ಪ್ರಧಾನಿ ನರೇಂದ್ರ ಮೋದಿಯವರು ಕಿಸಾನ್ ಸಮ್ಮಾನ್ ಯೋಜನೆಯ ೧೯ನೇ ಕಂತಿನಲ್ಲಿ ಮಂಡ್ಯ ಜಿಲ್ಲೆಯ ೨,೨೪,೬೩೪ ರೈತರಿಗೆ ೪೪.೯೩ ಕೋಟಿ ಹಣ ಜಮೆ ಆಗಿದೆ. ರಾಜ್ಯದ ಒಟ್ಟಾರೆ ೪,೭೫,೦೪೫೭ ಅರ್ಹ ಫಲಾನುಭವಿ ರೈತರಿಗೆ ಒಟ್ಟು ೯೫೦.೦೯ ಕೋಟಿ ಮೊತ್ತ ಜಮೆ ಆಗಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಕಿಸಾನ್ ಸಮ್ಮಾನ್ ಯೋಜನೆ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ರೈತರಿಗೆ ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು, ಬಿಹಾರದ ಬಾಗಲ್ಪುರದಿಂದ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ೧೯ನೇ ಕಂತಿನ ಹಣ ಬಿಡುಗಡೆ ಮಾಡಿದ ಕಾರ್ಯಕ್ರಮವನ್ನು ಮಂಡ್ಯದ ವಿ.ಸಿ.ಫಾರಂನಲ್ಲಿ ಆನ್‌ಲೈನ್ ಮೂಲಕ ವೀಕ್ಷಿಸಿ ಬಳಿಕ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿಯವರು ಈ ಯೋಜನೆಯ ೧೯ನೇ ಕಂತಿನಲ್ಲಿ ಮಂಡ್ಯ ಜಿಲ್ಲೆಯ ೨,೨೪,೬೩೪ ರೈತರಿಗೆ ೪೪.೯೩ ಕೋಟಿ ಹಣ ಜಮೆ ಆಗಿದೆ. ರಾಜ್ಯದ ಒಟ್ಟಾರೆ ೪,೭೫,೦೪೫೭ ಅರ್ಹ ಫಲಾನುಭವಿ ರೈತರಿಗೆ ಒಟ್ಟು ೯೫೦.೦೯ ಕೋಟಿ ಮೊತ್ತ ಜಮೆ ಆಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ದೇಶದಲ್ಲಿ ಒಟ್ಟಾರೆ ಅರ್ಹ ೯.೮ ಕೋಟಿ ರೈತರ ಖಾತೆಗೆ ೨ ಸಾವಿರ ರು. ಹಣ ಜಮೆ ಮಾಡಲಾಗಿದೆ. ಪ್ರಧಾನಿಗಳು ೨೨,೦೦೦ ಕೋಟಿ ರು. ಹಣ ಬಿಡುಗಡೆ ಮಾಡಿದ್ದಾರೆ. ರೈತಪರ ಕಾಳಜಿ ಹಾಗೂ ಕೃಷಿಯನ್ನು ಅಭಿವೃದ್ಧಿಪಡಿಸುವ ಇಚ್ಛಾಶಕ್ತಿಯಿಂದ ಪ್ರಧಾನಿಗಳು ಈ ಯೋಜನೆಯನ್ನು ಮುಂದುವರಿಸಿದ್ದಾರೆ ಎಂದರು.
ರೈತರಿಗೆ ಈ ಯೋಜನೆ ಅತ್ಯಂತ ಉಪಯುಕ್ತವಾಗಿದೆ. ಕೃಷಿಕರು ತಮ್ಮ ಗುರಿ ಮುಟ್ಟಲು ಸಾಧ್ಯ ಆಗಿದೆ. ನರೇಂದ್ರ ಮೋದಿ ಅವರಿಗೆ ರೈತರ ಬಗ್ಗೆ ಬದ್ಧತೆ ಇದೆ. ರಾಷ್ಟ್ರದ ಕೃಷಿಕರ ಸಮಸ್ಯೆಗಳ ಬಗ್ಗೆ ಅವರಿಗೆ ಮಾಹಿತಿ ಇದೆ. ಪ್ರತಿ ಸಚಿವ ಸಂಪುಟ ಸಭೆಯಲ್ಲಿಯೂ ಅವರು ರೈತರ ಬಗ್ಗೆ ಚರ್ಚೆ ನಡೆಸುತ್ತಾರೆ. ಅನೇಕ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಸಲಹೆ ಸೂಚನೆ ಕೊಡುತ್ತಾರೆ, ಅವರ ರೈತ ಕಾಳಜಿಯನ್ನು ನಾನು ಕಣ್ಣಾರೆ ಕಂಡಿದ್ದೇನೆ ಎಂದರು.
ರೈತರ ನಿರೀಕ್ಷೆ ಇನ್ನೂ ಹೆಚ್ಚಿದೆ. ಅದನ್ನು ಮೋದಿ ಅವರು ಖಂಡಿತಾ ಈಡೇರಿಸುತ್ತಾರೆ. ರೈತರು ಕೂಡ ಸರ್ಕಾರ ಕೊಡುವ ಅನುಕೂಲಗಳನ್ನು ಸದ್ಬಳಕೆ ಮಾಡಿಕೊಂಡು ವೈಜ್ಞಾನಿಕವಾಗಿ ಬೆಳೆ ತೆಗೆಯಬೇಕು ಎಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಕುಮಾರ್, ಸಿಇಒ ನಂದಿನಿ, ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಶಾಸಕ ಎಚ್.ಟಿ.ಮಂಜು, ವಿಧಾನ ಪರಿಷತ್ ಸದಸ್ಯರಾದ ಕೆ.ವಿವೇಕಾನಂದ, ಮಂಜೇಗೌಡ, ಮಾಜಿ ಶಾಸಕ ಡಾ.ಕೆ.ಅನ್ನದಾನಿ ಸೇರಿದಂತೆ ಇತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.