ಸಿದ್ದಾಪುರ: ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ಎಂಬ ಜನಪದ ಉತ್ಸವ-೨೦೨೫ ಜರುಗಿತು.
ಇದಕ್ಕೂ ಪೂರ್ವದಲ್ಲಿ ಶಾಸಕ ಭೀಮಣ್ಣ ನಾಯ್ಕ ಅವರನ್ನು ಅಲಂಕೃತ ಎತ್ತಿನಗಾಡಿಯಲ್ಲಿ ಮೆರವಣಿಗೆಯೊಂದಿಗೆ ಕರೆತರಲಾಯಿತು. ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆ ತೊಟ್ಟು, ಡೊಳ್ಳು ಬಡಿತದೊಂದಿಗೆ ಸ್ವಾಗತಿಸಿದರು. ಗಣ್ಯರನ್ನು ವಿದ್ಯಾರ್ಥಿನಿಯರು ಪೂರ್ಣಕುಂಭದೊಂದಿಗೆ ಸ್ವಾಗತಿಸಿ, ಆರತಿ ಮಾಡಿ, ಹಣೆಗೆ ತಿಲಕವಿಟ್ಟು ಬರಮಾಡಿಕೊಂಡರು.
ಆನಂತರ ಭೀಮಣ್ಣ ನಾಯ್ಕ ವಿವಿಧ ತರಗತಿಗಳಲ್ಲಿ ವಿದ್ಯಾರ್ಥಿಗಳು ಆಯೋಜಿಸಿದ್ದ ಹಳ್ಳಿಯ ಮೇರು ಹಬ್ಬ, ಸಾಂಪ್ರದಾಯಿಕವಾಗಿ ಆಚರಿಸುವ ಭೂಮಿಪೂಜೆ ಸಂಭ್ರಮದ ಶೀಗೆ ಹುಣ್ಣಿಮೆಯನ್ನು ನೋಡಿ ಸಂತಸ ವ್ಯಕ್ತಪಡಿಸಿದರು. ಬಳಿಕ ಪೂಜೆ ಸಲ್ಲಿಸಿದರು. ನಂತರ ಕಾರ್ತಿಕ ಮಾಸದಲ್ಲಿ ಆಚರಿಸುವ ತುಳಸಿ ಪೂಜೆಯನ್ನು, ಶ್ರಾವಣ ಮಾಸದ ವರ ಮಹಾಲಕ್ಷ್ಮೀಯ ಪೂಜೆಯನ್ನು ನೆರವೇರಿಸಿದರು. ನಾಡಿನ ಬೆಳಕಿನ ಹಬ್ಬ ದೀಪಾವಳಿಯ ಬಲೀಂದ್ರನಿಗೆ ನಮಿಸಿ, ದೀಪೋತ್ಸವ ಕಣ್ತುಂಬಿಕೊಂಡು ನಮ್ಮ ಸಂಸ್ಕೃತಿಯ ಹೊಸ ವರ್ಷ ಯುಗಾದಿ ದೀಪವನ್ನು ಬೆಳಗಿಸಿದರು.ಮಹಾಭಾರತದ ಸಾರಥಿ ಶ್ರೀಕೃಷ್ಣನ ಜನ್ಮಾಷ್ಟಮಿಯನ್ನು ಕೃಷ್ಣನಿಗೆ ಪುಷ್ಪ ಅರ್ಪಿಸಿ, ತೊಟ್ಟಿಲು ತೂಗಿ, ಪುಷ್ಪದಳಗಳಿಂದ ಕೂಡಿದ ಮೊಸರು ಕುಡಿಕೆ ಒಡೆಯವ ಮೂಲಕ ಆಚರಿಸಿದರು. ಪೂರ್ವಿಕರು ಬಳಸುತ್ತಿದ್ದಂತಹ ಪುರಾತನ ಕೃಷಿ, ಜಾನುವಾರು, ಉಪ ಕಸುಬುಗಳಿಗೆ ಬಳಸುತ್ತಿದ್ದ ಪರಿಕರಗಳು, ಅಡುಗೆ ಕೋಣೆಗಳಲ್ಲಿ, ಮನೆಗಳಲ್ಲಿ ಬಳಸುತ್ತಿದ್ದ ವಿವಿಧ ರೀತಿಯ ಕರಕುಶಲತೆಯಿಂದ ಕೂಡಿದ ಸಾಮಗ್ರಿಗಳು, ಚಲಾವಣೆಯಲ್ಲಿ ಇದ್ದ ನಾಣ್ಯಗಳು ಇನ್ನೂ ಮುಂತಾದ ವಸ್ತುಗಳ್ನು ವೀಕ್ಷಿಸಿ ವಿಭಿನ್ನ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸಿರುವುದಕ್ಕೆ ವಿದ್ಯಾರ್ಥಿಗಳನ್ನು, ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿಯನ್ನು ಅಭಿನಂದಿಸಿದರು.
ಪ್ರಾಂಶುಪಾಲ ಡಾ. ಸತೀಶ್ ನಾರಾಯಣ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳು ವಿವಿಧ ಸಾಂಪ್ರದಾಯಿಕ ಜನಪದ ನೃತ್ಯ, ಕೋಲಾಟ, ಹಾಡು, ಯಕ್ಷಗಾನ, ಲಾವಣಿ ಪದ ಗಾಯನ ಮತ್ತು ಭರತನಾಟ್ಯಗಳನ್ನು ಪ್ರದರ್ಶಿಸಿದರು. ಸಾಂಸ್ಕೃತಿಕ ಸಂಚಾಲಕಿ ಅನಿಜ ಎಲ್. ಕಾರ್ಯಕ್ರಮದ ಆಯೋಜನೆ ಜವಾಬ್ದಾರಿ ಹೊತ್ತಿದ್ದರು. ನಾರಾಯಣ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾಗ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು, ಭಾವನಾ ಸ್ವಾಗತಿಸಿದರು. ನಿಖಿತಾ ವಂದಿಸಿದರು.ಸಿದ್ದಾಪುರದ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಜನಪದ ಉತ್ಸವ ಕಾರ್ಯಕ್ರಮದಲ್ಲಿ ಭೀಮಣ್ಣ ನಾಯ್ಕ ಪೂಜಾ ಕಾರ್ಯ ನೆರವೇರಿಸಿದರು.