ಶಿವಮೊಗ್ಗ: ವಿಶೇಷ ಚೇತನ ಮಕ್ಕಳಿಗೆ ಸಾಮಾನ್ಯ ಶಾಲೆಯಲ್ಲಿ ಓದಲು ಅವಕಾಶ ನೀಡಬೇಕು. ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಕಾರ್ಯಕರ್ತರಿಗೆ ಪೋಕ್ಸೋ, ಬಾಲ್ಯ ವಿವಾಹ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ತರಬೇತಿ ನೀಡುವುದು ಅತ್ಯವಶ್ಯ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಅಪರ್ಣಾ ಕೊಳ್ಳ ಅಧಿಕಾರಿಗಳಿಗೆ ಸೂಚಿಸಿದರು.ನಗರದ ಜಿಲ್ಲಾ ಡಯಟ್ ತರಬೇತಿ ಸಂಸ್ಥೆಯಲ್ಲಿ ಗುರುವಾರ ಆಯೋಜಿಸಿದ್ದ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು(ವಿಆರ್‌ಡಬ್ಲ್ಯು) ಮತ್ತು ನಗರ ಪುನರ್ವಸತಿ ಕಾರ್ಯಕರ್ತರು(ಯುಆರ್‌ಡಬ್ಲ್ಯು) ಹಾಗೂ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರು(ಎಂಆರ್‌ಡಬ್ಲ್ಯು) ಗಳಿಗೆ ಬಾಲ್ಯ ವಿವಾಹ, ಪೋಕ್ಸೋ ಮತ್ತು ಮಕ್ಕಳ ರಕ್ಷಣೆ ಕುರಿತು ಏರ್ಪಡಿಸಿದ್ದ ಅರಿವು ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ರಾಜ್ಯದಲ್ಲಿ 10 ಲಕ್ಷ ಜನ ವಿಶೇಷ ಚೇತನರಿದ್ದು, ಶೇ.5ರಿಂದ 7ರಷ್ಟಿದ್ದಾರೆ. ಇದರಲ್ಲಿ ಶೇ.40 ಮಕ್ಕಳು ಇದ್ದಾರೆ. ಆದ್ದರಿಂದ ಇವರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳು, ಹಕ್ಕುಗಳು ಲಭಿಸುತ್ತಿವೆಯೇ ಎಂದು ಪರಿಶೀಲಿಸುವ ಅವಶ್ಯಕತೆ ಇದೆ. ವಿಶೇಷ ಚೇತನ ಎಲ್ಲ ಮಕ್ಕಳಿಗೆ ಅಗತ್ಯವಾಗಿ ಶಿಕ್ಷಣ ನೀಡಬೇಕು. ಶ್ರವಣ ಮತ್ತು ಕಣ್ಣಿನ ದೋಷ ಹೊರತುಪಡಿಸಿ ಉಳಿದ ವಿಶೇಷ ಚೇತನ ಮಕ್ಕಳಿಗೆ ಸಾಮಾನ್ಯ ಶಾಲೆಗಳಲ್ಲಿ ದಾಖಲಾತಿಸಿಗಬೇಕು. ಕೆಲವು ಶಾಲೆಗಳಲ್ಲಿ ದಾಖಲಾತಿ ನೀಡುತ್ತಿಲ್ಲ ಎಂಬ ದೂರು ಇದ್ದು, ಇದನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್.ಸಂತೋಷ್ ಮಾತನಾಡಿ, ಜಿಲ್ಲೆಯ 1234 ಶಾಲೆಗಳಲ್ಲಿ ಕಾನೂನಿನ ಕುರಿತು, ಬಾಲ್ಯವಿವಾಹ, ಪೋಕ್ಸೋ, ಮಕ್ಕಳ ಹಕ್ಕುಗಳ ಕುರಿತು ಶಿಕ್ಷಕರು ಮತ್ತು ಮಕ್ಕಳಿಂದಲೇ ಜಾಗೃತಿ ಮೂಡಿಸುವ, ಚರ್ಚಿಸುವ ಸಾಕ್ಷರತಾ ಕ್ಲಬ್‌ಗಳನ್ನು ಆರಂಭಿಸಲಾಗಿದೆ ಎಂದರು.
ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಸುವರ್ಣ ನಾಯಕ್ ಮಾತನಾಡಿ, ಜಿಲ್ಲೆಯಲ್ಲಿ 3085 ವಿಶೇಷ ಮಕ್ಕಳಿದ್ದು, 2194 ಮಕ್ಕಳು ಸಾಮಾನ್ಯ ಶಾಲೆಯಲ್ಲಿ ಮತ್ತು 423 ವಿಶೇಷ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ 7 ವಿಶೇಷ ಶಾಲೆಗಳಿವೆ. ಯಾವುದೇ ವಿಶೇಷ ಮಗು ಶಿಕ್ಷಣ, ಶಾಲೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು, ಅವರಿಗೆ ಲಭಿಸಬೇಕಾದ ಸೌಲಭ್ಯಗಳನ್ನು ನೀಡಲು ಕಾರ್ಯಕರ್ತರು ಮುತುವರ್ಜಿ ವಹಿಸಿ ಕೆಲಸ ಮಾಡಬೇಕು ಎಂದರು.ಮಹಿಳಾ ಪೊಲೀಸ್ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಭರತ್ ಕುಮಾರ್ ಮಾತನಾಡಿ, ಗ್ರಾಮೀಣ ಮತ್ತು ನಗರ ಭಾಗದಲ್ಲಿ ಪ್ರಕರಣಗಳ ಸರಿಯಾದ ಮಾಹಿತಿ ನೀಡಬೇಕು. ಪೊಲೀಸ್ ಸಹಾಯವಾಣಿ 112 ಮತ್ತು ಮಕ್ಕಳ ಸಹಾಯವಾಣಿ 1098 ಬಗ್ಗೆ ಜಾಗೃತಿ ಮೂಡಿಸಬೇಕು ಹಾಗೂ ಕಾನೂನಾತ್ಮಕ ಸಮಸ್ಯೆಗಳಿದ್ದಾಗ ವಿಶೇಷಚೇತನರಿಗೆ ಠಾಣೆಗೆ ಬರಲು ಕಾರ್ಯಕರ್ತರು ಸಹಾಯ ಮಾಡಬೇಕು ಎಂದರು.ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಂಜುನಾಥ್.ಆರ್ ಪ್ರಾಸ್ತಾವಿಕವಾಗಿ ಮಾತನಾಡಿದರು.