಾನುಭವಿ, ಬನಹಟ್ಟಿ.
ನವೆಂಬರ್ ತಿಂಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ.ಬಿ.ತಿಮ್ಮಾಪುರ ಆಯ್ದ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಿದ್ದಾರೆ. ಮುಂದಿನ ವಿತರಣೆಗೆ ಸಂಬಂಧಿತ ಸಮಸ್ಯೆಗಳ ಬಗ್ಗೆ ಎಇ ಸೋಹೆಲ ಅವರೊಡನೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.
-ಶ್ವೇತಾ ಬೀಡಿಕರ, ಉಪವಿಭಾಗಾಧಿಕಾರಿಗಳು ಜಮಖಂಡಿ.