ಮುರುಡೇಶ್ವರದ ಯಕ್ಷರಕ್ಷೆ ವೇದಿಕೆಯಲ್ಲಿ ರಾಗಶ್ರೀ ಸಂಗೀತ ವಿದ್ಯಾಲಯ ಹಡಿನಬಾಳ ಇದರ ಮುರುಡೇಶ್ವರ ಶಾಖೆಯ ಪ್ರಥಮ ವರ್ಷದ ವಾರ್ಷಿಕೋತ್ಸವ ನಡೆಯಿತು.
ಕನ್ನಡಪ್ರಭ ವಾರ್ತೆ ಭಟ್ಕಳ
ಮುರುಡೇಶ್ವರದ ಯಕ್ಷರಕ್ಷೆ ವೇದಿಕೆಯಲ್ಲಿ ರಾಗಶ್ರೀ ಸಂಗೀತ ವಿದ್ಯಾಲಯ ಹಡಿನಬಾಳ ಇದರ ಮುರುಡೇಶ್ವರ ಶಾಖೆಯ ಪ್ರಥಮ ವರ್ಷದ ವಾರ್ಷಿಕೋತ್ಸವ ನಡೆಯಿತು.ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿ, ಕಲೆ ಮತ್ತು ಕಲಾವಿದರನ್ನು ಗೌರವಿಸುವುದರಿಂದ ಸಮಾಜ ಸಾಂಸ್ಕೃತಿಕವಾಗಿ ತನ್ನ ವೈಭವವನ್ನು ಹೆಚ್ಚಿಸಿಕೊಳ್ಳುತ್ತದೆ. ಮುರುಡೇಶ್ವರದ ಸಾಂಸ್ಕೃತಿಕ ರಾಯಭಾರಿ ಐ.ಆರ್. ಭಟ್ಟ ಅವರನ್ನು ಸನ್ಮಾನಿಸಿ ಗೌರವಿಸಿದ ರಾಗಶ್ರೀ ಸಂಗೀತ ವಿದ್ಯಾಲಯದ ಕಾರ್ಯವನ್ನು ಶ್ಲಾಘಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಆಡಳಿತ ನಿರ್ದೇಶಕಿ ಪುಷ್ಪಲತಾ ವೈದ್ಯ ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲೂ ಉಲ್ಲಾಸ, ಉತ್ಸಾಹ ಮತ್ತು ಸಾಂಸ್ಕೃತಿಕ ಮನಸ್ಸನ್ನು ಹೆಚ್ಚಿಸಿಕೊಳ್ಳಲು ಸಂಗೀತದ ಆಸ್ವಾದನೆ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪ್ರಸ್ತುತ ಜೀವನದ ಒತ್ತಡವನ್ನು ಶಮನಗೊಳಿಸಲು ಕಲೆಯನ್ನು ಅವಲಂಬಿಸಿದರೆ ಸಾಧ್ಯ ಎಂದು ಅಭಿಪ್ರಾಯಪಟ್ಟರು. ಮುರುಡೇಶ್ವರದಲ್ಲಿ ಯಕ್ಷರಕ್ಷೆಯನ್ನು ಸ್ಥಾಪಿಸಿ ಸಂಗೀತ, ನೃತ್ಯ ಮತ್ತು ಯಕ್ಷಗಾನದ ಎಲ್ಲಾ ಪ್ರಾಕಾರಗಳಿಗೆ ವೇದಿಕೆಯನ್ನು ಕಲ್ಪಿಸಿ ಕೊಟ್ಟ ಕಲಾಪೋಷಕ ಡಾ. ಐ.ಆರ್.ಭಟ್ಟ ಅವರಿಗೆ ರಾಗಶ್ರೀಯ ಕಲಾಸೇವಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಹಿರಿಯ ವಿದ್ವಾಂಸ ಶಂಭು ಭಟ್ಟ ಕಡತೋಕ, ಭಟ್ಕಳ ಅರ್ಬನ್ ಬ್ಯಾಂಕ್ ನಿವೃತ್ತ ಪ್ರಧಾನ ವ್ಯವಸ್ಥಾಪಕ ಶಂಭು ಹೆಗಡೆ, ಎಲ್.ಎಂ.ಹೆಗಡೆ, ಎಸ್. ಜಿ. ಭಟ್ಟ, ಮುರ್ಡೇಶ್ವರ ಪಿಎಸ್‌ಐ ಹಣಮಂತ ಬೀರಾದಾರ ಮಾತನಾಡಿದರು.
ರಾಗಶ್ರೀ ಸಂಗೀತ ವಿದ್ಯಾಲಯದ ಅಧ್ಯಕ್ಷ ಶಿವಾನಂದ ಭಟ್ಟ ಹಡಿನಬಾಳ ಸ್ವಾಗತಿಸಿದರು. ಬಿಂದು ಅವಧಾನಿ ನಿರೂಪಿಸಿದರು. ಕಾರ್ಯದರ್ಶಿ ಎನ್.ಜಿ. ಹೆಗಡೆ ಕೆಪ್ಪಕೆರೆ ವಂದಿಸಿದರು. ಸಭಾ ಕಾರ್ಯಕ್ರಮದ ಪೂರ್ವ ರಾಗಶ್ರೀ ಸಂಗೀತ ವಿದ್ಯಾಲಯ ಮುರುಡೇಶ್ವರ ಶಾಖೆಯ ವಿದ್ಯಾರ್ಥಿಗಳಿಂದ ವಾದನ, ಸಂಗೀತ ಮತ್ತು ಭಜನೆ ನಡೆಯಿತು. ನಂತರ ರಾಗಶ್ರೀ ವಿದ್ಯಾಲಯದ ಶಿಕ್ಷಕಿ ರಂಜಿತಾ ನಾಯ್ಕರ ಹಿಂದುಸ್ತಾನಿ ಗಾಯನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.