ರಾಜ್ಯದ ಗೃಹ ಸಚಿವರ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಇಡಿ ದಾಳಿ ಖಂಡನೀಯ

KannadaprabhaNewsNetwork | Published : May 22, 2025 11:58 PM
ಗೃಹ ಸಚಿವ ಡಾ. ಜಿ.ಪರಮೇಶ್ವರ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲಿನ ಇ.ಡಿ. ದಾಳಿ ಖಂಡನಾರ್ಹ. ಇದು ಕೇಂದ್ರದ ಬಿಜೆಪಿ ಸರ್ಕಾರದ ರಾಜಕೀಯ ಅಜೆಂಡಾಗಳನ್ನು ಜಾರಿಗೆ ತರಲು ಕೃಪಾಪೋಷಿತ ನಾಟಕ ಮಂಡಳಿಯಂತೆ ಇ.ಡಿ. ಕಾರ್ಯನಿರ್ವಹಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ ಆರೋಪಿಸಿದ್ದಾರೆ.
Follow Us

- ಕೇಂದ್ರ ಬಿಜೆಪಿ ರಾಜಕೀಯ ಅಜೆಂಡಾ ದಾಳಿ: ಬಸವರಾಜ ಟೀಕೆ

- - - ದಾವಣಗೆರೆ: ಗೃಹ ಸಚಿವ ಡಾ. ಜಿ.ಪರಮೇಶ್ವರ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲಿನ ಇ.ಡಿ. ದಾಳಿ ಖಂಡನಾರ್ಹ. ಇದು ಕೇಂದ್ರದ ಬಿಜೆಪಿ ಸರ್ಕಾರದ ರಾಜಕೀಯ ಅಜೆಂಡಾಗಳನ್ನು ಜಾರಿಗೆ ತರಲು ಕೃಪಾಪೋಷಿತ ನಾಟಕ ಮಂಡಳಿಯಂತೆ ಇ.ಡಿ. ಕಾರ್ಯನಿರ್ವಹಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ ಆರೋಪಿಸಿದ್ದಾರೆ.

ರಾಜಕೀಯವಾಗಿ ತನ್ನ ವಿರೋಧಿಗಳನ್ನು ಹತ್ತಿಕ್ಕಲು ಬಿಜೆಪಿ ನಾಯಕರು ಇಡಿ, ಐಟಿ, ಸಿಬಿಐ ಮತ್ತಿತರೆ ಸಂಸ್ಥೆಗಳನ್ನು ಬಹುವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದು ಸರ್ವವೇದ್ಯ. ಹಿರಿಯ ದಲಿತ ನಾಯಕರೂ ಆಗಿರುವ ಡಾ.ಪರಮೇಶ್ವರ ಅವರ ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಉನ್ನತಿ ಸಹಿಸದೇ, ಬಿಜೆಪಿ ನಾಯಕರು ಅಸೂಯೆಯಿಂದ ಇಂತಹ ದ್ವೇಷದ ಕ್ರಮ ಕೈಗೊಂಡಿದ್ದಾರೆ ಎಂದು ದೂರಿದ್ದಾರೆ.

ಈ ಹಿಂದೆಯೂ ಸಿದ್ಧಾರ್ಥ ಸಂಸ್ಥೆಗಳ ಮೇಲೆ ಇ.ಡಿ., ಐ.ಟಿ. ಇತ್ಯಾದಿಗಳ ಪ್ರಾಯೋಜಿತ ದಾಳಿ ನಡೆದಿತ್ತು. ಆದರೆ, ಯಾವುದೇ ಅಕ್ರಮ ಬಯಲಾಗಿರಲಿಲ್ಲ. ಈ ಹಿನ್ನೆಲೆ ಹಟಕ್ಕೆ ಬಿದ್ದಂತೆ ಮತ್ತೆ ದಾಳಿ ನಡೆಸಿರುವುದು ಆಡಳಿತಗಾರರ ಕುತ್ಸಿತ ಮನೋಭಾವ ಬಹಿರಂಗಪಡಿಸಿದೆ. ಇದು ರಾಜಕೀಯಪ್ರೇರಿತ ದಾಳಿಯೆಂಬ ಅರಿವಿದ್ದರೂ, ರಾಜಕೀಯಕ್ಕಾಗಿಯೇ ಗೃಹ ಸಚಿವರ ರಾಜೀನಾಮೆ ಕೇಳಿರುವ ಬಿಜೆಪಿಯ ಆರ್.ಅಶೋಕ್ ನಡೆ ಅಕ್ಷೇಪಾರ್ಹ ಎಂದಿದ್ದಾರೆ.

ಪರಮೇಶ್ವರ ಒಡೆತನದ ಸಂಸ್ಥೆಗಳ ಮೇಲಿನ ಇಡಿ ದಾಳಿಗೆ ಬಿಜೆಪಿ ನಾಯಕರು ಮುಂದೆ ದೊಡ್ಡ ಬೆಲೆ ತೆರಬೇಕಾಗುತ್ತದೆ. ಇಂತಹ ಯಾವುದೇ ದಾಳಿ ಇತ್ಯಾದಿ ಬೆದರಿಕೆಗೆ ಪರಮೇಶ್ವರ್ ಎಂದಿಗೂ ಎದೆಗುಂದುವುದಿಲ್ಲ. ಪರಮೇಶ್ವರರ ಜೊತೆಗೆ ಇಡೀ ಸಮುದಾಯ, ರಾಜ್ಯದ ಜನತೆ ಮತ್ತು ಕಾರ್ಯಕರ್ತ ವರ್ಗವಿದೆ ಎಂದು ತಿಳಿಸಿದ್ದಾರೆ.

- - -

-21ಕೆಡಿವಿಜಿ11.ಜೆಪಿಜಿ: ಡಿ.ಬಸವರಾಜ