ಜಪಾನ್‌ದಲ್ಲಿ ಮತ್ತೊಮ್ಮೆ ಪ್ರಶಸ್ತಿ ಪಡೆದ ಇಕೋ ಸೈಕಲ್: ಕನ್ನಡಿಗನ ಅಪೂರ್ವ ಸಾಧನೆ

KannadaprabhaNewsNetwork |  
Published : Jan 28, 2026, 03:00 AM IST
ಡಾ.ಶ್ರೀಹರಿ ಚಂದ್ರಘಾಟಗಿ  | Kannada Prabha

ಸಾರಾಂಶ

ಜಪಾನಿನಲ್ಲಿರುವ ಅನಿವಾಸಿ ಕನ್ನಡಿಗ ಡಾ. ಶ್ರೀಹರಿ ಚಂದ್ರಘಾಟಗಿ ಅವರ ಮಾಲೀಕತ್ವದ ಇಕೋ ಸೈಕಲ್ ಕಾರ್ಪೊರೇಷನ್ ಸಂಸ್ಥೆಯು ಕಳೆದ 3 ತಿಂಗಳಿನಲ್ಲಿ ಎರಡನೇ ಬಾರಿಗೆ ಜಪಾನಿನ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನವಾಗಿದೆ.

3 ತಿಂಗಳಿನಲ್ಲಿ ಎರಡನೇ ಬಾರಿಗೆ ಜಪಾನಿನ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನ

ವಸಂತಕುಮಾರ್ ಕತಗಾಲ

ಕನ್ನಡಪ್ರಭ ವಾರ್ತೆ ಕಾರವಾರ

ಜಪಾನಿನಲ್ಲಿರುವ ಅನಿವಾಸಿ ಕನ್ನಡಿಗ ಡಾ. ಶ್ರೀಹರಿ ಚಂದ್ರಘಾಟಗಿ ಅವರ ಮಾಲೀಕತ್ವದ ಇಕೋ ಸೈಕಲ್ ಕಾರ್ಪೊರೇಷನ್ ಸಂಸ್ಥೆಯು ಕಳೆದ 3 ತಿಂಗಳಿನಲ್ಲಿ ಎರಡನೇ ಬಾರಿಗೆ ಜಪಾನಿನ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನವಾಗಿದೆ.

ಮೂರು ತಿಂಗಳ ಹಿಂದೆ ಇಕೋ ಸೈಕಲ್ ಕಾರ್ಪೊರೇಷನ್‌ಗೆ ಜಪಾನ್ ಸರ್ಕಾರದ ಸೂಪರ್ ಮ್ಯಾನುಫ್ಯಾಕ್ಚರ್ಸ್ ಪ್ರಶಸ್ತಿ ಬಂದಿದ್ದರೆ, ಈ ಬಾರಿ ಪ್ರತಿಷ್ಠಿತ ಗುಡ್ ಕಂಪನಿ ಪ್ರಶಸ್ತಿಗೆ ಇದು ಆಯ್ಕೆಯಾಗಿರುವುದು ವಿಶೇಷ.

ವಿಜ್ಞಾನ ತಂತ್ರಜ್ಞಾನದಲ್ಲಿ ಅತ್ಯಂತ ಮುಂದಿರುವ ಜಪಾನಿನಲ್ಲಿ ಉತ್ತರ ಕನ್ನಡದ ಸಿದ್ದಾಪುರ ತಾಲೂಕಿನ ಶ್ರೀಹರಿ ಚಂದ್ರಘಾಟಿಗಿ, ಇಕೋ ಸೈಕಲ್ ಕಾರ್ಪೊರೇಷನ್ ಸಂಸ್ಥೆಯನ್ನು ಹುಟ್ಟುಹಾಕಿ, ತನ್ಮೂಲಕ ಕೈಗಾರಿಕಾ ಮಾಲಿನ್ಯ ಮುಕ್ತಗೊಳಿಸುವ ವಿವಿಧ ತಂತ್ರಜ್ಞಾನ ಅಭಿವೃದ್ಧಿಪಡಿಸಿ, ಹಲವು ಪ್ರತಿಷ್ಠಿತ ಕಂಪನಿಗಳಿಗೆ ಅನನ್ಯ ಸೇವೆ ಸಲ್ಲಿಸುತ್ತಿದ್ದಾರೆ.

1967ರಲ್ಲಿ ಸ್ಥಾಪಿತವಾದ ಜಪಾನಿನ ಗುಡ್ ಕಂಪನಿ ಪ್ರಶಸ್ತಿಯನ್ನು ಅಲ್ಲಿಯ ಸಣ್ಣ ಮತ್ತು ಮಧ್ಯಮ ಉದ್ಯಮಿಗಳ ಸಂಶೋಧನಾ ಸಂಸ್ಥೆಯಿಂದ ಪ್ರದಾನ ಮಾಡಲಿದ್ದು, ಸಮಾಜಮುಖಿ ಸೇವೆಗಳಲ್ಲಿ ಅಸಾಧಾರಣ ಸಾಧನೆ ತೋರಿದ ಮತ್ತು ಆರ್ಥಿಕವಾಗಿಯೂ ಪ್ರಗತಿ ಸಾಧಿಸಿದ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ನೀಡುತ್ತಿರುವ ರಾಷ್ಟ್ರ ಮಟ್ಟದ ಪ್ರಶಸ್ತಿ ಇದಾಗಿದೆ. ಈ ಪ್ರಶಸ್ತಿಯನ್ನು ಫೆ. 2ರಂದು ಟೋಕಿಯೋದ ಓಟಿಮಾಚಿಯಲ್ಲಿ ನಡೆಯುವ ಭವ್ಯ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು.

ಜಪಾನ್ ಕಂಪನಿಗಳು ವಿಶ್ವ ದರ್ಜೆಯ ಗುಣಮಟ್ಟಕ್ಕೆ ಹೆಸರುವಾಸಿ. ಇವುಗಳೊಂದಿಗೆ ಪೈಪೋಟಿಯಲ್ಲಿ ಗೆದ್ದು, ಅಲ್ಲಿಯ ವಾಣಿಜ್ಯ ವಲಯದಲ್ಲಿ ಒಂದು ವಿಶಿಷ್ಟ ಗಳಿಸಿಕೊಂಡು ಹೊಸ ಛಾಪು ಮೂಡಿಸಿಕೊಂಡಿರುವ ಇಕೋ ಸೈಕಲ್ ಸಾಧನೆ ನಿಜಕ್ಕೂ ಆಶ್ಚರ್ಯದಾಯಕ.

ಡಾ. ಶ್ರೀಹರಿ ಚಂದ್ರಘಾಟಗಿ ಕಳೆದ ಎರಡುವರೆ ದಶಕಗಳಿಂದ ಟೋಕಿಯೋದಲ್ಲಿಯೇ ನೆಲೆಸಿ, ಇಕೋ ಸೈಕಲ್ ಕಾರ್ಪೊರೇಷನ್ ಸಂಸ್ಥೆ ಸ್ಥಾಪಿಸಿ, ಇದರ ಅಧ್ಯಕ್ಷರಾಗಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಇದಲ್ಲದೇ ಶ್ರೀಹರಿಯವರು ಮೈಕ್ರೋ ಬಯೋಲಜಿಸ್ಟ್ ಆಗಿ ಕೃಷಿ, ಜಲ ಸಂಪನ್ಮೂಲಗಳ ರಕ್ಷಣಾ ಕ್ಷೇತ್ರಗಳಲ್ಲಿ ಅಪಾರ ಕೊಡುಗೆ ನೀಡಿದ್ದಲ್ಲದೇ ಕೈಗಾರಿಕಾ ಮಾಲಿನ್ಯಗಳನ್ನು ತಡೆಗಟ್ಟುವ ಸಂಶೋಧನೆ ನಡೆಸಿದ್ದಾರೆ.

ತಮ್ಮ ಇಕೊ ಸೈಕಲ್ ಸಂಸ್ಥೆಯ ಮೂಲಕ 2006ರಿಂದಲೂ ಪರಿಸರ ಸಂರಕ್ಷಣೆ ಮತ್ತು ಅಂತರ್ಜಲದ ಮಟ್ಟ ಹೆಚ್ಚಿಸುವ ಜೊತೆಗೆ ಅಂತರ್ಜಲದ ಮಾಲಿನ್ಯ ತಡೆಗಟ್ಟಲು ಹಲವು ನೂತನ ತಂತ್ರಜ್ಞಾನಗಳನ್ನು ಇವರು ಸಂಶೋಧಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಲೆ, ಕಲಾವಿದರನ್ನು ಗೌರವಿಸಿದರೆ ಸಾಂಸ್ಕೃತಿಕ ವೈಭವ ಹೆಚ್ಚಳ: ಸಚಿವ ಮಂಕಾಳ ವೈದ್ಯ
ಇಂದು ವಿಬಿ ಜಿ ರಾಮ್ ಜಿ ಯೋಜನೆ ವಿರೋಧ ಖಂಡಿಸಿ ಕಾರ್ಯಾಗಾರ