ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ಯಾರಂಟಿ ಸಮಿತಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ವಿವಿಧ ಸಮಸ್ಯೆಗಳಿಗೆ ಪರಿಹಾರ ಕ್ರಮ ಮತ್ತು ತಾಲೂಕಿನ ಅಭಿವೃದ್ಧಿಗೆ ಅಗತ್ಯವಿರುವ ಕಾರ್ಯಗಳ ಕುರಿತು ಚರ್ಚೆಗಳು ನಡೆದವು. ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು ಸಮಸ್ಯೆ ಇತ್ಯರ್ಥ ಪಡಿಸುವ ಭರವಸೆ ನೀಡಿದರು.
ಪಂಚ ಗ್ಯಾರಂಟಿ ಯೋಜನೆಗಳು ಬಡ ಜನರ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಿದ್ದು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಪ್ರಾಮಾಣಿಕತೆಯಿಂದ ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು. ಗ್ರಾಮೀಣ ಭಾಗದಲ್ಲಿ ಸಾರ್ವಜನಿಕರು, ಫಲಾನುಭವಿಗಳೊಂದಿಗೆ ಮುಕ್ತ ಸಂವಾದ ನಡೆಸುವುದು. ಯೋಜನೆಗಳ ಪ್ರಯೋಜನ ಪಡೆಯುವಲ್ಲಿ ಫಲಾನುಭವಿಗಳು ಸಮಸ್ಯೆ ಎದುರಿಸುತ್ತಿದ್ದರೆ ತಕ್ಷಣ ಸ್ಪಂದಿಸುವಂತೆ ಗ್ಯಾರಂಟಿ ಸಮಿತಿ ಸದಸ್ಯರಿಗೆ ಅಧ್ಯಕ್ಷ ಚಂದ್ರಶೇಖರ್ ಸೂಚಿಸಿದರು.ಶಕ್ತಿ ಯೋಜನೆಯಲ್ಲಿ ಉತ್ತಮ ಸೇವೆ ನೀಡಲಾಗುತ್ತಿದೆ. ಮೊದಲು ಘಟಕಕ್ಕೆ ಪ್ರತಿ ಕಿ.ಮೀ ಗೆ 25 ರು.ಗಳು ಆದಾಯ ಬರುತ್ತಿತ್ತು. ಯೋಜನೆ ಪ್ರಾರಂಭದಿಂದ ಪ್ರತಿ ಕಿ.ಮೀ ಗೆ 43ರು. ಆದಾಯ ಬರುತ್ತಿದೆ. ಇದೇ ವೇಳೆ ಹೆಚ್ಚಿನ ಸೇವೆ ನೀಡಲು ಬಸ್ ಗಳ ಅವಶ್ಯಕತೆ ಇದೆ ಎಂದು ತುರುವೇಕೆರೆ ಘಟಕಾಧಿಕಾರಿ ಮಂಜುನಾಥ್ ಮಾಹಿತಿ ನೀಡಿದರು. ವಿದ್ಯಾರ್ಥಿಗಳಿಗೆ ಅನುಕೂಲವಾಗಲು, ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಮಾರ್ಗಗಳನ್ನು ಹೊಂದಾಣಿಕೆ ಮಾಡಿ ಸಮಸ್ಯೆಯಾಗದಂತೆ ನೋಡಿಕೊಳ್ಳಿ ಎಂದು ಚಂದ್ರಶೇಖರ್ ಸೂಚಿಸಿದರು.
ಇಓ ದೊಡ್ಡಸಿದ್ದಯ್ಯ, ಸಿಡಿಪಿಓ ಹೊನ್ನಪ್ಪ, ಉದ್ಯೋಗ ವಿನಿಮಯ ಕೇಂದ್ರದ ಅರುಣ್, ಉಪಾಧ್ಯಕ್ಷ ಪಾಂಡುರಂಗಯ್ಯ, ಸಮಿತಿ ಸದಸ್ಯರುಗಳಾದ ಮಂಜುನಾಥ್, ಚಂದ್ರಶೇಖರ್, ಓಕಾಂರಮೂರ್ತಿ, ನಿರಂಜನಮೂರ್ತಿ, ರಾಜಣ್ಣ, ರೇಣುಕಾ, ಚಿಕ್ಕತಿಮ್ಮಯ್ಯ ಸಭೆಯಲ್ಲಿ ಹಾಜರಿದ್ದರು.
ಕೋಟ್....ಸರ್ಕಾರ ಜಾರಿ ಮಾಡಿರುವ ಗ್ಯಾರೆಂಟಿ ಯೋಜನೆಗಳನ್ನು ಜನರಿಗೆ ತಲುಪಿಸುವುದು ಅಧಿಕಾರಿಗಳ ಕರ್ತವ್ಯವಾಗಿದೆ. ಈಗಾಗಲೇ ಬಹುತೇಕರು ಗ್ಯಾರಂಟಿ ಯೋಜನೆ ಲಾಭ ಪಡೆಯುತ್ತಿದ್ದು ಒಂದು ವೇಳೆ ಯಾರಾದರೂ ಅಶಕ್ತರು ಯೋಜನೆಗಳಿಂದ ಹೊರಗೆ ಉಳಿದಿದ್ದರೆ ಸಾರ್ವಜನಿಕರು ಗ್ಯಾರೆಂಟಿ ಸಮಿತಿ ಗಮನಕ್ಕೆ ತಂದರೆ ಕೂಡಲೇ ಅವರಿಗೆ ನೆರವು ನೀಡಲಾಗುವುದು - ಸಿ.ಡಿ.ಚಂದ್ರಶೇಖರ್ ಗ್ಯಾರೆಂಟಿ ಸಮಿತಿ ಅಧ್ಯಕ್ಷ