ಇಲಾಖೆಯಲ್ಲಿ ಆಗಾಗೆ ನಡೆಯುತ್ತಿರುವ ಹಫ್ತಾ ವಸೂಲಿ ಮಾತುಕತೆ ಆಡಿಯೋ ಪ್ರಕರಣದಲ್ಲಿ ಸಚಿವ ಆರ್.ಬಿ. ತಿಮ್ಮಾಪುರ ಮತ್ತು ಸಚಿವರ ಪುತ್ರನ ಹೆಸರು ಪದೇಪದೇ ಕೇಳಿಬರುತ್ತಿದೆ.

ಕನ್ನಡಪ್ರಭ ವಾರ್ತೆ ಕಾರವಾರ

ಮೂರು ವರ್ಷಗಳಿಂದ ರಾಜ್ಯದ ಅಬಕಾರಿ ಇಲಾಖೆ ವರ್ಗಾವಣೆ, ಹಪ್ತಾ ವಸೂಲಿ ದಂಧೆ, ಕಿಕ್‌ಬ್ಯಾಕ್, ಹೊಸ ಲೈಸೆನ್ಸ್ ಮಂಜೂರಾತಿಗೆ ಲಂಚಗುಳಿತನ ಮತ್ತು ಮಧ್ಯವರ್ತಿಗಳ ಹಾವಳಿಯಿಂದ ನಿರಂತರವಾಗಿ ಸದ್ದು ಮಾಡುತ್ತಿದ್ದರೂ ಸಂಬಂಧಿಸಿದ ಸಚಿವರ ಮೇಲೆ ಕ್ರಮ ಆಗುತ್ತಿಲ್ಲ, ತನಿಖೆಯನ್ನೂ ನಡೆಸುತ್ತಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಕಾರವಾರ ಅಂಕೋಲಾ ಕ್ಷೇತ್ರದ ಮಾಜಿ ಶಾಶಕಿ ರೂಪಾಲಿ ಎಸ್.ನಾಯ್ಕ ಆರೋಪಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಇಲಾಖೆಯಲ್ಲಿ ಆಗಾಗೆ ನಡೆಯುತ್ತಿರುವ ಹಫ್ತಾ ವಸೂಲಿ ಮಾತುಕತೆ ಆಡಿಯೋ ಪ್ರಕರಣದಲ್ಲಿ ಸಚಿವ ಆರ್.ಬಿ. ತಿಮ್ಮಾಪುರ ಮತ್ತು ಸಚಿವರ ಪುತ್ರನ ಹೆಸರು ಪದೇಪದೇ ಕೇಳಿಬರುತ್ತಿದೆ. ಅಂಗಡಿ ತೆರೆಯಲು ಇಲಾಖೆಯ ಕೆಳಹಂತದ ಅಧಿಕಾರಿಗಳಿಂದ ಹಿಡಿದು ಉನ್ನತ ಅಧಿಕಾರಿಗಳ ತನಕ ಲಕ್ಷಾಂತರ ರು. ಲಂಚ ನೀಡಬೇಕಿದೆ. ಪ್ರತಿ ಅಂಗಡಿಯಿಂದ ತಿಂಗಳಿಗೆ ಒಟ್ಟು 15-20 ಸಾವಿರ ರು. ಹಣ ಸಂದಾಯವಾಗುತ್ತಿದೆ. ರಾಜ್ಯದ ಒಂದೊಂದು ಜಿಲ್ಲೆಗಳಲ್ಲಿ ಇಲಾಖೆ ಅಧಿಕಾರಿಗಳು ಹಣ ಫಿಕ್ಸ್ ಮಾಡಿ ವಸೂಲಿ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಅಬಕಾರಿ ಅಕ್ರಮದಿಂದ ರಾಜ್ಯದ ಕಾಂಗ್ರೆಸ್ ಸರ್ಕಾರ ನಲುಗುವಂತಾಗಿದೆ.

ವಿಧಾನಸೌಧದಲ್ಲಿರುವ ಅಬಕಾರಿ ಸಚಿವರ ಕಚೇರಿಯಲ್ಲೇ ವರ್ಗಾವಣೆ ದಂಧೆ ಕುರಿತು ಸಚಿವ, ಸಚಿವರ ಪುತ್ರ, ಆಪ್ತ ಕಾರ್ಯದರ್ಶಿ ಹಾಗೂ ಆಪ್ತ ಸಹಾಯಕರು ವಿರುದ್ಧ ರಾಜ್ಯಪಾಲರಿಗೆ ದೂರು ನೀಡಲಾಗಿತ್ತು. ಭ್ರಷ್ಟಾಚಾರ ಸಂಬಂಧ ಇಲಾಖೆಯ ಸಚಿವರನ್ನು ಬದಲಾಯಿಸುವಂತೆ ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಸರ್ಕಾರಕ್ಕೆ ಪತ್ರ ಸಹ ಬರೆದಿತ್ತು.

ಕಳೆದ ವರ್ಷ ಏಪ್ರಿಲ್‌ನಲ್ಲಿ ಅಬಕಾರಿ ಕಚೇರಿಯಲ್ಲಿ ಜಂಟಿ ಆಯುಕ್ತ (ಐಎಂಎಲ್) ನಡೆಸಿದ ದೂರವಾಣಿ ಸಂಭಾಷಣೆಯಲ್ಲಿ ಸಿಎಲ್-7 ಲೈಸೆನ್ಸ್ ಮಂಜೂರಾತಿಗೆ 18 ಲಕ್ಷ ನೀಡುವ ಬಗ್ಗೆ ಪ್ರಸ್ತಾಪವಾಗಿತ್ತು. ಈ ಆಡಿಯೋದಲ್ಲಿ ಅಬಕಾರಿ ಸಚಿವರ ಮತ್ತು ಅವರ ಪುತ್ರನಿಂದ ದೂರವಾಣಿ ಕರೆ ಮಾಡಿಸಬೇಕೆಂದು ಅಧಿಕಾರಿ ಮಾತನಾಡಿರುವುದು ಕಂಡುಬಂದಿತ್ತು. 2024ರ ನ.10ರಂದು ಮಹಾರಾಷ್ಟ್ರದ ವಿಧಾನಸಭಾ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಕರ್ನಾಟಕದಲ್ಲಿ ಮದ್ಯವರ್ತಕರಿಂದ ಹಣ ವಸೂಲಿ ಮಾಡುತ್ತಿರುವ ಕುರಿತು ಪ್ರಸ್ತಾಪಿಸಿ ಕಾಂಗ್ರೆಸ್‌ಗೆ ಚಾಟಿ ಬೀಸಿದ್ದರು.

ಇಷ್ಟೆಲ್ಲ ಅವಾಂತರ ನಡೆದರೂ ರಾಜ್ಯ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ. ಹಗರಣಕ್ಕೆ ಕಾರಣರಾದ ಸಚಿವರು ಹಾಗೂ ಅಧಿಕಾರಿಗಳ ಮೇಲೆ ಕೂಡಲೇ ಕ್ರಮ ಕೈಗೊಳ್ಳುವಂತೆ ರೂಪಾಲಿ ಎಸ್.ನಾಯ್ಕ ಆಗ್ರಹಿಸಿದ್ದಾರೆ.