ಮಹಾತ್ಮ ಗಾಂಧಿ ನರೇಗಾ ಯೋಜನೆ ಜನರಿಗೆ ಅನುಕೂಲ ಆಗಲಿ ಎಂದು ಕೇಂದ್ರ ಸರ್ಕಾರ ಬದಲಾವಣೆ ಮಾಡಿ ವಿಬಿ ಜಿ ರಾಮ್ ಜಿ ಯೋಜನೆ ಜಾರಿಗೆ ತಂದಿದೆ
ಕುಕನೂರು: ವಿಕಸಿತ ಭಾರತ ರೋಜಗಾರ ಮತ್ತು ಅಜೀವಿಕ ಮಿಷನ್ ಯೋಜನೆಯನ್ನು ಕಾಂಗ್ರೆಸ್ ವಿರೋಧ ಮಾಡುತ್ತಿದ್ದು, ವಿರೋಧ ಖಂಡಿಸಿ ಯಲಬುರ್ಗಾ ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಜ.28ರಂದು ಬೆಳಗ್ಗೆ 11ಗಂಟೆಗೆ ಕಾರ್ಯಾಗಾರ ಜರುಗಲಿದೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಹೇಳಿದರು.
ತಾಲೂಕಿನ ಮಸಬಹಂಚಿನಾಳ ಗ್ರಾಮದ ಬಿಜೆಪಿ ಕಾರ್ಯಾಲಯದಲ್ಲಿ ಸೋಮವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮಹಾತ್ಮ ಗಾಂಧಿ ನರೇಗಾ ಯೋಜನೆ ಜನರಿಗೆ ಅನುಕೂಲ ಆಗಲಿ ಎಂದು ಕೇಂದ್ರ ಸರ್ಕಾರ ಬದಲಾವಣೆ ಮಾಡಿ ವಿಬಿ ಜಿ ರಾಮ್ ಜಿ ಯೋಜನೆ ಜಾರಿಗೆ ತಂದಿದೆ. ಭಾರತದ ವಿಕಸಿತ ಗುರಿಯಾಗಿಸಿಕೊಂಡು ಯೋಜನೆ ರೂಪಿಸಲಾಗಿದೆ. ಗ್ರಾಮೀಣ ಜನರಿಗೆ ಈ ಯೋಜನೆಯಿಂದ ಸದುಪಯೋಗ ಆಗಲಿದೆ. ಇದನ್ನು ಕಾಂಗ್ರೆಸ್ ವಿರೋಧಿಸುತ್ತಿರುವುದು ಹಾಸ್ಯಾಸ್ಪದ. 100 ದಿನಗಳ ಬದಲು 125 ದಿನಗಳ ಕೆಲಸ ಹಾಗೂ ₹349 ಕೂಲಿ ಬದಲು ₹379 ಕೂಲಿ ಹೆಚ್ಚಳ ಮಾಡಲಾಗಿದೆ. ಹೆಸರು ಬದಲಾವಣೆ ಮಾಡುವುದು ಸಹಜ. ಜವಾಹರ ರೋಜಗಾರ ಯೋಜನೆ ಇದ್ದದ್ದನ್ನು ಮಹಾತ್ಮ ಗಾಂಧಿ ನರೇಗಾ ಯೋಜನೆ ಎಂದು ಬದಲಾವಣೆ ಮಾಡಿದ್ದರು. ಹೆಸರು ಬದಲಾವಣೆಯಿಂದ ಗಾಂಧೀಜಿಗೆ ಅವಮಾನಿಸಿಲ್ಲ. ಸ್ವತಃ ಸೋನಿಯಾ ಗಾಂಧಿಯವರೇ ನರೇಗಾ ಯೋಜನೆಯ ಉದ್ಯೋಗ ಖಾತ್ರಿ ಕಾರ್ಡಗಳು ನಕಲಿ ಇವೆ ಎಂದಿದ್ದರು. ಅಡಿಟ್ ವರದಿಯಲ್ಲಿ ಸಹ ನರೇಗಾ ಲೋಪ ಎದ್ದು ಕಾಣುತ್ತದೆ ಎಂದರು.ಕಾಂಗ್ರೆಸ್ಸಿಗರಿಗೆ ಹೊಟ್ಟೆ ನೋವು: ಜನರಿಗೆ ಅನುಕೂಲ ಆಗುವ ದೃಷ್ಠಿ ಕೋನದಲ್ಲಿ ವಿಬಿ ಜಿ ರಾಮ್ ಜಿ ಹೆಸರು ಇಡಲಾಗಿದೆ. ಇದನ್ನು ರಾಮ್ ರಾಮ್ ಯೋಜನೆಯೆಂದು ಕಾಂಗ್ರೆಸ್ ಮಾಡುವ ಲೇವಡಿಗೆ ಅಭಿವೃದ್ಧಿ ಮೂಲಕ ತಕ್ಕ ಉತ್ತರ ಕೇಂದ್ರ ಸರ್ಕಾರದಿಂದ ಸಿಗುತ್ತಿದೆ. ಮಹಾತ್ಮ ಗಾಂಧಿಯನ್ನು ಗೌರವಿಸುವ ಕಾಂಗ್ರೆಸ್ಸಿಗರು ಗಾಂಧೀಜಿ ಕೊನೆ ಉಸಿರು ಎಳೆಯುವ ಸಂದರ್ಭದಲ್ಲಿ ನೆನೆದ ಶ್ರೀರಾಮ ದೇವರ ಮೇಲೆ ಯಾಕೆ ಇವರಿಗೆ ನಂಬಿಕೆ ಇಲ್ಲ. ವಿಬಿ ಜಿ ರಾಮ್ ಜಿ ಅಂದರೆ ವಿಕಸಿತ ಭಾರತ ರೋಜಗಾರ ಅಜೀವಿಕ ಮಿಷನ್ ಎಂದು. ಅಭಿವೃದ್ಧಿ ಕಾರ್ಯ ಕಂಡು ಕಾಂಗ್ರೆಸ್ಸಿಗರಿಗೆ ಹೊಟ್ಟೆ ನೋವು ಹೇಳಿದರು.
ಖಾಲಿ ಖಜಾನೆ ಸರ್ಕಾರ: ಕಾಂಗ್ರೆಸ್ ಸರ್ಕಾರದ ಹಣ ಗ್ಯಾರಂಟಿ ಯೋಜನೆಗೆ ಹೊರಟಿದೆ. ಸಾಮಾನ್ಯ ಜನರ ಜನನ, ಮರಣ, ಪಹಣಿ, ರಿಜಿಸ್ಟರ್ ಫೀಗಳ ಮೇಲೆ ಹೊರೆ ಹಾಕಿದ್ದಾರೆ, ಜನರಿಗೆ ಕಾಂಗ್ರೆಸ್ಸಿಗರು ಯಾಮಾರಿಸುತ್ತಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಎರಡು ತಿಂಗಳ ಗ್ಯಾರಂಟಿ ಯೋಜನೆಯ ಗೃಹಲಕ್ಷ್ಮೀ ಹಣ ನೀಡಿದ್ದೇವೆ ಎಂದು ಸುಳ್ಳು ಹೇಳಿ ಬೆಳಗಾವಿ ಕಲಾಪದಲ್ಲಿ ಮೂರ್ನಾಲ್ಕು ದಿನಗಳ ನಂತರ ಹಣ ನೀಡಿಲ್ಲ ಎಂದು ಸುಳ್ಳು ಹೇಳಿದರು. ಇದು ತಲೆ ತಗ್ಗಿಸುವ ಕೆಲಸ ಎಂದರು.ಅಬಕಾರಿ ಸಚಿವರ ಹಗಲು ದರೋಡೆ: ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ₹2500 ಕೋಟಿ ಹಣ ಲೂಟಿ ಮಾಡಿ ಹಗಲು ದರೋಡೆ ಕಾರ್ಯ ಮಾಡಿದ್ದಾರೆ. ರಾಜ್ಯದಲ್ಲಿ ಸುಮಾರು ₹2,500 ಕೋಟಿಗಳ ಮದ್ಯ ಸಂಬಂಧಿತ ಹಗರಣ ಸಚಿವ ತಿಮ್ಮಾಪೂರ ಅವರಿಂದ ಜರುಗಿದೆ. ಇದಕ್ಕೆ ಸಂಬಂಧಿಸಿದ ಆಡಿಯೋಗಳು ಸಹ ಇವೆ. ಅಬಕಾರಿ ಇಲಾಖೆಯಲ್ಲಿ ಪರವಾನಗಿ ನೀಡಲು ಲಂಚ ಪಡೆದಿದ್ದಾರೆ. ಈ ಹಗರಣಕ್ಕೆ ಸಂಬಂಧಿಸಿದಂತೆ ಸಚಿವರು ಮತ್ತು ಅವರ ಮಗನ ಹೆಸರು ಕೇಳಿ ಬಂದಿದೆ. ಕಾಂಗ್ರೆಸ್ಸಿಗರು ಹಗಲು ದರೋಡೆಗೆ ನಿಂತಿದ್ದಾರೆ. ಈ ಹಣ ಅನ್ಯ ರಾಜ್ಯಗಳ ಚುನಾವಣೆಗೆ ಸಾಗಿಸಿ ಕುಂತಂತ್ರದ ರಾಜಕಾರಣ ಮಾಡುವುದು ಕಾಂಗ್ರೆಸ್ಸಿನ ಸಂಪ್ರದಾಯವೇ ಆಗಿದೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ ದೂರಿದರು.
ಪತ್ರಿಕಾಗೋಷ್ಠಿ ವೇಳೆ ಯಲಬುರ್ಗಾ ಬಿಜೆಪಿ ಮಂಡಲ ಅಧ್ಯಕ್ಷ ಮಾರುತಿ ಹೊಸಮನಿ, ಶಿವಪ್ಪ ವಾದಿ, ಅಮರೇಶ, ವಿಶ್ವನಾಥ ಮರಿಬಸಪ್ಪನವರ್ ಇತರರಿದ್ದರು.