ಹೊಸಪೇಟೆ: ದೇಶದ ಆಸ್ತಿಯಾಗಿರುವ ಮಕ್ಕಳನ್ನು ದುಡಿಮೆಗೆ ಹಚ್ಚದೇ ಶಿಕ್ಷಣವಂತರಾಗಿ ಮಾಡುವ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಹೇಮಲತಾ ಬಿ. ಹುಲ್ಲೂರ ಹೇಳಿದರು.
ಈ ಮೊದಲು ಬಾಲ ಕಾರ್ಮಿಕರು ಕೃಷಿ ಚಟುವಟಿಕೆಯಲ್ಲಿ ಹೆಚ್ಚು ಕಾಣಸಿಗುತ್ತಿದ್ದರು. ಈಗ ಹೆಚ್ಚಾಗಿ ಗ್ಯಾರೇಜ್, ಹೋಟೆಲ್‌ಗಳಲ್ಲಿ ಕೆಲಸ ಮಾಡುವುದು ರೂಢಿಯಾಗುತ್ತಿದೆ. ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗಬಾರದು. ಶಿಕ್ಷಣ ಮಕ್ಕಳ ಸಂವಿಧಾನ ಬದ್ಧ ಹಕ್ಕಾಗಿದೆ. ಅವರಿಗೆ ಪ್ರತಿಯೊಂದು ಸೌಲಭ್ಯ ಸಿಗುವಂತಾಗಬೇಕು ಎಂದು ಸಲಹೆ ನೀಡಿದರು.
ಅಪರ ಸಿವಿಲ್ ನ್ಯಾಯಾಧೀಶ ಅಶೋಕ್ ಎಚ್.ಆರ್. ಅವರು ಮಾತನಾಡಿ, ಮಕ್ಕಳು ಕಟ್ಟಡ ಕೆಲಸದಲ್ಲಿ, ಅಂಗಡಿಗಳಲ್ಲಿ, ಬೇಕರಿ, ದೊಡ್ಡ ದೊಡ್ಡ ಮನೆಗಳಲ್ಲಿ ಹಾಗೂ ಇನ್ನಿತರ ಸ್ಥಳಗಳಲ್ಲಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಕೆಲಸದಾಳುಗಳಾಗಿದ್ದಾರೆ. ಇಂತಹ ಅನಿಷ್ಟ ಬಾಲ ಕಾರ್ಮಿಕ ಪದ್ಧತಿಯ ಪಿಡುಗನ್ನು ಹೋಗಲಾಡಿಸಬೇಕು ಎಂದರು.ಬಳಿಕ ಡಾನ್ ಬಾಸ್ಕೊ ಸಂಸ್ಥೆಯಲ್ಲಿ ನಡೆದ ಸಮಾರಂಭದಲ್ಲಿ ಕಾರ್ಮಿಕ ಅಧಿಕಾರಿ ಸೂರ್ಯಪ್ಪ ಡೊಂಬರಮತ್ತ್ತೂರ ಮಾತನಾಡಿ, ಬಾಲ ಕಾರ್ಮಿಕ ಪದ್ದತಿಯನ್ನು ಹೋಗಲಾಡಿಸುವುದು, ಅದರಿಂದ ಉಂಟಾಗುವ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು. ವಕೀಲ ಎ. ಕರುಣಾನಿಧಿ ವಿಶೇಷ ಉಪನ್ಯಾಸ ನೀಡಿದರು.
ಜಾಗೃತಿ ಜಾಥಾ:
ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯ ನಿಮಿತ್ತ ನಗರದ ಪ್ರಮುಖ ಬೀದಿಗಳಲ್ಲಿ ಜನ ಜಾಗೃತಿ ಜಾಥಾ ನಡೆಯಿತು. ನಗರದ ಸರ್ದಾರ್ ಪಟೇಲ್ ಸರ್ಕಾರಿ ಪ್ರೌಢಶಾಲೆಯಿಂದ ಆರಂಭವಾದ ಜಾಥಾ ನಗರದ ವಿವಿಧೆಡೆ ಸಂಚರಿಸಿ ಡಾನ್ ಬಾಸ್ಕೋ ಸಂಸ್ಥೆಗೆ ತಲುಪಿತು.