ಕನ್ನಡಪ್ರಭ ವಾರ್ತೆ ತುಮಕೂರು
ನಗರದ ಸ್ಟೂಡೆಂಟ್ ಇಸ್ಲಾಮಿಕ್ ಆರ್ಗೈನೇಜೇಷನ್ ಆಫ್ ಇಂಡಿಯಾ ವತಿಯಿಂದ ಆಯೋಜಿಸಿದ್ದ 18ನೇ ವರ್ಷದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದಿಸಿ ಮಾತನಾಡಿದರು.
ಇಡೀ ವಿಶ್ವದಲ್ಲಿಯೇ ಭಾರತದ ಸಂವಿಧಾನಕ್ಕೆ ಮಹತ್ವವಿದೆ. ಬಡವ, ಬಲ್ಲಿದ ಎಲ್ಲರೂ ಸಹ ಇದರ ಅಡಿಯಲ್ಲಿ ರಕ್ಷಣೆ ಪಡೆಯಬಹುದು. ಯಾವುದೇ ವ್ಯಕ್ತಿ ತಾನಾಡುವ ಮಾತು ಮತ್ತು ಮಾಡುವ ಕೆಲಸ ದೇಶದ ಅಭಿವೃದ್ಧಿಗೆ ಪೂರಕವಾಗಿದ್ದರೆ ಆತ ದೇಶಪ್ರೇಮಿ. ದೇಶ ಅಭಿವೃದ್ಧಿಗೆ ಮಾರಕವಾಗಿದ್ದರೆ ಆತನೇ ದೇಶದ್ರೋಹಿ. ಹೆಚ್ಚು ವಿದ್ಯಾವಂತರೇ ಕೋಮವಾದಿ, ಭ್ರಷ್ಟಾಚಾರಿ, ಭಯೋತ್ಪಾದಕರಾಗಿ ಬದಲಾಗುತ್ತಿದ್ದಾರೆ. ಹಾಗಾಗಿ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳು ಸೇರಿದಂತೆ ಸಂಪೂರ್ಣ ಸಮಾಜಮುಖಿ ವ್ಯಕ್ತಿಗಳನ್ನಾಗಿ ರೂಪಿಸುವ ಅಗತ್ಯವಿದೆ ಎಂದರು.ಪ್ರಪಂಚದಲ್ಲಿ ಡಾಕ್ಟರ್, ಎಂಜಿನಿಯರ್, ವಿಜ್ಞಾನಿ, ವಕೀಲರಾಗಲು ಕಾಲೇಜುಗಳಿವೆ. ಆದರೆ ಮಾನವೀಯತೆ, ಸಹೋದರತೆ, ಪರಸ್ಪರ ಪ್ರೀತಿಯಿಂದ ಸತ್ಪ್ರಜೆಯಾಗಿ ಬದುಕುವುದನ್ನು ಕಲಿಸುವ ಯಾವ ಕಾಲೇಜುಗಳೂ ಇಲ್ಲ. ಹಾಗಾಗಿಯೇ ಸಾಂಪ್ರದಾಯಕ ಶಿಕ್ಷಣದ ಜೊತೆಗೆ ಧಾರ್ಮಿಕ ಮತ್ತು ಲೌಕಿಕ ಜ್ಞಾನದ ಶಿಕ್ಷಣವೂ ಅಗತ್ಯವಿದೆ. ಸಮಸ್ಯೆಯನ್ನು ಸೃಷ್ಟಿಸುವವನು ನಿಜವಾದ ನಾಯಕನಲ್ಲ. ಸಮಸ್ಯೆಯ ಮೂಲ ತಿಳಿದು ಅದನ್ನು ಹೋಗಲಾಡಿಸುವವನೇ ನಿಜವಾದ ನಾಯಕ. ಇಂದು ಸಮಾಜವನ್ನು ಒಡೆಯುವವರ ಸಂಖ್ಯೆಯೇ ಹೆಚ್ಚಾಗಿದೆ. ಅವುಗಳ ನಡುವೆ ಇಂತಹ ಕಾರ್ಯಕ್ರಮಗಳ ಮೂಲಕ ಎಸ್ಐಒ ಸಮಾಜ ಕಟ್ಟುವ ಕೆಲಸ ಮಾಡುತ್ತಿದೆ. ಭವಿಷ್ಯದ ಪ್ರಜೆಗಳಾದ ಮಕ್ಕಳ ಮುಂದಿರುವ ಗುರಿಗಳೇನು, ಅವುಗಳನ್ನು ತಲುಪಲು ಇರುವ ದಾರಿಗಳೇನು ಎಂಬುದನ್ನು ಮನವರಿಕೆ ಮಾಡಿಕೊಡುವ ಕೆಲಸ ಮಾಡುತ್ತಿದೆ ಎಂದರು.
ಸಾನಿಧ್ಯವನ್ನು ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯಸ್ವಾಮೀಜಿ ವಹಿಸಿದ್ದರು. ವೇದಿಕೆಯಲ್ಲಿ ಮಾಜಿ ಶಾಸಕರಾದ ಎಸ್.ಶಫಿ ಅಹಮದ್, ಡಾ.ರಫೀಕ್ ಅಹಮದ್, ಮುಖಂಡರಾದ ಇಕ್ಬಾಲ್ ಅಹಮದ್ ಮಾತನಾಡಿದರು. ಎಸ್ಪಿ ಅಶೋಕ.ಕೆ.ವಿ, ಶಾಹೀನ್ ಗ್ರೂಫ್ ಅಫ್ ಎಜುಕೇಷನ್‌ನ ಅಧ್ಯಕ್ಷ ಡಾ.ಅಬ್ದುಲ್ ಖದೀರ್, ಜಿಲ್ಲಾ ಅಲ್ಪಸಂಖ್ಯಾತ ಅಧಿಕಾರಿ ಶಬ್ಬೀರ್ ಅಹಮದ್, ಪ್ರೊ.ಅಸಾದುಲ್ಲಾ ಖಾನ್, ತಾಜುದ್ದೀನ್ ಷರೀಫ್,ಅಬ್ದುಲ್ ಜಬ್ಬರ ಸಾಬ್, ಪಿಯುಡಿಡಿಪಿಐ ಡಾ.ಬಾಲ ಗುರುಮೂರ್ತಿ, ಎಸ್.ಐ.ಓ ಜಿಲ್ಲಾಧ್ಯಕ್ಷ ಖಲೀಲ್ ಅವರು ಉಪಸ್ಥಿತರಿದ್ದರು.
ಶಿಕ್ಷಣವೆಂದರೆ ಬದುಕಿನ ಎಲ್ಲಾ ಸಮಸ್ಯೆಗಳನ್ನು ಎದುರಿಸಿ, ಎಲ್ಲರಲ್ಲಿಯೂ ಸಂತೋಷವನ್ನು ಉದ್ದೀಪನಗೊಳಿಸುವುದೇ ಆಗಿದೆ. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬರ ಕಾರ್ಯವೂ ಶ್ಲಾಘನೀಯ. - ಯ. ಟಿ. ಖಾದರ್, ವಿಧಾನಸಭಾಧ್ಯಕ್ಷ