ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ : ₹300 ಕೋಟಿ ಮೌಲ್ಯದ 142 ಸ್ಥಿರಾಸ್ತಿ ಇ.ಡಿ ವಶ

KannadaprabhaNewsNetwork |  
Published : Jan 18, 2025, 01:49 AM ISTUpdated : Jan 18, 2025, 07:01 AM IST
ಜಾರಿ ನಿದೇರ್ಶನಾಲಯ | Kannada Prabha

ಸಾರಾಂಶ

 ಮುಡಾ ಹಗರಣದ ವಿಚಾರದಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇತರರ ವಿರುದ್ಧ ದಾಖಲಾದ ಪ್ರಕರಣ ಸಂಬಂಧ ಐದು ತಿಂಗಳಿಂದ ನಿರಂತರ ತನಿಖೆ ಕೈಗೊಂಡ ಜಾರಿ ನಿರ್ದೇಶನಾಲಯ(ಇ.ಡಿ.)ವು ಇದೀಗ 300 ಕೋಟಿ ರು. ಮೌಲ್ಯದ 142 ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ.

 ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಹಗರಣದ ವಿಚಾರದಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇತರರ ವಿರುದ್ಧ ದಾಖಲಾದ ಪ್ರಕರಣ ಸಂಬಂಧ ಐದು ತಿಂಗಳಿಂದ ನಿರಂತರ ತನಿಖೆ ಕೈಗೊಂಡ ಜಾರಿ ನಿರ್ದೇಶನಾಲಯ(ಇ.ಡಿ.)ವು ಇದೀಗ 300 ಕೋಟಿ ರು. ಮೌಲ್ಯದ 142 ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ.

ಜಾರಿ ನಿರ್ದೇಶನಾಲಯವು ಜಪ್ತಿ ಮಾಡಿರುವ ಸ್ಥಿರಾಸ್ತಿಗಳು ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಮತ್ತು ಏಜೆಂಟ್‌ಗಳ ಹೆಸರಿನಲ್ಲಿ ನೋಂದಣಿಯಾಗಿವೆ. ಮುಡಾದಿಂದ ಪಡೆದ ನಿವೇಶನಗಳನ್ನು ಭಾರಿ ಲಾಭಕ್ಕೆ ಮಾರಾಟ ಮಾಡಿ ಗಳಿಸಿದ ಹಣದಿಂದ ಸಂಪಾದಿಸಿದ ಆಸ್ತಿಗಳು ಇವಾಗಿವೆ ಎಂದು ಇ.ಡಿ. ತಿಳಿಸಿದೆ.

ಸ್ನೇಹಮಯಿ ಕೃಷ್ಣ ದೂರು:

ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಐದು ತಿಂಗಳ ಹಿಂದೆ ಸಲ್ಲಿಸಿದ ದೂರು ಮತ್ತು ಮೈಸೂರು ಲೋಕಾಯುಕ್ತ ಪೊಲೀಸರು ದಾಖಲಿಸಿದ ಎಫ್ಐಆರ್ ಆಧಾರದ ಮೇಲೆ ಇ.ಡಿ. ತನಿಖೆ ಕೈಗೊಂಡಿತ್ತು. ಮುಡಾ ಕಚೇರಿ, ಏಜೆಂಟರು, ರಿಯಲ್‌ ಎಸ್ಟೇಟ್‌ ಉದ್ಯಮಿಗಳಿಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಿ ಹಲವು ದಾಖಲೆಗಳನ್ನು ಜಪ್ತಿ ಮಾಡಿ ಪರಿಶೀಲನೆ ನಡೆಸಿತ್ತು. ಅಲ್ಲದೆ, ಸಿದ್ದರಾಮಯ್ಯ ಅವರ ಆಪ್ತರನ್ನು ಮತ್ತು ಮುಡಾದ ಹಿಂದಿನ ಹಿರಿಯ ಅಧಿಕಾರಿಗಳನ್ನು ತೀವ್ರ ವಿಚಾರಣೆಗೊಳಪಡಿಸಲಾಗಿತ್ತು. ಈ ವೇಳೆ ಲಭ್ಯ ಮಾಹಿತಿ ಪ್ರಕಾರ ಮೇರೆಗೆ ಮೇಲ್ನೋಟಕ್ಕೆ ಭ್ರಷ್ಟಾಚಾರ ನಡೆದಿರುವುದು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಇ.ಡಿ. ಅಧಿಕಾರಿಗಳು 300 ಕೋಟಿ ರು. ಮೌಲ್ಯದ 142 ಸ್ಥಿರಾಸ್ತಿ ಜಪ್ತಿ ಮಾಡಿ ತನಿಖೆ ಮುಂದುವರಿಸಿದ್ದಾರೆ.

ನಟೇಶ್‌ ಪಾತ್ರ ಪ್ರಮುಖ:

ಸಿದ್ದರಾಮಯ್ಯ ತಮ್ಮ ರಾಜಕೀಯ ಪ್ರಭಾವ ಬಳಸಿ ಪತ್ನಿ ಹೆಸರಲ್ಲಿ 14 ನಿವೇಶನಗಳ ಪರಿಹಾರ ಪಡೆದಿದ್ದಾರೆ. ಭೂಮಿಯನ್ನು ಮುಡಾ 3.24 ಲಕ್ಷ ರು.ಗೆ ಸ್ವಾಧೀನಪಡಿಸಿಕೊಂಡಿದೆ. 14 ನಿವೇಶನಗಳ ರೂಪದಲ್ಲಿ 56 ಕೋಟಿ ರು. ಪರಿಹಾರ ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡುವಲ್ಲಿ ಮುಡಾದ ಮಾಜಿ ಆಯುಕ್ತ ಡಿ.ಬಿ.ನಟೇಶ್ ಪಾತ್ರ ಪ್ರಮುಖವಾಗಿದೆ ಎಂದು ಇ.ಡಿ. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಅಕ್ರಮವಾಗಿ ಹಣ ವರ್ಗಾವಣೆ:

ತನಿಖೆ ವೇಳೆ 14 ನಿವೇಶನಗಳು ಸಿದ್ದರಾಮಯ್ಯ ಪತ್ನಿಗೆ ಹಂಚಿಕೆಯಾಗಿರುವುದು ಹೊರತುಪಡಿಸಿ, ರಿಯಲ್‌ ಎಸ್ಟೇಟ್‌ ಉದ್ಯಮಿಗಳಿಗೂ ಮುಡಾದಿಂದ ಅಕ್ರಮವಾಗಿ ಹಂಚಿಕೆ ಮಾಡಿರುವುದು ತಿಳಿದುಬಂದಿದೆ. ಉದ್ಯಮಿಗಳು ನಿವೇಶನಗಳನ್ನು ಭಾರೀ ಪ್ರಮಾಣದ ಲಾಭಕ್ಕೆ ಮಾರಾಟ ಮಾಡಿ ಅಪಾರ ಪ್ರಮಾಣದಲ್ಲಿ ಹಣ ಗಳಿಕೆ ಮಾಡಿದ್ದಾರೆ. ಬಳಿಕ ಅಕ್ರಮವಾಗಿ ಹಣ ವರ್ಗಾವಣೆ ಮಾಡಲಾಗಿದೆ. ಅಕ್ರಮ ಹಣವನ್ನು ಕಾನೂನುಬದ್ಧರೂಪಕ್ಕೆ ಪರಿವರ್ತಿಸಿ ಹಿಂಪಡೆಯಲಾಗಿದೆ ಎಂಬುದು ಗೊತ್ತಾಗಿದೆ ಎಂದು ತಿಳಿಸಿದ್ದಾರೆ.

ದಿನೇಶ್‌ ಸಂಬಂಧಿಕರ ಹೆಸರಲ್ಲಿ ಆಸ್ತಿ:

ಪ್ರಭಾವಿ ವ್ಯಕ್ತಿಗಳು ಮತ್ತು ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಬೇನಾಮಿ ವ್ಯಕ್ತಿಗಳ ಹೆಸರಿನಲ್ಲಿ ನಿವೇಶನ ಹಂಚಿಕೆ ಮಾಡಿರುವುದು ಸಹ ತನಿಖೆಯಲ್ಲಿ ಬಹಿರಂಗವಾಗಿದೆ. ಹಿಂದಿನ ಮುಡಾ ಅಧ್ಯಕ್ಷರು ಮತ್ತು ಆಯುಕ್ತರಿಗೆ ಸ್ಥಿರಾಸ್ತಿ, ಮುಡಾ ನಿವೇಶನಗಳು, ನಗದು ಇತ್ಯಾದಿಗಳ ರೂಪದಲ್ಲಿ ಅಕ್ರಮವಾಗಿ ಸಂದಾಯವಾಗಿದೆ. ಈ ಸಂಬಂಧ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ಮುಡಾ ಆಯುಕ್ತರಾಗಿದ್ದ ಜಿ.ಟಿ.ದಿನೇಶ್ ಕುಮಾರ್ ಅವರ ಸಂಬಂಧಿಕರ ಹೆಸರಲ್ಲಿ ಆಸ್ತಿ, ಐಷಾರಾಮಿ ವಾಹನ ಇತ್ಯಾದಿ ಖರೀದಿಗೆ ಸಹಕಾರಿ ಸಂಘದ ಮೂಲಕ ಹಣ ವಸೂಲಿ ಮಾಡಿರುವುದು ಕೂಡ ಬಯಲಾಗಿದೆ ಎಂದಿದ್ದಾರೆ.

PREV

Recommended Stories

ಕಾಂಗ್ರೆಸ್ ಸರ್ಕಾರದಿಂದ ಗ್ರಾಮೀಣಾಭಿವೃದ್ಧಿಗೆ ಹೆಚ್ಚು ಒತ್ತು: ಶಾಸಕ ರಮೇಶ್‌ ಬಂಡಿಸಿದ್ದೇಗೌಡ
ಸರ್ಕಾರಿ ಶಾಲೆ ಉನ್ನತಿಗೆ ಎಲ್ಲರ ಸಹಕಾರ ಅಗತ್ಯ