ವಿಜ್ಞಾನ ವಸ್ತುಪ್ರದರ್ಶನ । ಅಭಿಮತ । ನಿಡಗೋಡು ಶಾಲೆಯಲ್ಲಿ ವಿಜ್ಞಾನ ಲೋಕ ಅನಾವರಣ । ಕರಕುಶಲ ವಸ್ತುಗಳು, ವಿಜ್ಞಾನದ ಮಾದರಿಗಳ ಪ್ರದರ್ಶನ
ಶಿಕ್ಷಣವು ಮಕ್ಕಳ ಒಳಗಿನ ಸುಪ್ತ ಮನಸ್ಸನ್ನು ಜಾಗೃತಗೊಳಿಸಲು ಸಹಕಾರಿಯಾಗುತ್ತದೆ. ವಿದ್ಯಾರ್ಥಿಗಳು ಪ್ರಾಮಾಣಿಕತೆ ಮತ್ತು ಸಭ್ಯತೆಯನ್ನು ಕಲಿಯಬೇಕು. ಇದನ್ನು ಕಲಿಸುವುರಲ್ಲಿ ಪೋಷಕರು ಹಾಗೂ ಶಿಕ್ಷಕರು ಪ್ರಮುಖ ಪಾತ್ರ ವಹಿಸಬೇಕು. ಆಗ ಮಾತ್ರ ನಾವು ಉತ್ತಮ ಸಮಾಜವನ್ನು ನಿರ್ಮಿಸಬಹುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ ಹೇಳಿದರು.
ಪಟ್ಟಣದ ಮೂಡಿಗೆರೆ ರಸ್ತೆಯಲ್ಲಿನ ಎನ್.ನಿಡಗೋಡು ಯುನೈಟೆಡ್ ಅಕಾಡೆಮಿ ಶಾಲೆ ವಿದ್ಯಾರ್ಥಿಗಳು ಆಯೋಜಿಸಿದ್ದ ವಿಜ್ಞಾನ ಮತ್ತು ಕರಕುಶಲ ವಸ್ತುಪ್ರದರ್ಶನವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು.ವಿಜ್ಞಾನವು ಒಂದು ವ್ಯವಸ್ಥಿತವಾದ ಅಧ್ಯಯನ. ಇಂದು ಪ್ರತಿಯೊಂದು ವಿಜ್ಞಾನದ ಆಧಾರಿತವಾಗಿವೆ. ವಿದ್ಯಾರ್ಥಿಗಳು ಸ್ವಂತಿಕೆಯಿಂದ ಯೋಚಿಸಿದಾಗ ವಿಜ್ಞಾನಕ್ಕೆ ಅಪಾರ ಕೊಡುಗೆ ಸಲ್ಲಿಸಬಹುದು. ಮಕ್ಕಳನ್ನು ವಿಜ್ಞಾನ ಮತ್ತು ಸಾಮಾಜಿಕವಾಗಿ ಸೆಳೆಯುವ ಮೂಲಕ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ಎಂದು ಹೇಳಿದರು.
ಸಂಸ್ಥೆಯ ಕಾರ್ಯದರ್ಶಿ ಎಂ.ಡಿ.ದಿನೇಶ್ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವು ವಿಜ್ಞಾನ ಮತ್ತು ಕರಕುಶಲ ವಸ್ತು ಪ್ರದರ್ಶನವನ್ನು ಏರ್ಪಡಿಸಿದ್ದೇವೆ. ಪೋಷಕರು ಸಹ ನಮ್ಮ ಎಲ್ಲಾ ಕಾರ್ಯಕ್ರಮಗಳಿಗೂ ಉತ್ತಮ ಬೆಂಬಲ ನೀಡುತ್ತಿದ್ದು, ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಹಲವಾರು ರೀತಿಯ ಆವಿಷ್ಕಾರದ ರೀತಿ ಪ್ರಯೋಗಗಳನ್ನು ಮಾಡಿ ಪ್ರದರ್ಶಿಸುತ್ತಿರುವುದು ಮಕ್ಕಳಿಗೆ ವಿಜ್ಞಾನದ ಕಡೆಗೆ ಒಲವು ಎಷ್ಟಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಕಾರಿಯಾಗಿದೆ ಎಂದು ತಿಳಿಸಿದರು.
ನಂತರ ಕ್ಷೇತ್ರ ಶಿಕ್ಷಣಾಧಿಕಾರಿಗಳು ವಿಜ್ಞಾನ ಮತ್ತು ಕರಕುಶಲ ವಸ್ತುಪ್ರದರ್ಶನ ಮಾಡಿದ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿ ಮಾಹಿತಿ ಪಡೆದರು.
ಸಂಸ್ಥೆಯ ಅಧ್ಯಕ್ಷ ವಿ.ಎಸ್.ಬೋಜೇಗೌಡ, ಖಜಾಂಚಿ ಸಿ.ಎಚ್.ಲೋಕೇಶ್, ಮುಖ್ಯ ಶಿಕ್ಷಕಿ ದೀಪ ಎಂ.ಎನ್. ಮತ್ತು ಅಸ್ಮ, ಶಾಲಾ ಶಿಕ್ಷಕರು, ಸಿಬ್ಬಂದಿ, ಪೋಷಕರು, ಮಕ್ಕಳು ಹಾಜರಿದ್ದರು.