ಸಚಿವ ಸತೀಶ ಬಾಮೈದನ ಮನೆ ಮೇಲೆ ಇಡಿ ದಾಳಿ

KannadaprabhaNewsNetwork |  
Published : Jun 25, 2026, 02:45 AM ISTUpdated : Jun 25, 2026, 05:18 AM IST
ed

ಸಾರಾಂಶ

ಸಚಿವ ಸತೀಶ ಜಾರಕಿಹೊಳಿ ಅವರ ಸಹೋದರಿಯ ಪತಿ ಹಾಗೂ ಬೆಳಗಾವಿ ವಿಭಾಗದ ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ವೈ.ಮಂಜುನಾಥ್ ಅವರ ನಿವಾಸ ಸೇರಿ ರಾಜ್ಯದ ಹಲವು ಕಡೆಗಳಲ್ಲಿ ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ಬುಧವಾರ ಬೆಳಗ್ಗೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.

  ಬೆಳಗಾವಿ :  ಸಚಿವ ಸತೀಶ ಜಾರಕಿಹೊಳಿ ಅವರ ಸಹೋದರಿಯ ಪತಿ ಹಾಗೂ ಬೆಳಗಾವಿ ವಿಭಾಗದ ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ವೈ.ಮಂಜುನಾಥ್ ಅವರ ನಿವಾಸ ಸೇರಿ ರಾಜ್ಯದ ಹಲವು ಕಡೆಗಳಲ್ಲಿ ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ಬುಧವಾರ ಬೆಳಗ್ಗೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.

ಮಾಜಿ ಸಂಸದ ವೈ.ದೇವೇಂದ್ರಪ್ಪ ಅವರ ಪುತ್ರರಾಗಿರುವ ವೈ.ಮಂಜುನಾಥ್

ಬಳ್ಳಾರಿ ಮಾಜಿ ಸಂಸದ ವೈ.ದೇವೇಂದ್ರಪ್ಪ ಅವರ ಪುತ್ರರಾಗಿರುವ ವೈ.ಮಂಜುನಾಥ್ ವಿರುದ್ಧ ಲಂಚದ ಹಣ ಅಕ್ರಮ ಹೂಡಿಕೆ, ಬೇನಾಮಿ ಹೆಸರಿನಲ್ಲಿ ಆಸ್ತಿ ಸಂಪಾದನೆ ಹಾಗೂ ಹಣ ವರ್ಗಾವಣೆ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಬೆಂಗಳೂರು, ಬೆಳಗಾವಿ, ಮೈಸೂರು ಸೇರಿದಂತೆ ರಾಜ್ಯದ ಒಟ್ಟು ಆರು ಪ್ರಮುಖ ಸ್ಥಳಗಳಲ್ಲಿ ಬುಧವಾರ ಬೆಳಗ್ಗೆ ಸುಮಾರು 5.30ಕ್ಕೆ ಇಡಿ ಅಧಿಕಾರಿಗಳ ತಂಡ ಏಕಕಾಲದಲ್ಲಿ ದಾಳಿ ಆರಂಭಿಸಿವೆ. ಬೆಳಗಾವಿಯ ದೂರದರ್ಶನ ನಗರದ(ಟಿವಿ ಸೆಂಟರ್)ಲ್ಲಿರುವ ವೈ.ಮಂಜುನಾಥ ಅವರ ನಿವಾಸದಲ್ಲಿ 10 ಗಂಟೆಗೂ ಹೆಚ್ಚು ಕಾಲ ಶೋಧ ಕಾರ್ಯ ನಡೆಸಲಾಗಿದೆ.

ಅಪಾರ ಪ್ರಮಾಣದ ಚಿನ್ನ ಹಾಗೂ ಬೆಳ್ಳಿ ಪತ್ತೆ

ಶೋಧದ ವೇಳೆ ಅಪಾರ ಪ್ರಮಾಣದ ಚಿನ್ನ ಹಾಗೂ ಬೆಳ್ಳಿ ಪತ್ತೆಯಾಗಿದ್ದು, ಇಬ್ಬರು ಚಿನ್ನ ಮೌಲ್ಯಮಾಪಕರನ್ನು ಸ್ಥಳಕ್ಕೆ ಕರೆಸಿ ಆಭರಣಗಳ ತೂಕ ಮತ್ತು ಮೌಲ್ಯ ನಿರ್ಧಾರ ಕಾರ್ಯಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ, ಕೆಲವು ಆಸ್ತಿ ದಾಖಲೆಗಳು, ಬೇನಾಮಿ ಹೆಸರಿನ ಆಸ್ತಿ ಪತ್ರಗಳು ಹಾಗೂ ಬಾರ್‌ ಪರವಾನಗಿಗೆ ಸಂಬಂಧಿತ ದಾಖಲೆಗಳು ಇಡಿ ಅಧಿಕಾರಿಗಳ ವಶಕ್ಕೆ ಸಿಕ್ಕಿವೆ ಎನ್ನಲಾಗಿದೆ.

ಮಂಜುನಾಥ್ ಅವರು ಅಬಕಾರಿ ಇಲಾಖೆಯ ಉನ್ನತ ಹುದ್ದೆಯಲ್ಲಿದ್ದ ಅವಧಿಯಲ್ಲಿ ಬೇನಾಮಿ ಹೆಸರಿನಲ್ಲಿ ನೂರಾರು ಎಕರೆ ಜಮೀನು ಹಾಗೂ ಕೋಟ್ಯಂತರ ರುಪಾಯಿ ಮೌಲ್ಯದ ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಗೋವಾ ಮತ್ತು ಮಹಾರಾಷ್ಟ್ರ ಗಡಿ ಭಾಗದಲ್ಲಿ ನಡೆದಿರುವುದಾಗಿ ಹೇಳಲಾಗಿರುವ ಕೆಲವು ವ್ಯವಹಾರಗಳ ಸುಳಿವನ್ನೂ ಇಡಿ ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಜೊತೆಗೆ, ಮಂಜುನಾಥ್ ಅವರ ಆಪ್ತರು ಮತ್ತು ಸ್ನೇಹಿತರ ಮನೆಗಳ ಮೇಲೆಯೂ ಶೋಧ ಕಾರ್ಯ ವಿಸ್ತರಿಸಿದ್ದು, ವಿದೇಶಗಳಿಗೆ ಹಣ ವರ್ಗಾವಣೆ ನಡೆದಿರುವ ಸಾಧ್ಯತೆಯನ್ನೂ ಇಡಿ ತನಿಖೆಯ ವ್ಯಾಪ್ತಿಗೆ ತೆಗೆದುಕೊಂಡಿದೆ ಎನ್ನಲಾಗಿದೆ. ಅಬಕಾರಿ ಇಲಾಖೆ ಹಿರಿಯ ಅಧಿಕಾರಿಯ ವಿರುದ್ಧ ನಡೆದಿರುವ ಈ ಕಾರ್ಯಾಚರಣೆ ರಾಜ್ಯದಲ್ಲಿ ಇಲಾಖೆಗೆ ಸಂಬಂಧಿಸಿದ ಅತಿದೊಡ್ಡ ಇಡಿ ದಾಳಿಗಳಲ್ಲಿ ಒಂದು ಎಂದು ಹೇಳಲಾಗುತ್ತಿದೆ.

ದಾಳಿ ವೇಳೆ ಸಿಕ್ಕಿತ್ತು ಸುಳಿವು:

ಬೆಳಗಾವಿ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ ವೇಳೆ ವೈ.ಮಂಜುನಾಥ್ ಮನೆಯಲ್ಲಿ ಇರಲಿಲ್ಲ. ಕೆಲವು ದಿನಗಳ ಹಿಂದಷ್ಟೇ ಅವರ ವ್ಯವಹಾರ ಪಾಲುದಾರರು ಹಾಗೂ ಸ್ನೇಹಿತರ ಮನೆಗಳ ಮೇಲೆ ಇಡಿ ದಾಳಿ ನಡೆಸಿದ್ದ ವೇಳೆ ಸಿಕ್ಕ ಮಹತ್ವದ ದಾಖಲೆಗಳಲ್ಲಿ ವೈ.ಮಂಜುನಾಥ್ ಅವರ ಹೆಸರು ಉಲ್ಲೇಖವಾಗಿತ್ತು ಎನ್ನಲಾಗಿದೆ. ಇದೇ ಆಧಾರದ ಮೇಲೆ ಇಡಿ ಈಗ ಮಂಜುನಾಥ್ ಹಾಗೂ ಅವರ ಆಪ್ತರನ್ನು ಗುರಿಯಾಗಿಸಿ ಸಾಕ್ಷ್ಯ ಸಂಗ್ರಹಕ್ಕೆ ಮುಂದಾಗಿದೆ. ಅರೆಸೇನಾ ಪಡೆ ಯೋಧರ ಭದ್ರತೆಯಲ್ಲಿ ಶೋಧ ಕಾರ್ಯ ಮುಂದುವರಿದಿದೆ.

 ಇಡಿ ದಾಳಿ ಬಗ್ಗೆ ಮಾಹಿತಿ ಪಡೆದು ಮಾತಾಡುವೆ: ಸಚಿವ ಸತೀಶ

ತಮ್ಮ ಬಾಮೈದ ಹಾಗೂ ಅಬಕಾರಿ ಇಲಾಖೆ ಹೆಚ್ಚುವರಿ ಆಯುಕ್ತ ವೈ.ಮಂಜುನಾಥ ಅವರ ನಿವಾಸದ ಮೇಲೆ ಇಡಿ ದಾಳಿ ನಡೆದಿರುವ ಕುರಿತು ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಹಾರೂಗೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ರೂಟೀನ್ ದಾಳಿಯಾಗಿರಬಹುದು. ಯಾವ ಕಾರಣಕ್ಕೆ ದಾಳಿ ನಡೆದಿದೆ ಎಂಬುದು ತನಿಖೆಯಿಂದ ಗೊತ್ತಾಗಬೇಕು. ಮಾಹಿತಿ ಬರುವ ಮುನ್ನ ಯಾವುದೇ ನಿರ್ಧಾರಕ್ಕೆ ಬರುವುದು ಸರಿಯಲ್ಲ. ನಾಳೆಯವರೆಗೆ ಕಾಯೋಣ. ಬಳಿಕ ನಿಜವಾದ ಕಾರಣ ಗೊತ್ತಾಗಬಹುದು. ಮಂಜುನಾಥ ಅವರು ನಮ್ಮ ಭಾಮೈದ ಆಗಿರಬಹುದು. ಆದರೆ, ಯಾವ ಕಾರಣಕ್ಕೆ ದಾಳಿ ನಡೆದಿದೆ? ಅಧಿಕಾರಿಗಳು ಯಾವ ದಾಖಲೆಗಳನ್ನು ಕೇಳಿದ್ದಾರೆ ಎಂಬ ಬಗ್ಗೆ ಮಾಹಿತಿ ಪಡೆಯಬೇಕಿದೆ. ಮಾಹಿತಿ ಪಡೆದ ನಂತರವೇ ಈ ಬಗ್ಗೆ ಮಾತನಾಡುತ್ತೇನೆ ಎಂದು ಹೇಳಿದರು.

ಇಡಿ ಏಳು ಕಡೆಗಳಲ್ಲಿ ದಾಳಿ ನಡೆಸಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಏಳು ಕಡೆ, ಎಂಟು ಕಡೆ, ಹತ್ತು ಕಡೆ ಎಲ್ಲಿಯಾದರೂ ದಾಳಿ ಆಗಿರಬಹುದು. ಸರಿಯಾದ ಮಾಹಿತಿ ಇಲ್ಲದೆ ಮಾತನಾಡಲು ಸಾಧ್ಯವಿಲ್ಲ ಎಂದರು.

ಈ ದಾಳಿಯ ಹಿಂದೆ ರಾಜಕೀಯ ಉದ್ದೇಶವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈಗಲೇ ಅದರ ಬಗ್ಗೆ ಏನೂ ಹೇಳುವುದಿಲ್ಲ. ಮೊದಲು ಮಾಹಿತಿ ಪಡೆಯುತ್ತೇನೆ. ನಂತರ ರಾಜಕೀಯ ಇದೆಯೋ, ಇಲ್ಲವೋ ಎಂಬ ಬಗ್ಗೆ ಪ್ರತಿಕ್ರಿಯಿಸುತ್ತೇನೆ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಹನಿಟ್ರ್ಯಾಪ್, ಕಿಡ್ನ್ಯಾಪ್ ಪ್ರಕರಣ; 8 ಆರೋಪಿಗಳು ಅರೆಸ್ಟ್
ಎಲ್ಲ ಪ್ರಾಣಿಗಳಿಗೂ ಹಿಂಸೆಯಿಲ್ಲದೇ ಬದುಕುವ ಹಕ್ಕು ಹೊಂದಿವೆ : ಕೋರ್ಟ್‌