ಎಡದೊರೆ ಟೋಲ್‌ ಪ್ಲಾಜಾ ತೆರವಿಗೆ ಆಗ್ರಹ

KannadaprabhaNewsNetwork |  
Published : Jul 09, 2026, 02:15 AM IST
56 | Kannada Prabha

ಸಾರಾಂಶ

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಿಂದ ಮೈಸೂರು ಮಾರ್ಗವಾಗಿ ಗುಂಡ್ಲುಪೇಟೆವರೆಗೆ ಸಾಗುವ ರಾಷ್ಟ್ರೀಯ ಹೆದ್ದಾರಿ- 766 ರಲ್ಲಿ ಮೂರು ಟೋಲ್ ಪ್ಲಾಜಾ ಸ್ಥಾಪಿಸಿರುವುದರಿಂದ ಸಾರ್ವಜನಿಕರ ಮೇಲೆ ಅನಗತ್ಯ ಆರ್ಥಿಕ ಹೊರೆ ಬೀಳುತ್ತಿದೆ

ಕನ್ನಡಪ್ರಭ ವಾರ್ತೆ ಟಿ. ನರಸೀಪುರರಾಷ್ಟ್ರೀಯ ಹೆದ್ದಾರಿ- 766ರ ಎಡದೊರೆ ಟೋಲ್ ಪ್ಲಾಜಾವು ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮಗಳು- 2008 ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಾಯ್ದೆ- 1988ರ ಹಲವು ನಿಯಮ ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿದ್ದು, ಅದನ್ನು ತಕ್ಷಣ ತೆರವುಗೊಳಿಸಿ ಟೋಲ್ ಸಂಗ್ರಹ ಸ್ಥಗಿತಗೊಳಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನಿರ್ದೇಶನ ನೀಡುವಂತೆ ಒತ್ತಾಯಿಸಿ ಟೋಲ್ ಮುಕ್ತ ಎನ್‌ಎಚ್-766 ಹೋರಾಟ ಸಮಿತಿಯು ಗ್ರೇಡ್- 2 ತಹಸೀಲ್ದಾರ್ ರಾಜಾಕಾಂತ್ ಅವರಿಗೆ ಮನವಿ ಸಲ್ಲಿಸಿತು.ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಸಮಿತಿ ಅಧ್ಯಕ್ಷ ಎಚ್. ಆರೀಫ್, ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಿಂದ ಮೈಸೂರು ಮಾರ್ಗವಾಗಿ ಗುಂಡ್ಲುಪೇಟೆವರೆಗೆ ಸಾಗುವ ರಾಷ್ಟ್ರೀಯ ಹೆದ್ದಾರಿ- 766 ರಲ್ಲಿ ಮೂರು ಟೋಲ್ ಪ್ಲಾಜಾ ಸ್ಥಾಪಿಸಿರುವುದರಿಂದ ಸಾರ್ವಜನಿಕರ ಮೇಲೆ ಅನಗತ್ಯ ಆರ್ಥಿಕ ಹೊರೆ ಬೀಳುತ್ತಿದೆ ಎಂದು ಆರೋಪಿಸಿದರು.ಐತಿಹಾಸಿಕವಾಗಿ ರಾಜ್ಯ ಹೆದ್ದಾರಿಯಾಗಿದ್ದ ಈ ರಸ್ತೆಯನ್ನು ನಂತರ ರಾಷ್ಟ್ರೀಯ ಹೆದ್ದಾರಿಯಾಗಿ ಮರುನಾಮಕರಣ ಮಾಡಿದ್ದು, ಇದು ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಾಣ ಮತ್ತು ಅಭಿವೃದ್ಧಿಗೊಂಡ ರಸ್ತೆ. ಹೊಸ ಬೈಪಾಸ್ ಅಥವಾ ಖಾಸಗಿ ಯೋಜನೆ ಅಲ್ಲದಿದ್ದರೂ ಟೋಲ್ ಸಂಗ್ರಹ ಮಾಡುತ್ತಿರುವುದು ಅನ್ಯಾಯ ಎಂದು ಹೇಳಿದರು.ಎಡದೊರೆ ಟೋಲ್ ಪ್ಲಾಜಾ ವ್ಯಾಪ್ತಿಯ ರಸ್ತೆ ಕೇವಲ ಎರಡು ಲೇನ್ ಹೊಂದಿದ್ದು, ನಾಲ್ಕು ಲೇನ್ ಅಥವಾ ಅದಕ್ಕಿಂತ ಹೆಚ್ಚಿನ ರಸ್ತೆಗೆ ಮಾತ್ರ ಟೋಲ್ ವಿಧಿಸಲು ಅವಕಾಶವಿದೆ. ಸಾರ್ವಜನಿಕ ನಿಧಿಯಿಂದ ಅಭಿವೃದ್ಧಿಪಡಿಸಿರುವ ರಸ್ತೆಗೆ ಟೋಲ್ ವಿಧಿಸಿರುವುದು, ಟಿ. ನರಸೀಪುರ ಪುರಸಭೆ ವ್ಯಾಪ್ತಿಯಿಂದ ನಿಗದಿತ 10 ಕಿ.ಮೀ. ಅಂತರ ಕಾಯ್ದುಕೊಳ್ಳದಿರುವುದು, ಕೆ.ಎನ್. ಹುಂಡಿ ಟೋಲ್ ಪ್ಲಾಜಾದಿಂದ ಕೇವಲ 36.15 ಕಿ.ಮೀ. ದೂರದಲ್ಲಿಯೇ ಮತ್ತೊಂದು ಟೋಲ್ ಸ್ಥಾಪಿಸಿರುವುದು ಸೇರಿದಂತೆ ಹಲವು ನಿಯಮಗಳ ಉಲ್ಲಂಘನೆ ನಡೆದಿದೆ ಎಂದು ದೂರಿದರು.ಅಲ್ಲದೆ ಸ್ಥಳೀಯ ವಾಹನಗಳಿಗಾಗಿ ಯಾವುದೇ ಪರ್ಯಾಯ ಸರ್ವಿಸ್ ರಸ್ತೆ ಒದಗಿಸದೆ ಗ್ರಾಮಸ್ಥರು ದಶಕಗಳಿಂದ ಬಳಸುತ್ತಿದ್ದ ರಸ್ತೆಯಲ್ಲಿಯೇ ಟೋಲ್ ಸಂಗ್ರಹಿಸಲಾಗುತ್ತಿದೆ. ಕಪಿಲಾ ನದಿ ಸೇತುವೆಯ ಎಕ್ಸ್‌ಪಾನ್ಷನ್ ಜಾಯಿಂಟ್ ಹಾಳಾಗಿರುವುದು, ಟಿ. ನರಸೀಪುರ ಸರ್ಕಾರಿ ಬಸ್ ನಿಲ್ದಾಣದ ಮುಂಭಾಗ ಮಳೆಗಾಲದಲ್ಲಿ ನೀರು ನಿಲ್ಲುವುದು, ಮೈಸೂರು– ಕೊಳ್ಳೇಗಾಲ ಮಾರ್ಗದಲ್ಲಿ ಹಲವು ಟೇಬಲ್‌ಟಾಪ್ ಹಂಪ್‌ ಗಳಿರುವುದು ಹಾಗೂ ಸಂಪರ್ಕ ರಸ್ತೆಗಳಲ್ಲಿ ಗುಂಡಿ ಬಿದ್ದಿರುವುದರಿಂದ ವಾಹನ ಸವಾರರ ಸುರಕ್ಷತೆಗೆ ಧಕ್ಕೆಯಾಗಿದೆ ಎಂದು ಅವರು ಹೇಳಿದರು.ಬಂಡೀಪುರ ಅರಣ್ಯ ಪ್ರದೇಶದಲ್ಲಿ ಪ್ರತಿದಿನ ರಾತ್ರಿ 9ರಿಂದ ಬೆಳಿಗ್ಗೆ 6ರವರೆಗೆ ರಸ್ತೆ ಸಂಪೂರ್ಣ ಬಂದ್ ಆಗಿದ್ದರೂ ಪೂರ್ಣ ಪ್ರಮಾಣದ ಟೋಲ್ ವಸೂಲಿ ಮಾಡಲಾಗುತ್ತಿದೆ. ರಸ್ತೆ ನಿರ್ವಹಣೆಯಲ್ಲಿ ವಿಫಲವಾಗಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಮನವಿಗೆ ನಿಗದಿತ ಅವಧಿಯಲ್ಲಿ ಸ್ಪಂದಿಸದಿದ್ದರೆ ಕಾನೂನು ಹೋರಾಟ, ಉಗ್ರ ಪ್ರತಿಭಟನೆ, ರಸ್ತೆ ತಡೆ ಸೇರಿದಂತೆ ವಿವಿಧ ಪ್ರಜಾಸತ್ತಾತ್ಮಕ ಹೋರಾಟಗಳನ್ನು ಹಮ್ಮಿಕೊಳ್ಳುವುದಾಗಿ ಸಮಿತಿಯು ಎಚ್ಚರಿಸಿತು. ಈ ವೇಳೆ ಕಾರ್ಯದರ್ಶಿ ಎಸ್. ಮಂಜುನಾಥ್, ಬೂದಹಳ್ಳಿ ಶಂಕರ್, ಬಿಜೆಪಿ ಮುಖಂಡ ಎನ್. ಲೋಕೇಶ್, ಬನ್ನಹಳ್ಳಿಹುಂಡಿ ಶಿವಕುಮಾರ್, ಎಸ್.ಎಂ.ಆರ್. ಪ್ರಕಾಶ್, ಸೋಸಲೆ ನಂಜುಂಡಯ್ಯ, ಕರೋಹಟ್ಟಿ ರಾಜಶೇಖರ್, ಹಿರಿಯೂರು ಗುರುಸ್ವಾಮಿ, ತಲಕಾಡು ದಿನೇಶ್, ಶಾಂತಕುಮಾರ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಬೆಳವಣಿಗೆಯತ್ತ ಪೋಷಕರು ಗಮನ ಹರಿಸಿ
ಶಾಸಕರ ನೇತೃತ್ವದಲ್ಲಿ ರಾಣೀಕೆರೆ ತೂಬು ತೆರವಿಗೆ ಕ್ಷಣಗಣನೆ