ಶಿಕ್ಷಣ ಸಂಸ್ಕೃತಿ, ಸದ್ಗುಣ, ಸಂಸ್ಕಾರಗಳ ಸಮ್ಮಿಲನ: ಚಂದ್ರಶೇಖರ್

KannadaprabhaNewsNetwork |  
Published : Nov 18, 2024, 12:02 AM IST
೧೬ಕೆಎಂಎನ್‌ಡಿ-೬ಮಂಡ್ಯದ ಎಸ್.ಬಿ.ಸಮುದಾಯ ಭವನದಲ್ಲಿ ಬೀದರ್‌ನ ಕಲ್ಯಾಣ ಕರ್ನಾಟಕ ಪ್ರತಿಷ್ಠಾನ ಇವರ ವತಿಯಿಂದ ಆರಂಭವಾಗಿರುವ ಕರ್ನಾಟಕ ಸುವರ್ಣ ಸಂಭ್ರಮ ಅಕ್ಷರ ಜ್ಯೋತಿ ಯಾತ್ರೆ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಚಿಂತನೆ ಇಲ್ಲದೆ ಯಾವುದೂ ಅರಳುವುದಿಲ್ಲ. ಚಿಂತನೆ, ಯೋಜನೆ, ಯೋಚನೆಗಳಿಂದ ಎಲ್ಲರೂ ಕ್ರಿಯಾಶೀಲರಾಗಿ ಸಮಾಜ ಕಟ್ಟುವಲ್ಲಿ ಸಕ್ರಿಯರಾಗಬೇಕಿದೆ. ಸಮಾಜದಲ್ಲಿನ ಕೊರತೆಗಳ ಬಗ್ಗೆ ಟೀಕಿಸುತ್ತಾ, ಕೊರಗುತ್ತಾ ಕೂರುವ ಬದಲು, ಒಂದಿಷ್ಟು ಕೈಗಳು ಒಂದಾಗಿ ದುಡಿದರೆ ನಮ್ಮ ಸುತ್ತಲಿನ ವ್ಯವಸ್ಥೆಯನ್ನು ಬದಲಿಸಿ, ಸರಿಪಡಿಸಿ ಸುಂದರಗೊಳಿಸಬಹುದು. ಕತ್ತಲೆಯನ್ನು ಶಪಿಸುವ ಬದಲು ಪುಟ್ಟ ಹಣತೆ ಬೆಳಗುವ ಸಂಕಲ್ಪ ಮಾಡಬೇಕಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಶಿಕ್ಷಣ ಎಂಬುದು ಕೇವಲ ಪುಸ್ತಕದ ಕಲಿಕೆ ಮಾತ್ರವಲ್ಲ, ಸಂಸ್ಕೃತಿ, ಸದ್ಗುಣ, ಸಂಸ್ಕಾರಗಳ ಸಮ್ಮಿಲನ ಎಂಬ ಅರಿವು ಮೂಡಿಸುವುದು. ಮೌಲ್ಯಗಳನ್ನು ಬಿತ್ತುವ ಮೂಲಕ ಸುಸಂಸ್ಕೃತ ಜನಾಂಗ ನಿರ್ಮಾಣ ಮಾಡುವುದು ಮುಖ್ಯವಾಗಿದೆ ಎಂದು ಮಾಂಡವ್ಯ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಕೆ.ಕೆ.ಚಂದ್ರಶೇಖರ್ ತಿಳಿಸಿದರು.

ಬೀದರ್‌ನ ಕಲ್ಯಾಣ ಕರ್ನಾಟಕ ಪ್ರತಿಷ್ಠಾನದಿಂದ ಆರಂಭವಾಗಿರುವ ಕರ್ನಾಟಕ ಸುವರ್ಣ ಸಂಭ್ರಮ-೫೦ರ ಅಕ್ಷರ ಜ್ಯೋತಿ ಯಾತ್ರೆಯನ್ನು ನಗರದಲ್ಲಿ ಸ್ವಾಗತಿಸಿ, ಎಸ್.ಬಿ.ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಚಿಂತನೆ ಇಲ್ಲದೆ ಯಾವುದೂ ಅರಳುವುದಿಲ್ಲ. ಚಿಂತನೆ, ಯೋಜನೆ, ಯೋಚನೆಗಳಿಂದ ಎಲ್ಲರೂ ಕ್ರಿಯಾಶೀಲರಾಗಿ ಸಮಾಜ ಕಟ್ಟುವಲ್ಲಿ ಸಕ್ರಿಯರಾಗಬೇಕಿದೆ. ಸಮಾಜದಲ್ಲಿನ ಕೊರತೆಗಳ ಬಗ್ಗೆ ಟೀಕಿಸುತ್ತಾ, ಕೊರಗುತ್ತಾ ಕೂರುವ ಬದಲು, ಒಂದಿಷ್ಟು ಕೈಗಳು ಒಂದಾಗಿ ದುಡಿದರೆ ನಮ್ಮ ಸುತ್ತಲಿನ ವ್ಯವಸ್ಥೆಯನ್ನು ಬದಲಿಸಿ, ಸರಿಪಡಿಸಿ ಸುಂದರಗೊಳಿಸಬಹುದು. ಕತ್ತಲೆಯನ್ನು ಶಪಿಸುವ ಬದಲು ಪುಟ್ಟ ಹಣತೆ ಬೆಳಗುವ ಸಂಕಲ್ಪ ಮಾಡಬೇಕಿದೆ ಎಂದು ಅಭಿಪ್ರಾಯಿಸಿದರು.

ಇಂದಿನ ವಿದ್ಯಾರ್ಥಿಗಳೇ ಮುಂದಿನ ಪ್ರಜೆಗಳು ಎಂಬಂತೆ ನಾವು ನಮ್ಮ ಭವಿಷ್ಯವನ್ನು ಉತ್ತಮಪಡಿಸಿಕೊಂಡು ದೇಶಕ್ಕೆ ಭದ್ರ ಬುನಾದಿ ಹಾಕಬೇಕು. ಇಂತಹ ಜ್ಯೋತಿಯಾತ್ರೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಬಹಳ ಮುಖ್ಯವಾದದ್ದು . ಇದು ಜೀವನದಲ್ಲಿ ತಿರುವು ಪಡೆದುಕೊಳ್ಳುವತ್ತ ಸಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ಮಹತ್ವದವಾದ ತಿರುವು, ಉದ್ದೇಶ ತುಂಬಾ ವ್ಯಾಪ್ತಿಯನ್ನು ಒಳಗೊಂಡು ವಿಶಾಲವಾದದ್ದಾಗಿದೆ ಎಂದು ಪ್ರತಿಪಾದಿಸಿದರು.

ಹದಿಹರಯದ ವಯಸ್ಸಿನಲ್ಲಿ ಮನಸ್ಸು ಗೊಂದಲದಿಂದ ಕೂಡಿರುತ್ತದೆ. ಅದಕ್ಕೆ ಕಡಿವಾಣ ಹಾಕುವುದು ಬಹಳ ಮುಖ್ಯ. ಇಂತಹ ಸಂದರ್ಭದಲ್ಲಿ ಬದುಕಿನ ಗುರಿಯನ್ನು ತೋರಿಸಿಕೊಡುವುದು ಅಕ್ಷರ ಯಾತ್ರೆ ಉದ್ದೇಶವಾಗಿದೆ. ಇದನ್ನು ಸಾಕಾರಗೊಳಿಸಿದರೆ ದೇಶ ಸುಭೀಕ್ಷವಾಗುತ್ತದೆ ಎಂಬ ಅಭಿಲಾಷೆಯನ್ನಿಟ್ಟುಕೊಂಡು ಬಂದಿರುವ ಜ್ಯೋತಿಯಾತ್ರೆಯನ್ನು ಎಲ್ಲರೂ ತಮ್ಮ ಮನೆಗಳಿಗೆ ಜ್ಯೋತಿಯನ್ನು ಹಚ್ಚಿದರೆ ಅದಕ್ಕೊಂದು ಅರ್ಥ ಬರುತ್ತದೆ ಎಂದರು.

ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಷಡಕ್ಷರಿ ಮಾತನಾಡಿ, ೬೦ ದಿನಗಳ ಕಾಲ ಹಮ್ಮಿಕೊಂಡಿರುವ ಯಾತ್ರೆ ರಾಜ್ಯಾದ್ಯಂತ ಸಂಚರಿಸಲಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣದ ಆಸಕ್ತಿ ಮೂಡಿಸಿ ಉನ್ನತ ಸಾಧನೆಗೆ ಛಲ ಮೂಡಿಸುವುದು, ವಿದ್ಯಾರ್ಥಿಗಳ ಮನೋಭಾವದಲ್ಲಿ ಸಕಾರಾತ್ಮಕ ಚಿಂತನೆ ಬೆಳೆಸುವುದು ಇದರ ಉದ್ದೇಶವಾಗಿದೆ ಎಂದರು.

ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ ಪಾಟೀಲ್, ರಾಷ್ಟ್ರ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶರಣ ಪಂಡಿತ ಕೆ. ಬಾಳೂರೆ ಹುಮನಾಬಾದ, ಕ್ರಾಂತಿಯೋಗಿ ಶ್ರೀ ಬಸವೇಶ್ವರ ನೌಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಮೇಶ್, ಕೆನರಾ ಬ್ಯಾಂಕ್‌ನ ಶಿವಾಬೇರವ ಮಾನೆ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.

PREV

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ