ಅಂಶಿ ಪ್ರಸನ್ನಕುಮಾರ್
ಟಿ. ನರಸೀಪುರ ತಾಲೂಕು ಬೀಡನಹಳ್ಳಿಯ ಬಸವೇಗೌಡರು ಕಳೆದ 27 ವರ್ಷಗಳಿಂದಲೂ ಮೀನು ಕೃಷಿಯಲ್ಲಿ ತೊಡಗಿಸಿಕೊಂಡಿದ್ದು, ವಾರ್ಷಿಕ 6 ಲಕ್ಷ ರು. ಆದಾಯ ಗಳಿಸುತ್ತಿದ್ದಾರೆ.
ಇವರಿಗೆ ಒಂದೂವರೆ ಎಕರೆ ಜಮೀನಿದೆ. ಒಂದು ಕೊಳವೆ ಬಾವಿ ಕೊರೆಸಿದ್ದಾರೆ. ಇದಲ್ಲದೇ ಸಿಡಿಎಸ್ ಹಾಗೂ ವಿಸಿ ನಾಲೆಯಿಂದ ನೀರಾವರಿ ಸೌಲಭ್ಯವೂ ಉಂಟು.ಅರ್ಧ ಎಕರೆಯಲ್ಲಿ ಭತ್ತ, ಅರ್ಧ ಎಕರೆಯಲ್ಲಿ 400 ಅಡಿಕೆ ಮರಗಳನ್ನು ಬೆಳೆಸಿದ್ದಾರೆ. ಭತ್ತ ಮನೆ ಬಳಕೆಗೆ ಆಗಿ ಉಳಿದರೆ ಮಾತ್ರ ಮಾರಾಟ. ಅಡಿಕೆ ಈಗ ಫಲ ಬರುತ್ತಿದೆ. ಕುರಿಗಳು-3, ನಾಟಿ ಕೋಳಿಗಳು-4 ಇವೆ. ಹೀಗಾಗಿ ಮೀನು ಕೃಷಿಯೇ ಇವರ ಪ್ರಧಾನ ಕಸುಬಾಗಿದೆ. ಇವರ ಬಳಿ 10-12 ಮಂದಿ ಕೆಲಸ ಮಾಡುತ್ತಿದ್ದಾರೆ.
ಮೀನುಗಾರಿಕೆ ಇಲಾಖೆಯಿಂದ ಹನುಮನಾಳು ಕೆರೆಯನ್ನು ಐದು ವರ್ಷಕ್ಕೆ ಗುತ್ತಿಗೆ ಪಡೆದಿದ್ದಾರೆ. ಇದರಿಂದ ವಾರ್ಷಿಕ 6 ಲಕ್ಷ ರು. ಆದಾಯ ಬರುತ್ತಿದೆ.
ಮೀನು ಕೃಷಿಯಲ್ಲಿ ಸಾಮಾನ್ಯ ವರ್ಗ, ಹಿಂದುಳಿದವರು, ಪರಿಶಿಷ್ಟ ಜಾತಿ ಮತ್ತು ಪಂಗಡ- ಹೀಗೆ ಯಾರು ಬೇಕಾದರೂ ತೊಡಗಿಸಿಕೊಳ್ಳಬಹುದು. ಪ್ರಧಾನಮಂತ್ರಿಗಳ ಮತ್ಸ್ಯಸಂವರ್ಧನ ಯೋಜನೆಯಲ್ಲಿ ಸಾಮಾನ್ಯ ವರ್ಗದವರಿಗೆ ಶೇ.40, ಮಹಿಳೆಯರು , ಪ.ಜಾತಿ ಮತ್ತು ಪಂಗಡದವರಿಗೆ ಶೇ.60 ರಷ್ಟು ಸಹಾಯದನ ಇರುತ್ತದೆ.ಗಿಫ್ಟ್ ತಿಲಾಪಿಯಾ ಮೀನುಮರಿ ಬೆಳೆಸಬೇಕು. ಮೀನುಮರಿಗಳಿಗೆ ಮೂರ್ನಾಲ್ಕು ತಿಂಗಳು ಕ್ಯಾಲ್ಸಿಯಂ ಆಹಾರ ನೀಡಬೇಕು. ಸಗಟುಗಿಂತ ಚಿಲ್ಲರೆ ಮಾರಾಟ ಮಾಡಿದರೆ ಹೆಚ್ಚು ಆದಾಯ ಕಾಣಬಹುದು.
ಬಸವೇಗೌಡರು ಬೀಡನಹಳ್ಳಿ, ಅತ್ತಹಳ್ಳಿ, ಬನ್ನೂರಿನಲ್ಲಿ ಓದಿದ್ದಾರೆ. ಪಿಯುಸಿಗೆ ವಿದ್ಯಾಭ್ಯಾಸ ಮೊಟಕುಗೊಳಿಸಿ. ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ರೈತರ ಮಕ್ಕಳಿಗೆ ಕೆಆರ್‌ಎಸ್ ಜಲಾಶಯದಲ್ಲಿ ಪ್ರತಿ ವರ್ಷ ಮೂರು ತಿಂಗಳು ಮೀನುಗಾರಿಕೆ ತರಬೇತಿ ನೀಡುತ್ತಾರೆ. ನಾನು 2003-04 ರಲ್ಲಿ ಈ ತರಬೇತಿ ಪಡೆದು, ಬಿ.ಸೀಹಳ್ಳಿ- ಮಾರಗೌಡನಹಳ್ಳಿ ಕೆರೆಯ ಟೆಂಡರ್ ಪಡೆದೆ. ಜಮೀನಿನಲ್ಲಿ ಅರ್ಧ ಎಕರೆಯಲ್ಲಿ ಕೊಳ ನಿರ್ಮಿಸಿದೆ. ಮೀನುಗಾರಿಕೆ ಇಲಾಖೆಯ ಸಹಾಯಧನದಿಂದ ಸ್ಪಾನ್ ಮೀನುಮರಿ ಪಾಲನಾ ಕೇಂದ್ರ ಆರಂಭಿಸಿದೆ. ಜಲಾಶಯಗಳಿಗೆ ವರ್ಷಕ್ಕೆ ಇಂತಿಷ್ಟು ಮೀನುಮರಿಗಳನ್ನು ಬಿಡಬೇಕು ಎಂಬ ನಿಯಮ ಇದೆ.ಅದರಂತೆ ಕೆಆರ್‌ಎಸ್ ಜಲಾಶಯಕ್ಕೆ ಬಿಡಲು 2021-22 ರಲ್ಲಿ 2 ಲಕ್ಷ, 2023 ರಲ್ಲಿ 1 ಲಕ್ಷ ಮೀನುಮರಿಗಳನ್ನು ಮಾರಾಟ ಮಾಡಿದೆ.ಪ್ರತಿ ಮೀನಿಗೆ 1.10 ರು,ನಂತೆ ನನಗೆ ಒಳ್ಳೆಯ ಆದಾಯ ಬಂದಿತು.
ಸಂಪರ್ಕ ವಿಳಾಸ:
ಬೀಡನಹಳ್ಳಿ, ಹನುಮನಾಳು
ಟಿ. ನರಸೀಪುರ ತಾಲೂಕುಮೈಸೂರು ಜಿಲ್ಲೆ
ಮೊ. 98801 26637------‘ವ್ಯವಸ್ಥಿತವಾಗಿ ಕೃಷಿ ಮಾಡಿದರೆ ನಷ್ಟವಾಗಲ್ಲ. ಒಂದಲ್ಲ ಒಂದು ಬೆಳೆ ಕೈಹಿಡಿಯುತ್ತದೆ. ಎಲ್ಲೊ ಇರುವುದಲ್ಲ. ಜಮೀನಿನಲ್ಲಿ ಇದ್ದು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು.’
ಬಸವೇಗೌಡ, ಬೀಡನಹಳ್ಳಿ