ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಸ್ಕಂದ ಪಂಚಮಿಯ ದಿನವಾದ ಶುಕ್ರವಾರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರು ಎಡೆಸ್ನಾನ ಸೇವೆ ನೆರವೇರಿಸಿದರು.
ಗೋವು ಸೇವಿಸಿದ ಎಲೆಯ ಮೇಲೆ ಭಕ್ತರು ಉರುಳು ಸೇವೆ ನಡೆಸುವ ಮೂಲಕ ಚಂಪಾಷಷ್ಠಿಯ ಜಾತ್ರೋತ್ಸವದ ಪಂಚಮಿ ದಿನದಂದು ಎಡೆಸ್ನಾನ ಹರಕೆ ಸೇವೆ ಸಲ್ಲಿಸಿದರು. ಸುಮಾರು ೨೫೫ ಭಕ್ತರು ಸ್ವಯಂಪ್ರೇರಿತರಾಗಿ ಸೇವೆ ನೆರವೇರಿಸಿದರು. ೧೫೦ ಪುರುಷರು, ೧೦೩ ಮಹಿಳೆಯರು, ೦೩ ಮಕ್ಕಳು ಸೇವೆ ಸಲ್ಲಿಸಿದರು.ಧಾರ್ಮಿಕ ದತ್ತಿ ಇಲಾಖೆಯ ಶೈವಾಗಮ ಪಂಡಿತ ಡಾ.ರಾಜಗೋಪಾಲ್ ಅವರ ಮಾರ್ಗದರ್ಶನದಂತೆ ಶ್ರೀ ದೇವರ ಮಧ್ಯಾಹ್ನದ ಮಹಾಪೂಜೆ ಬಳಿಕ ದೇವಳದ ಹೊರಾಂಗಣದ ಸುತ್ತಲೂ ೪೩೨ ಬಾಳೆ ಎಲೆಗಳನ್ನು ಹಾಕಿ ಅದರ ಮೇಲೆ ದೇವರ ನೈವೇಧ್ಯ ಬಡಿಸಲಾಯಿತು. ಬಳಿಕ ದೇವಳದ ಗೋವುಗಳು ಆ ಎಲೆಗಳಲ್ಲಿದ್ದ ಅನ್ನಪ್ರಸಾದವನ್ನು ತಿಂದವು. ಹಸುಗಳು ತಿಂದ ಅನ್ನಪ್ರಸಾದದ ಎಲೆ ಮೇಲೆ ದೇವಳದ ಎದುರಿನ ದರ್ಪಣತೀರ್ಥ ನದಿಯಲ್ಲಿ ಸ್ನಾನ ಮಾಡಿ ನಿಂತಿದ್ದ ಭಕ್ತರು ಉರುಳು ಸೇವೆ ಕೈಗೊಂಡರು. ಗೋವು ತಿಂದ ಎಲೆಯ ಮೇಲೆ ಉರುಳು ಸೇವೆ ಮಾಡುತ್ತಾ ಒಂದು ಸುತ್ತು ಪ್ರದಕ್ಷಿಣೆ ಹಾಕಿದ ಬಳಿಕ ಭಕ್ತರು ದರ್ಪಣ ತೀರ್ಥ ನದಿಯಲ್ಲಿ ಸ್ನಾನ ಮಾಡಿ ದೇವರ ಪ್ರಸಾದ ಮತ್ತು ಪ್ರಸಾದ ಭೋಜನ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಶ್ರೀ ದೇವಳದ ಆಡಳಿತಾಧಿಕಾರಿ ಜುಬಿನ್ ಮೊಹಾಪಾತ್ರಾ, ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಎಇಒ ಯೇಸುರಾಜ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ತಾಲೂಕು ವೈದ್ಯಾಧಿಕಾರಿ ಡಾ. ನಂದಕುಮಾರ್, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಲೋಲಾಕ್ಷ ಕೈಕಂಬ, ಪವನ್ ಎಂ.ಡಿ., ಪುರೋಹಿತ ಸರ್ವೇಶ್ವರ ಭಟ್, ದೇವಳದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ಶಿಷ್ಟಾಚಾರ ಅಧಿಕಾರಿ ಜಯರಾಮ ರಾವ್, ಹೆಬ್ಬಾರ್ ಪ್ರಸನ್ನ ಭಟ್ ಸೇರಿದಂತೆ ದೇವಸ್ಥಾನದ ಸಿಬ್ಬಂದಿ ಹಾಗೂ ಭಕ್ತರು ಉಪಸ್ಥಿತರಿದ್ದರು.