ಸುರಕ್ಷಿತ ಜೀವನ, ಪ್ರಜ್ಞಾವಂತ ಪ್ರಜೆಯಾಗಲು ಶಿಕ್ಷಣ ಅವಶ್ಯಕ: ರವೀಂದ್ರ ಹೆಗಡೆ

KannadaprabhaNewsNetwork | Published : Jun 13, 2024 12:50 AM

ಸಾರಾಂಶ

ಮೂಲಭೂತ ಹಕ್ಕಾದ ಶಿಕ್ಷಣವು ಪ್ರತಿಯೊಬ್ಬರಿಗೂ ದೊರೆಯಬೇಕು. ಬಾಲ ಕಾರ್ಮಿಕ ಮಕ್ಕಳಿಗೆ ಶಿಕ್ಷಣದ ಅರಿವನ್ನು ಮೂಡಿಸಿ ಅವರನ್ನು ಶಾಲೆಗೆ ಹೋಗುವಂತೆ ಪ್ರೇರೇಪಿಸಬೇಕು. ಬೃಹತ್ ನಗರಗಳಲ್ಲಿ, ಹೋಟೆಲ್ ಗಳಲ್ಲಿ, ಗುಜರಿ ಅಂಗಡಿಗಳಲ್ಲಿ, ಕಾರ್ಖಾನೆಗಳಲ್ಲಿ ಮುಂತಾದ ಕಡೆಗಳಲ್ಲಿ 14 ವರ್ಷದೊಳಗಿನ ಮಕ್ಕಳನ್ನು ಬಾಲಕಾರ್ಮಿಕರಾಗಿ ಬಳಸಿಕೊಳ್ಳುತ್ತಿರುವುದನ್ನು ತಡೆಗಟ್ಟಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಸಮಾಜದಲ್ಲಿ ಉತ್ತಮ ಸ್ಥಾನಕ್ಕೇರಲು, ಸುರಕ್ಷಿತ ಜೀವನ ನಡೆಸಲು ಹಾಗೂ ಪ್ರಜ್ಞಾವಂತ ಪ್ರಜೆಯಾಗಲು ಶಿಕ್ಷಣ ಅವಶ್ಯಕ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ರವೀಂದ್ರ ಹೆಗಡೆ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವೇಶ್ವರ ನಗರದ ಬಿಲ್ಡರ್ಸ್ ಅಸೋಸಿಯೇಷನ್ ಸಂಸ್ಥೆಯಲ್ಲಿ ಬುಧವಾರ ಏರ್ಪಡಿಸಿದ್ದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಮೂಲಭೂತ ಹಕ್ಕಾದ ಶಿಕ್ಷಣವು ಪ್ರತಿಯೊಬ್ಬರಿಗೂ ದೊರೆಯಬೇಕು. ಬಾಲ ಕಾರ್ಮಿಕ ಮಕ್ಕಳಿಗೆ ಶಿಕ್ಷಣದ ಅರಿವನ್ನು ಮೂಡಿಸಿ ಅವರನ್ನು ಶಾಲೆಗೆ ಹೋಗುವಂತೆ ಪ್ರೇರೇಪಿಸಬೇಕು. ಬೃಹತ್ ನಗರಗಳಲ್ಲಿ, ಹೋಟೆಲ್ ಗಳಲ್ಲಿ, ಗುಜರಿ ಅಂಗಡಿಗಳಲ್ಲಿ, ಕಾರ್ಖಾನೆಗಳಲ್ಲಿ ಮುಂತಾದ ಕಡೆಗಳಲ್ಲಿ 14 ವರ್ಷದೊಳಗಿನ ಮಕ್ಕಳನ್ನು ಬಾಲಕಾರ್ಮಿಕರಾಗಿ ಬಳಸಿಕೊಳ್ಳುತ್ತಿರುವುದನ್ನು ತಡೆಗಟ್ಟಬೇಕು ಎಂದರು.

ಬಾಲ ಕಾರ್ಮಿಕರು ಉತ್ಪಾದಿಸುವ ಪದಾರ್ಥಗಳನ್ನು ನಾವು ತೆಗೆದುಕೊಳ್ಳದಿರುವುದರಿಂದ ಪರೋಕ್ಷವಾಗಿ ಬಾಲ ಕಾರ್ಮಿಕ ಪದ್ಧತಿ ನಿಷೇಧಿಸಬಹುದು. ಬಾಲ ಕಾರ್ಮಿಕ ಮಕ್ಕಳಿಗೆ ಸುರಕ್ಷಿತ ಆರೋಗ್ಯ ಜೀವನ ಕಟ್ಟಿಕೊಡುವ ಕೆಲಸ ಮಾಡುವಲ್ಲಿ ಪ್ರತಿಯೊಬ್ಬರೂ ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಬಾಲಕಾರ್ಮಿಕರು ಕಂಡು ಬಂದಲ್ಲಿ ಅಂತಹವರನ್ನು ಸಂಬoಧಪಟ್ಟ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದರು.

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಅಧ್ಯಕ್ಷ ಡಾ.ಕೆ.ವಿ.ರಾಜೇಂದ್ರ ಮಾತನಾಡಿ, ವಿವಿಧ ಕಡೆಗಳಲ್ಲಿ ಬಾಲ ಕಾರ್ಮಿಕರು ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ, ಬಾಲ ಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿ ಮಾಡುವಲ್ಲಿ ಎಲ್ಲರೂ ಕೈ ಜೋಡಿಸಬೇಕು. ಸಂವಿಧಾನದ ಆಶಯದಂತೆ 14 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕೊಡಿಸಬೇಕು. ಮಕ್ಕಳ ದುರ್ಬಳಕೆ ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿ 1098 ಕರೆ ಮಾಡಿ ದೂರು ನೀಡಬಹುದು ಎಂದರು.

ಬಾಲಕಾರ್ಮಿಕ ನಿರ್ಮೂಲನೆಗಾಗಿ ಪ್ರತಿಯೊಬ್ಬ ಅಧಿಕಾರಿಗಳು ಕಣ್ಣು ಮತ್ತು ಕಿವಿಗಳಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕು. ಮುಂಬರುವ ಮಕ್ಕಳ ದಿನಾಚರಣೆಯ ವೇಳೆಗೆ ಬಾಲಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿ ಮಾಡುವಂತೆ ಪಣ ತೊಡಬೇಕು ಎಂದು ಕರೆ ನೀಡಿದರು.

ಶಾಲೆಗೆ ಹೋಗದಿರುವ ಮಕ್ಕಳು ಸಮಾಜದಲ್ಲಿ ಯಾವುದೇ ರೀತಿಯ ಸಮಾಜ ಘಾತುಕ ಕೆಲಸವನ್ನಾದರೂ ಮಾಡಬಹುದು. ಆದ್ದರಿಂದ ಎಲ್ಲಾ ಮಕ್ಕಳಿಗೆ ಶಿಕ್ಷಣದ ಮಹತ್ವ ತಿಳಿಸಿ ಅವರಿಗೆ ಮೂಲಭೂತ ಸೌಕರ್ಯ ದೊರಕುವಂತೆ ಮಾಡಬೇಕು. ಇದಕ್ಕೆ ಜಿಲ್ಲಾಡಳಿತದ ಜೊತೆ ಎಲ್ಲಾ ಇಲಾಖೆಗಳು ಹಾಗೂ ವಿವಿಧ ಸಂಘ- ಸಂಸ್ಥೆಗಳು ಕೈ ಜೋಡಿಸಿ ಸಹಕರಿಸಬೇಕು ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಜಿ. ದಿನೇಶ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂವಿಧಾನದ ಆಶಯದಂತೆ ಬಾಲಕಾರ್ಮಿಕ ಪದ್ಧತಿಯನ್ನು ನಿಷೇಧಿಸಿದೆ. 14 ವರ್ಷದೊಳಗಿನ ಮಕ್ಕಳು ಅಪಾಯಕಾರಿ ಉದ್ಯೋಗದಲ್ಲಿ ತೊಡಗಿರುವುದನ್ನು ನಿಷೇಧಿಸಬೇಕು ಈ ನಿಟ್ಟಿನಲ್ಲಿ ಯಾವುದೇ ಕೆಲಸಕ್ಕೆ ಬಾಲಕಾರ್ಮಿಕರನ್ನು ನೇಮಿಸಿಕೊಳ್ಳುವ ಮೊದಲು ಮಾಲೀಕರು ಎಚ್ಚರವಹಿಸಬೇಕು. ಮಾನವನ ಜೀವನದಲ್ಲಿ ಬಾಲ್ಯಾವಸ್ಥೆ ಮತ್ತು ಶಿಕ್ಷಣ ಅತ್ಯಂತ ಪ್ರಮುಖವಾದ ಘಟ್ಟವಾಗಿದ್ದು, ಇವೆರಡೂ ಉಲ್ಲಂಘನೆಯಾಗದoತೆ ‘ಬದ್ಧತೆಯಿಂದ ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ’ ಮಾಡುವುದು ಈ ವರ್ಷದ ಘೋಷ ವಾಕ್ಯವಾಗಿದೆ ಎಂದರು.

1098 ಮಕ್ಕಳ ಸಹಾಯವಾಣಿಯ ಜೊತೆಗೆ 112 ಪೊಲೀಸ್ ಸಹಾಯವಾಣಿಗೆ ಕರೆ ಮಾಡುವುದರ ಮೂಲಕ ಬಾಲಕಾರ್ಮಿಕ ಪದ್ಧತಿಯನ್ನು ತಡೆಗಟ್ಟುವಲ್ಲಿ ಪ್ರತಿಯೊಬ್ಬರೂ ಮುಂದಾಗಬೇಕು. ಬಹುಶಃ ಪ್ರತಿಯೊಂದು ಮಕ್ಕಳಿಗೂ ಶಿಕ್ಷಣವನ್ನು ನೀಡಿದರೆ ಬಾಲಕಾರ್ಮಿಕ ಪದ್ಧತಿಯನ್ನು ನಾಶ ಮಾಡಬಹುದು ಎಂದು ಅವರು ಆಶಿಸಿದರು.

ಈ ಸಂದರ್ಭದಲ್ಲಿ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯ ಕುರಿತು ಪ್ರಮಾಣ ವಚನವನ್ನು ಬೋಧಿಸಲಾಯಿತು.

ಜಿಪಂ ಸಿಇಒ ಕೆ.ಎಂ. ಗಾಯತ್ರಿ, ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎನ್.ಟಿ. ಯೋಗೇಶ್, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ, ಕಾರ್ಮಿಕ ಇಲಾಖೆಯ ಸಹಾಯಕ ಆಯುಕ್ತೆ ನಾಜಿಯಾ ಸುಲ್ತಾನ, ಮೈಸೂರು ಉಪವಿಭಾಗದ ಕಾರ್ಮಿಕ ಅಧಿಕಾರಿ ರಾಜೇಶ್ ಕೆ.ಜಾದವ್ ಪಾಲಿಕೆಯ ಹೆಚ್ಚುವರಿ ಆಯುಕ್ತೆ ಕುಸುಮ, ಆಶಾ ಕಾರ್ಯಕರ್ತರು, ವಿದ್ಯಾರ್ಥಿಗಳು ಇದ್ದರು.

Share this article