ಕನ್ನಡಪ್ರಭ ವಾರ್ತೆ ವಿಜಯಪುರ
ಶಿಕ್ಷಣಕ್ಕೆ ಬಡತನ ಎಂದಿಗೂ ಅಡ್ಡಿಯಾಗಲಾರದು. ಅದಕ್ಕೆ ಹಿಂಜರಿಯುವುದು ಬೇಡ. ಉನ್ನತ ಮಟ್ಟದ ಶಿಕ್ಷಣ ಪಡೆಯಬೇಕು, ಉನ್ನತ ಶಿಕ್ಷಣ ಪಡೆದರೂ ನಾವು ಮನುಷ್ಯರಾಗಿ ಬದುಕುವುದನ್ನು ಕಲಿಯಬೇಕು ಎಂದು ಅಬಕಾರಿ ಇಲಾಖೆಯ ಕಲಬುರಗಿ ವಿಭಾಗೀಯ ಕಮೀಷನರ್ ಬಸವರಾಜ ಹಡಪದ ಹೇಳಿದರು.ನಗರದ ಸಿದ್ದೇಶ್ವರ ಕಲಾಭವನ ಮಂಟಪದಲ್ಲಿ ಕರ್ನಾಟಕ ರಾಜ್ಯ ಹಡಪದ ನೌಕರರ ಸಂಘ(ರಿ) ಬೆಂಗಳೂರು (ಎಸ್‌ಎಚ್‌ಇಎ) ನೇತೃತ್ವದಲ್ಲಿ ನಡೆದ ಶಿವಶರಣ ಹಡಪದ ಅಪ್ಪಣ್ಣನವರ ಜಯಂತ್ಯುತ್ಸವದ ನಿಮಿತ್ತ 2024ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿ ಸಾಧನೆ ಮಾಡಿದ ಹಡಪದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪಾಲಕರು ಮಕ್ಕಳಿಗೆ ಮೊದಲು ಮಾತೃಭಾಷೆಯಲ್ಲಿ ಶಿಕ್ಷಣ ಕೊಡಿಸುವುದು ಅತೀ ಅವಶ್ಯವಾಗಿದೆ. ವಿದ್ಯಾರ್ಥಿಗಳು ಪಠ್ಯೇತರ ವಿಷಯಗಳ ಅಭ್ಯಾಸದೊಂದಿಗೆ 12ನೇ ಶತಮಾನದ ಬಸವಾದಿ ಶರಣರ ವಚನಗಳ ಗ್ರಂಥಗಳನ್ನು ಓದುವುದನ್ನು ರೂಢಿಸಿಕೊಳ್ಳಬೇಕು. ಎಲ್ಲ ಶರಣರನ್ನು ಸರಿಸಮಾನವಾಗಿ ಕಂಡಾಗ ನಮ್ಮ ಜೀವನ ಪಾವನವಾಗುತ್ತದೆ ಎಂದು ತಿಳಿಸಿದರು.ಜ್ಞಾನಯೋಗಾಶ್ರಮದ ಬಸವಲಿಂಗ ಸ್ವಾಮೀಜಿ ಮಾತನಾಡಿ, ಹಡಪದ ಸಮಾಜ ಸಣ್ಣ ಸಮಾಜವಾಗಿದ್ದರೂ ಒಳ್ಳೆಯ ಸ್ವಭಾವ ಹೊಂದಿದವರು. ಕಾಯಕ ಮಾಡಿಯೇ ಹೊಟ್ಟೆ ತುಂಬಿಸಿಕೊಳ್ಳುವ ಸಮಾಜದಲ್ಲಿ ಜನಿಸಿದ ವಿದ್ಯಾರ್ಥಿಗಳು ಒಳ್ಳೆಯ ಶಿಕ್ಷಣ ಪಡೆದು ಸಮಾಜದ ಋಣ ತೀರಿಸಬೇಕು. ನಮ್ಮಲ್ಲಿ ಜಾತಿಗೊಂದಲವಿದೆ. ಬಸವಣ್ಣನವರು ಜಾತಿಯನ್ನು ನೋಡದೇ ಜಗಜ್ಯೋತಿಯಾದರು. ಮಕ್ಕಳ ಅಂತರಂಗದಲ್ಲಿ ವಿದ್ಯಾದೀಪ ಬೆಳಗುವ ಕೆಲಸ ಮಾಡಬೇಕು. ಮಕ್ಕಳು ವಿದ್ಯಾವಂತರಾಗಿ, ಬುದ್ಧಿವಂತರಾಗಿ ಸಮಾಜಕ್ಕೆ ಮಾದರಿಯಾಗಬೇಕು. ಬಿದ್ದವರನ್ನು ಮೇಲೆತ್ತುವ ಧರ್ಮ ನಮ್ಮದು ಇದೇ ಶ್ರೇಷ್ಠ ಕಾರ್ಯ ಎಂದರು.ನಗರದ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಕಾರ್ಯದರ್ಶಿ ಶಿವಾನಂದ ಕೆಲೂರ ಮಾತನಾಡಿ, ಸಾಧನೆ ಎನ್ನುವುದು ವ್ಯಕ್ತಿಗೆ ಸಂಬಂಧಿಸಿದ್ದಲ್ಲ. ಅದು ಎಲ್ಲರಿಗೂ ಮುಟ್ಟಬೇಕು. ವಿದ್ಯಾರ್ಥಿಗಳಿಗೆ ಇದು ಕೊನೆಯಲ್ಲ. ನಿಮ್ಮ ಗುರಿ ತಲುಪುವರೆಗೂ ಸಾಧನೆ ಮಾಡಬೇಕು. ಸಣ್ಣ ಗುರಿ ಇಟ್ಟುಕೊಳ್ಳದೇ ದೊಡ್ಡ ಗುರಿಯಿಟ್ಟುಕೊಂಡು ಸಹನಶೀಲರಾಗಿ ಸಾಧನೆ ಮಾಡಬೇಕು ಎಂದು ತಿಳಿಸಿದರು.ಕ.ರಾ.ಹ.ನೌ.ಸಂಘದ ರಾಜ್ಯ ಗೌರವಾಧ್ಯಕ್ಷ ಕರ್ನಲ್ ಸಂಗಪ್ಪ ಹಡಪದ, ಹುಬ್ಬಳ್ಳಿ ಧಾರವಾಡ ಪಿ.ಐ.ಗುರುರಾಜ ಮೈಲಾರ, ಕ.ರಾ.ಹ.ನೌ.ಸಂಘದ ರಾಜ್ಯಾಧ್ಯಕ್ಷ ಪ್ರಕಾಶ.ಆರ್.ಎಚ್, ಮಾರುತಿ ಹಡಪದ ಮಾತನಾಡಿದರು. ಕ.ರಾ.ಹ.ನೌ.ಸಂಘದ ವಿಜಯಪುರ ಜಿಲ್ಲಾಧ್ಯಕ್ಷ ದಶರಥ ನಾವಿ, ಗೌರವಾಧ್ಯಕ್ಷ ಚಂದ್ರಶೇಖರ ಹಡಪದ, ಬಾಗಲಕೋಟೆ ಜಿಲ್ಲಾಧ್ಯಕ್ಷ ಲಕ್ಷ್ಮಣ ಹಡಪದ, ಧಾರವಾಡ ಜಿಲ್ಲಾಧ್ಯಕ್ಷ ಶಂಕರ ಹಡಪದ, ವಿಜಯನಗರ ಜಿಲ್ಲಾಧ್ಯಕ್ಷ ಕೆ.ತಿಪ್ಪೆಸ್ವಾಮಿ, ಯಾದಗಿರಿ ಜಿಲ್ಲಾಧ್ಯಕ್ಷ ಕಳಸಪ್ಪ ಹಡಪದ, ಬೆಂಗಳೂರು ಜಿಲ್ಲಾ ಕಾರ್ಯದರ್ಶಿ ಭೀಮಪ್ಪ ಹಡಪದ ಉಪಸ್ಥಿತರಿದ್ದರು.ಅನನ್ಯ ಹಡಪದ ವಚನ ಗಾಯನಕ್ಕೆ ನೃತ್ಯ ಮಾಡಿದರು. ಮುದ್ದೇಬಿಹಾಳ ಎಂಜಿವ್ಹಿಸಿ ಕಾಲೇಜಿನ ಉಪನ್ಯಾಸಕ ಬಸವರಾಜ ಹಡಪದ ನಿರೂಪಿಸಿದರು, ಸಂಘದ ರಾಜ್ಯ ಪ್ರ.ಕಾರ್ಯದರ್ಶಿ ಶಿವಾನಂದ ನಾವಿ, ಜಿಲ್ಲಾ ಉಪಾಧ್ಯಕ್ಷೆ ಭಾರತಿ ಹಡಪದ ಸ್ವಾಗತಿಸಿದರು, ಮಹೇಶ ಹಡಪದ ವಂದಿಸಿದರು.
-----------