ಅನಧಿಕೃತ ಶಾಲೆಗಳ ವಿರುದ್ಧ ಶಿಕ್ಷಣ ಇಲಾಖೆ ಮೌನ

KannadaprabhaNewsNetwork | Published : Apr 14, 2025 1:18 AM

ಸಾರಾಂಶ

ಜಿಲ್ಲೆಯಲ್ಲಿ ಅನಧಿಕೃತ ಶಾಲೆಗಳ ವಿರುದ್ಧ ಶಾಲಾ ಶಿಕ್ಷಣ ಇಲಾಖೆ ಯಾವುದೇ ಕ್ರಮ ಕೈಗೊಳ್ಳದೆ ಮೌನ ವಹಿಸಿದೆ ಎಂದು ಜಿಲ್ಲಾ ಖಾಸಗಿ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ (ಉಸ್ಮಾರ್ಡ್) ಅಧ್ಯಕ್ಷ ಪ್ರದೀಪ್ ದೂರಿದರು.

ಕನ್ನಡಪ್ರಭ ವಾರ್ತೆ ರಾಮನಗರ

ಜಿಲ್ಲೆಯಲ್ಲಿ ಅನಧಿಕೃತ ಶಾಲೆಗಳ ವಿರುದ್ಧ ಶಾಲಾ ಶಿಕ್ಷಣ ಇಲಾಖೆ ಯಾವುದೇ ಕ್ರಮ ಕೈಗೊಳ್ಳದೆ ಮೌನ ವಹಿಸಿದೆ ಎಂದು ಜಿಲ್ಲಾ ಖಾಸಗಿ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ (ಉಸ್ಮಾರ್ಡ್) ಅಧ್ಯಕ್ಷ ಪ್ರದೀಪ್ ದೂರಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಜಿಲ್ಲೆಯಲ್ಲಿ ಸಾಕಷ್ಟು ಅನಧಿಕೃತ ಶಾಲೆಗಳು ಅಸ್ತಿತ್ವದಲ್ಲಿವೆ. ಇದೀಗ ಕೆಲ ಶಾಲೆಗಳು ಅನಧಿಕೃತವಾಗಿ ಆರಂಭವಾಗಿವೆ. ಶಿಕ್ಷಣ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದಿದ್ದರೂ ಇಂತಹ ಶಾಲೆಗಳು ರಾಜಾರೋಷವಾಗಿ ಫ್ಲೆಕ್ಸ್, ಬ್ಯಾನರ್, ಕರಪತ್ರಗಳ ಮೂಲಕ ಮಕ್ಕಳ ದಾಖಲಾತಿಗೆ ಆಹ್ವಾನಿಸುತ್ತಿವೆ ಎಂದು ಹೇಳಿದರು.

ಅನುಮತಿ ಪಡೆಯದ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ತಮ್ಮ ಸಂಘಟನೆ ಶಿಕ್ಷಣ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವ ಕ್ರಮವನ್ನೂ ಜರುಗಿಸುತ್ತಿಲ್ಲ. ಶಿಕ್ಷಣ ಇಲಾಖೆಯ ಕೆಲವು ಅಧಿಕಾರಿಗಳು ಜಾನ ಕುರುಡರಂತೆ ವರ್ತಿಸುತ್ತಿದ್ದಾರೆ. ಅನಧಿಕೃತ ಶಾಲೆಗಳಿಂದಾಗಿ ಹಲವಾರು ವರ್ಷಗಳಿಂದ ಅಸ್ತಿತ್ವದಲ್ಲಿರುವ ಅಧಿಕೃತ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕೊರತೆಯಾಗುತ್ತಿದೆ ಎಂದರು.

ಅನಧಿಕೃತ ಶಾಲೆಗಳಲ್ಲಿ ದಾಖಲಾಗುವ ಮಕ್ಕಳು ಸರ್ಕಾರದ ಸ್ಯಾಟ್ಸ್ ತಂತ್ರಾಂಶದಲ್ಲಿ ದಾಖಲಾಗುವುದಿಲ್ಲ. ಹೀಗಾಗಿ ಜನಸಂಖ್ಯೆಯಲ್ಲಿರುವ ಮಕ್ಕಳ ಸಂಖ್ಯೆಗೂ ಇಲಾಖೆಯ ಸ್ಯಾಟ್ಸ್ ತಂತ್ರಾಂಶದಲ್ಲಿನ ವಿದ್ಯಾರ್ಥಿಗಳ ಅಂಕಿ ಅಂಶ ವ್ಯತ್ಯಾಸವಾಗುತ್ತಿದೆ. ಇದೇ ಕಾರಣಕ್ಕೆ ಯುಡೈಸ್ ಪ್ಲಸ್ ತಂತ್ರಾಂಶದಲ್ಲಿ ಅಪಾರ್ ಐಡಿ ಸೃಜನೆಯಾಗುವುದಿಲ್ಲ. ಈ ಮಾಹಿತಿ ಶಿಕ್ಷಣ ಇಲಾಖೆಗೆ ತಿಳಿದಿದ್ದರೂ ಸಹ ಇಂತಹ ಶಾಲೆಗಳ ವಿರುದ್ದ ಕ್ರಮ ಕೈಗೊಂಡು, ಮಕ್ಕಳ ದಾಖಲಾತಿಯನ್ನು ಅಧಿಕಾರಿಗಳು ತಡೆಯುತ್ತಿಲ್ಲ ಎಂಬುದು ದುರಾದೃಷ್ಟಕರ ಎಂದು ಹೇಳಿದರು.

ಅನುಮತಿ ಇಲ್ಲದ ಶಾಲೆಗಳ ತಪಾಸಣೆಗೆಂದು ಹಿರಿಯ ಅಧಿಕಾರಿಗಳು ತೆರಳುವ ಮುನ್ನವೇ ಅಂತಹ ಶಾಲೆಗಳ ಮಾಲೀಕರ ಗಮನ ಕೆಲ ಸಿಬ್ಬಂದಿ ಸೆಳೆಯುತ್ತಿದ್ದಾರೆ ಎಂಬ ಅನುಮಾನವಿದೆ. ಹೀಗಾಗಿಯೆ ಆಧಿಕಾರಿಗಳ ಭೇಟಿ ಸಮಯದಲ್ಲಿ ಬೀಗ ಹಾಕಿರುವ ಬಾಗಿಲಿನ ಚಿತ್ರಗಳು ಮತ್ತು ವರದಿ ಇಲಾಖೆಯ ಕಡತಗಳನ್ನು ಸೇರುತ್ತಿವೆ ಎಂದರು.

ಅನುಮತಿ ಇಲ್ಲದ ತರಗತಿಗಳು:

ಇನ್ನು ಕೆಲವು ಶಾಲೆಗಳು ಪೂರ್ವ ಪ್ರಾಥಮಿಕ (ಎಲ್.ಕೆ.ಜಿ/ಯು.ಕೆ.ಜಿ) ತರಗತಿಗಳಿಗೆ ಅನುಮತಿ ಪಡೆದುಕೊಂಡಿವೆ. ಆದರೆ ಪ್ರಾಥಮಿಕ ತರಗತಿಗಳಿಗೂ ದಾಖಲಾತಿಗಳನ್ನು ಮಾಡಿಕೊಂಡು ಆ ವಿದ್ಯಾರ್ಥಿಗಳನ್ನು ಮತ್ಯಾವುದೋ ಶಾಲೆಯ ಅಥವಾ ಬೇರೆ ಜಿಲ್ಲೆಯ ಶಾಲೆಗಳಲ್ಲಿ ಸ್ಯಾಟ್ಸ್ ಒಟ್ಟುತಕ್ಕು ಸೇರಿಸಲಾಗುತ್ತಿದೆ ಎಂಬ ಆರೋಪಗಳುವೆ. ಇದರಿಂದ ವಿದ್ಯಾರ್ಥಿಗಳು, ಪೋಷಕರ ವಾಸಸ್ಥಳ ಸಂಪೂರ್ಣವಾಗಿ ಬದಲಾಗುತ್ತದೆ ಹಾಗೂ ಪೋಷಕರಿಗೆ ತಮ್ಮ ಮಗು ಓದುತ್ತಿರುವ ಶಾಲೆಯೇ ತಿಳಿಯದಾಗಿರುತ್ತದೆ. ಉನ್ನತ ಶಿಕ್ಷಣಕ್ಕೆ ಹೋಗುವ ಸಂದರ್ಭದಲ್ಲಿ ವ್ಯಾಸಂಗ ಪ್ರಮಾಣ ಪತ್ರವನ್ನು ಪಡೆಯಲು ಕಷ್ಟವಾಗುತ್ತದೆ ಎಂದು ಪ್ರದೀಪ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಉಸ್ಮಾರ್ಡ್ ಸಂಘಟನೆಯ ಪದಾಧಿಕಾರಿಗಳಾದ ಕಿರಣ್ ಪ್ರಸಾದ್, ಸಿದ್ದರಾಜು, ಪಟೇಲ್ ಸಿ.ರಾಜು, ಸುನಿಲ್, ಅಲ್ತಾಫ್ ಅಹಮದ್, ಅಜ್ಗರ್, ಅತೀಕ್ , ಸುನಿತಾ, ಸಲ್ಮಾ, ಪ್ರೇಮಾನಂದ ಇದ್ದರು.

Share this article