ಮುಡಾ ಹಗರಣ ವಿಚಾರ : ಸಂಸದ ಕುಮಾರ್‌ ನಾಯಕ್‌, ಸಿದ್ದು ಆಪ್ತನಿಗೆ ಇ.ಡಿ. ಗ್ರಿಲ್‌!

KannadaprabhaNewsNetwork |  
Published : Nov 14, 2024, 12:54 AM ISTUpdated : Nov 14, 2024, 07:16 AM IST
ಕುಮಾರ್‌ ನಾಯ್ಕ್‌ | Kannada Prabha

ಸಾರಾಂಶ

ಮುಡಾ ಹಗರಣ ವಿಚಾರದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದು, ರಾಯಚೂರಿನ ಸಂಸದ ಕುಮಾರ್‌ ನಾಯಕ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಸಿ.ಟಿ.ಕುಮಾರ್‌ ಅವರನ್ನು ಸೋಮವಾರ ಪ್ರತ್ಯೇಕವಾಗಿ ತೀವ್ರ ವಿಚಾರಣೆ ನಡೆಸಿದ್ದಾರೆ.

 ಬೆಂಗಳೂರು :  ಮುಡಾ ಹಗರಣ ವಿಚಾರದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದು, ರಾಯಚೂರಿನ ಸಂಸದ ಕುಮಾರ್‌ ನಾಯಕ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಸಿ.ಟಿ.ಕುಮಾರ್‌ ಅವರನ್ನು ಸೋಮವಾರ ಪ್ರತ್ಯೇಕವಾಗಿ ತೀವ್ರ ವಿಚಾರಣೆ ನಡೆಸಿದ್ದಾರೆ.

ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇ.ಡಿ. ಸಂಕಷ್ಟ ದಿನೇ ದಿನೇ ಸನಿಹವಾಗುವ ಸಾಧ್ಯತೆ ಕಂಡುಬಂದಿದೆ. ಅವರ ಮೈಸೂರಿನ ಆಪ್ತ ಸಿ.ಟಿ.ಕುಮಾರ್‌ ವಿಚಾರಣೆ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಅವರವರೆಗೂ ವಿಚಾರಣೆ ಬಿಸಿ ತಲುಪುವ ಸಾಧ್ಯತೆ ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ.

ಬುಧವಾರ ಬೆಳಗ್ಗೆಯಿಂದ ಸಂಜೆವರೆಗೆ ನಿರಂತರವಾಗಿ ಶಾಂತಿನಗರದಲ್ಲಿನ ಇ.ಡಿ ಕಚೇರಿಯಲ್ಲಿ ಕುಮಾರ್‌ ನಾಯಕ್‌ ಹಾಗೂ ಕುಮಾರ್‌ ಅವರನ್ನು ವಿಚಾರಣೆ ನಡೆಸಲಾಗಿದೆ. ನೋಟಿಸ್‌ ಹಿನ್ನೆಲೆಯಲ್ಲಿ ಹಾಜರಾಗಿದ್ದ ಇಬ್ಬರನ್ನೂ ವಿಚಾರಣೆ ನಡೆಸಿ ಮುಡಾ ಹಗರಣ ಸಂಬಂಧ ಪ್ರಶ್ನಿಸಲಾಗಿದೆ. ಅಲ್ಲದೇ, ಸಿದ್ದರಾಮಯ್ಯ ಪಾತ್ರದ ಬಗ್ಗೆಯೂ ವಿಚಾರಣೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಕುಮಾರ್ ನಾಯಕ್‌ ಅವರು 2002ರಿಂದ 2005ರವರೆಗೆ ಮೈಸೂರಿನ ಜಿಲ್ಲಾಧಿಕಾರಿಯಾಗಿದ್ದರು. ಅದೇ ಅವಧಿಯಲ್ಲಿ ಮುಡಾಗೆ ಭೂಪರಿವರ್ತನೆ ಮಾಡಲಾಗಿತ್ತು. ಆಗ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಅಧಿಕಾರಿಗಳು ಇತ್ತೀಚೆಗೆ ಕುಮಾರ್ ನಾಯಕ್‌ ಅವರನ್ನು ವಿಚಾರಣೆ ನಡೆಸಿದ್ದರು. ಇದೀಗ ಇ.ಡಿ.ಯಿಂದ ಕುಮಾರ್ ನಾಯಕ್‌ ಅವರನ್ನು ಆರೂವರೆ ತಾಸು ವಿಚಾರಣೆಗೊಳಪಡಿಸಲಾಗಿದೆ. ಜಿಲ್ಲಾಧಿಕಾರಿಯಾಗಿದ್ದ ಸಮಯದಲ್ಲಿ ಮುಡಾ ವಿಚಾರದಲ್ಲಿ ನಡೆದಿರುವ ಭೂಪರಿವರ್ತನೆ ಬಗ್ಗೆ ಪ್ರಶ್ನಿಸಿ ಮಾಹಿತಿ ಪಡೆದುಕೊಳ್ಳಲಾಗಿದೆ. ಸಿದ್ದರಾಮಯ್ಯ ಅವರ ಪಾತ್ರದ ಬಗ್ಗೆಯೂ ವಿಚಾರಿಸಲಾಗಿದೆ ಎಂದು ಹೇಳಲಾಗಿದೆ.

ಇನ್ನು, ಸಿದ್ದರಾಮಯ್ಯ ಆಪ್ತ ಸಿ.ಟಿ.ಕುಮಾರ್‌ ಮೈಸೂರು ರಾಜಕೀಯದ ಬಗ್ಗೆ ಗಮನವಹಿಸಿದ್ದರಿಂದ ಮುಡಾ ಹಗರಣದಲ್ಲಿಯೂ ಆತನ ಪಾತ್ರ ಇರುವ ಮಾಹಿತಿ ಇರುವ ಕಾರಣ ವಿಚಾರಣೆ ನಡೆಸಲಾಗಿದೆ. ಮುಡಾ ನಿವೇಶನ ಹಂಚಿಕೆ ವಿಚಾರದಲ್ಲಿ ಸಿ.ಟಿ.ಕುಮಾರ್‌ ಭಾಗಿಯಾಗಿರುವ ಆರೋಪಗಳು ಕೇಳಿಬಂದಿವೆ. ಈ ಕಾರಣಕ್ಕಾಗಿ ವಿಚಾರಣೆ ನಡೆಸಿ ಸಿದ್ದರಾಮಯ್ಯ ಅವರ ಪಾತ್ರದ ಕುರಿತು ವಿಚಾರಣೆ ನಡೆಸಲಾಗಿದೆ ಎನ್ನಲಾಗಿದೆ.

ಮೈಸೂರಿನಲ್ಲಿನ ಮುಡಾ ಕಚೇರಿಗೆ ದಾಳಿ ನಡೆಸಿದಾಗ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದ ಇ.ಡಿ. ಅಧಿಕಾರಿಗಳು, ನಂತರ ಹಗರಣದಲ್ಲಿ ಕೇಳಿಬಂದ ಹೆಸರುಗಳ ಪೈಕಿ ಒಬ್ಬೊಬ್ಬರನ್ನು ಕರೆದು ವಿಚಾರಣೆ ಮಾಡುತ್ತಿದ್ದಾರೆ.

ಕೆಲ ದಿನಗಳ ಹಿಂದೆ ಮುಡಾದ ಮಾಜಿ ಆಯುಕ್ತರಾದ ನಟೇಶ್‌, ದಿನೇಶ್‌ಕುಮಾರ್‌, ಡೆವಲಪರ್‌ ಮಂಜುನಾಥ್‌ ಸೇರಿದಂತೆ ಹಲವರಿಗೆ ಸೇರಿದ ಸ್ಥಳಗಳ ಮೇಲೆ ಕಾರ್ಯಾಚರಣೆ ಕೈಗೊಂಡು ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದ್ದರು. ಅಲ್ಲದೇ, ಅವರನ್ನು ವಿಚಾರಣೆ ಸಹ ಮಾಡಿದ್ದರು. ಈ ವೇಳೆ ಹಲವು ಮಹತ್ವದ ವಿಚಾರಗಳ ಮಾಹಿತಿಯನ್ನು ಕ್ರೋಢೀಕರಿಸಿದ್ದರು ಎಂದು ತಿಳಿದು ಬಂದಿದೆ.

ಮುಡಾ ಹಗರಣ ವಿಚಾರದಲ್ಲಿ ಕೂಲಂಕಷವಾಗಿ ತನಿಖೆ ನಡೆಸಿ ಮಾಹಿತಿ ಕಲೆ ಹಾಕುತ್ತಿರುವ ಇ.ಡಿ. ಅಧಿಕಾರಿಗಳು ಸಿದ್ದರಾಮಯ್ಯ ಅವರ ವಿಚಾರಣೆಯನ್ನು ಸಹ ನಡೆಸುವ ಸಮಯ ಸನ್ನಿಹಿತವಾಗುತ್ತಿದೆ ಎಂದು ಹೇಳಲಾಗುತ್ತಿದೆ. ವಿಚಾರಣೆ ವೇಳೆ ಲಭ್ಯವಾಗುವ ಮಾಹಿತಿ ಆಧರಿಸಿ ಸಿದ್ದರಾಮಯ್ಯ ಅವರನ್ನು ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ.

ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಇ.ಡಿ. ವಿಚಾರಣೆ ಎದುರಿಸಿದ್ದೇನೆ. ಇ.ಡಿ. ಅಧಿಕಾರಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇನೆ. ಮೈಸೂರು ಜಿಲ್ಲಾಧಿಕಾರಿಯಾಗಿದ್ದ ವೇಳೆ ಏನೆಲ್ಲ ಕೆಲಸ ಮಾಡಿದ್ದೇನೆ ಎಂಬುದರ ಕುರಿತು ಮಾಹಿತಿ ನೀಡಿದ್ದೇನೆ. ದಾಖಲೆಗಳ ಸಮೇತ ವಿವರಣೆ ನೀಡಿದ್ದೇನೆ.-

ಕುಮಾರ್‌ ನಾಯಕ್‌, ಸಂಸದ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್‌ಐಆರ್‌ನಿಂದ ಅರ್ಹರಿಗೆ ಅನ್ಯಾಯ ಆಗಬಾರ್ದು: ಸಿಎಂ
ದಾವೋಸ್‌ ಶೃಂಗಕ್ಕೆ ಡಿಸಿಎಂ ಡಿಕೆಶಿ ಇಂದು ಪ್ರಯಾಣ - ಎಲ್ಲರ ಸಲಹೆ ಮೇರೆಗೆ ಭೇಟಿ