ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಶಾರದಾ ವಿಲಾಸ ಪದವಿ ಪೂರ್ವ ಕಾಲೇಜಿನಲ್ಲಿ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದ ಜಿ. ವೆಂಕಟರಾಮು ಸೇವೆಯಿಂದ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಅವರು ಮಾತನಾಡಿದರು.
ಶ್ರದ್ಧೆ ಮತ್ತು ಆಸಕ್ತಿ, ಏಕಾಗ್ರತೆ ಇದ್ದಲ್ಲಿ ಗುರಿ ತಲುಪಬಹುದು, ಸತತ ಪರಿಶ್ರಮ ಯಶಸ್ವಿಗೆ ಕಾರಣವಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥ ಮಾಡದೆ ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಮುಂದೆ ಬರಬೇಕೆಂದರು.ಶಾರದಾ ವಿಲಾಸ ಕಾಲೇಜಿನ ಪ್ರಾಂಶುಪಾಲೆ ಎಂ. ದೇವಿಕಾ ಮಾತನಾಡಿ, ಅಧ್ಯಾಪಕರ ವೃತ್ತಿ ಅತ್ಯಂತ ಜವಾಬ್ದಾರಿಯುತವಾದದ್ದು, ಅದನ್ನು ಯಶಸ್ವಿಯಾಗಿ ನಿಭಾಯಿಸಬೇಕಾದರೆ ಶಿಕ್ಷಕ ವೃಂದ ಯಾವಾಗಲೂ ಓದಿನಲ್ಲಿ ತೊಡಗಿಸಿಕೊಳ್ಳಬೇಕು, ಸತತ ಓದಿನಿಂದ ಹೆಚ್ಚು ಹೆಚ್ಚು ವಿಷಯಗಳನ್ನು ಮಕ್ಕಳಿಗೆ ಬೋಧಿಸಲು ಸಾಧ್ಯವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಸಿ.ಕೆ. ಅಶೋಕ್ ಕುಮಾರ್ ಮಾತನಾಡಿ, ಶಿಕ್ಷಕ ಇಡೀ ಜಗತ್ತಿಗೆ ಜ್ಞಾನವನ್ನು ನೀಡುವ ಭಂಡಾರ, ಅದನ್ನು ವಿದ್ಯಾರ್ಥಿಗಳು ತರಗತಿಯಲ್ಲಿ ಏಕಾಗ್ರತೆಯಿಂದ ಕಲಿತು, ಜೀವನದಲ್ಲಿ ಮುಂದೆ ಬರಬೇಕೆಂದರು.
ಹಿರಿಯ ಉಪನ್ಯಾಸಕ ಎಚ್.ಆರ್. ಪರಮೇಶ್ ಸ್ವಾಗತಿಸಿದರು, ಉಪನ್ಯಾಸಕ ರಾಜೇಂದ್ರಪ್ರಸಾದ್ ಹೊನ್ನಲಗೆರೆ ನಿರೂಪಿಸಿದರು, ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕ ಕಾವ್ಯಶ್ರೀ ಆರ್. ರಾವ್ ಪ್ರಾರ್ಥಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಎಂ. ಲಾವಣ್ಯ ವಂದಿಸಿದರು.