ತಾಪಮಾನ ಕಡಿಮೆಯಾಗಲು ಗಿಡ, ಮರ ಬೆಳೆಸಲು ಮುಂದಾಗಿ

KannadaprabhaNewsNetwork | Published : Jun 13, 2024 12:50 AM

ಸಾರಾಂಶ

ಮಕ್ಕಳಿಗೆ ಪರಿಸರದ ಬಗ್ಗೆ ಜ್ಞಾನದ ಅಗತ್ಯವಿದೆ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂದು ವಿಧಾನ ಪರಿಷತ್‌ ಸದಸ್ಯ ಆರ್‌. ರಾಜೇಂದ್ರ ರಾಜಣ್ಣ ಹೇಳಿದರು.

ಕನ್ನಡಪ್ರಭ ವಾರ್ತೆ ಮಧುಗಿರಿ

ಮಕ್ಕಳಿಗೆ ಪರಿಸರದ ಬಗ್ಗೆ ಜ್ಞಾನದ ಅಗತ್ಯವಿದೆ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂದು ವಿಧಾನ ಪರಿಷತ್‌ ಸದಸ್ಯ ಆರ್‌. ರಾಜೇಂದ್ರ ರಾಜಣ್ಣ ಹೇಳಿದರು.

ಪಟ್ಟಣದ ಮಾಲಿಮರಿಯಪ್ಪ ರಂಗಮಂದಿರದಲ್ಲಿ ಅರಣ್ಯ ಇಲಾಖೆ, ತಾಲೂಕು ಆಡಳಿತ, ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪೋಷಕರು ಮತ್ತು ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ತಿಳುವಳಿಕೆ ಮೂಡಿಸಬೇಕು. ತಾಲೂಕಿನಲ್ಲಿ ಅರಣ್ಯ ಇಲಾಖೆಯಿಂದ ಪ್ರತಿ ಶಾಲೆಯಲ್ಲಿ ಕನಿಷ್ಟ 50 ಸಸಿ ಹಾಗೂ ರಸ್ತೆಯ ಎರಡು ಬದುಗಳಲ್ಲಿ ಸಸಿಗಳನ್ನು ಬೆಳೆಸುವ ನಿಟ್ಟಿನಲ್ಲಿ ಪರಿಸರ ರಕ್ಷಣೆಗೆ ಎಲ್ಲರೂ ಕೈ ಜೋಡಿಸಬೇಕು. ಸಸಿಗಳನ್ನು ನೆಟ್ಟು ಪೋಷಿಸಿದರೆ ಪ್ರಾಣಿ, ಪಕ್ಷಿಗಳ ಜೊತೆಗೆ ಮನುಕುಲಕ್ಕೂ ಅನುಕೂಲವಾಗಲಿದೆ ಎಂದರು. ಪ್ರಾಣಿ ಪ್ರಬೇಧ ಹಾಗೂ ಗಿಡ, ಮರಗಳು ಮತ್ತು ತಿಮ್ಮಲಾಪುರ, ಮೈದನಹಳ್ಳಿ ಅರಣ್ಯ ಪ್ರದೇಶಗಳ ಬಗ್ಗೆ ಸಾರ್ವಜನಿಕರಿಗೆ ಪರಿಚಯಿಸಬೇಕು. ಸಾಲು ಮರದ ತಿಮ್ಮಕ್ಕ ತಮ್ಮ ಬುದ್ದಿ ಶಕ್ತಿಯಿಂದ ಸಸಿಗಳನ್ನು ನೆಟ್ಟು ತನ್ನ ಮಕ್ಕಳಂತೆ ಪೋಷಿಸಿ ಮರಗಳನ್ನಾಗಿ ಬೆಳೆಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಹೇಳಿದರು. ಸಹಕಾರ ಸಚಿವ ಕೆ.ಎನ್‌.ರಾಜಣ್ಣ ನೇತೃತ್ವದಲ್ಲಿ ಕೋವಿಡ್‌ ಸಂದರ್ಭದಲ್ಲಿ ಉಸಿರು ನಿಂತವರ ಹೆಸರಲ್ಲಿ ಹಸಿರು ಎಂಬ ನೆನಪಿನ ಕಾರ್ಯಕ್ರಮದ ಮೂಲಕ ಪ್ರತಿ ಪಂಚಾಯಿತಿ ಮತ್ತು ತಾಲೂಕಿನಾದ್ಯಂತ ಆರು ಸಾವಿರ ಗಿಡಗಳನ್ನು ನೆಡಸಲಾಯಿತು. ಕೇರಳದ ಒಂದು ಭಾಗದಲ್ಲಿ ಸಿಂಗಾಪುರದ ಅಧಿಕಾರಿಗಳು ಭಾರತಕ್ಕೆ ಬಂದು ಮರ, ಗಿಡಗಳನ್ನು ಬೆಳಸುತ್ತಿದ್ದಾರೆ. ಇಲ್ಲಿ ಮರ, ಗಿಡಗಳನ್ನು ಬೆಲೆಸುವುದರಿಂದ ಮೋಡಗಳು ಆವೃತ್ತರಾಗುವ ಮೂಲಕ ಸಿಂಗಾಪುರದಲ್ಲಿ ಹೆಚ್ಚು ಮಳೆ ಬೀಳುತ್ತಿದೆ. ಆದ್ದರಿಂದ ಪ್ರತಿಯಾಬ್ಬರೂ ಮರ, ಗಿಡ ಬೆಳಸಲು ಮುಂದಾಗಿ ಎಂದರು.

ವಿದ್ಯಾರ್ಥಿಗಳು ಶಿಕ್ಷಣ ಕಲಿಕೆಗೆ ಮೊದಲ ಆದ್ಯತೆ ನೀಡಬೇಕು. ದುಶ್ಚಟಗಳಿಗೆ ಬಲಿಯಾಗದೇ ಪ್ರತಿಯೊಬ್ಬರು ಒಂದೊಂದು ಸಸಿ ನಟ್ಟು ಪೋಷಿಸಬೇಖು. ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶ ತೃಪ್ತಿಕರವಾಗಿಲ್ಲ, ಆದ್ದರಿಂದ ಮುಂದಿನ ಫಲಿತಾಂಶದ ಬಗ್ಗೆ ಎಲ್ಲ ಶಿಕ್ಷಕರು ಎಚ್ಚರ ವಹಿಸುವಂತೆ ಸೂಚಿಸಿದರು.

ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮಾ ಮಾತನಾಡಿ, 1972ರಲ್ಲಿ ಯುನೈಟೆಡ್‌ ನೇಷನ್‌ನ ಸ್ಟಾಕ್ ಹೋಂನಲ್ಲಿ ಮೊದಲ ಅಂತಾರಾಷ್ಟ್ರೀಯ ಮಟ್ಟದ ಸಮಾವೇಶ ನಡೆದಿದ್ದು, ಈ ಸಮಾವೇಶಕ್ಕೆ ಅಂದಿನ ಪ್ರಧಾನಿ ಇಂದಿರಾಗಾಂಧಿ ಭಾರತವನ್ನು ಪ್ರತಿನಿಧಿಸಿದ್ದರು. ಆ ಸಮಾವೇಶದಲ್ಲಿ ಪರಿಸರ ಸಂರಕ್ಷಣೆಗೆ ಎಲ್ಲ ದೇಶಗಳು ಮುಂದಾಗಬೇಕು ಎಂದು ಕರೆ ನೀಡಿದ್ದರು. ಭಾರತದಲ್ಲಿ ಪರಿಸರ ಹಾಗೂ ವನ್ಯ ಪ್ರಾಣಿಗಳ ಸಂರಕ್ಷಣೆಗಾಗಿ 1972ರ ವನ್ಯ ಜೀವಿಗಳ ರಕ್ಷಣಾ ಕಾಯ್ದೆ ಮತ್ತು ನಿಯಮಗಳ ಅನುಷ್ಠಾನ ಮಾಡಲಾಯಿತು ಎಂದರು.

ಸುತ್ತಮುತ್ತಲಿನ ವಾತಾವರಣ ಸ್ವಚ್ಚವಾಗಿಟ್ಟುಕೊಂಡು ಪರಿಸರದ ಸಂರಕ್ಷಣೆಗೆ ಎಲ್ಲರೂ ಮುಂದಾಗಬೇಕು. ಭಾರತದಲ್ಲಿ ಇಂದು ಶೇ. 33 ಅರಣ್ಯ ಹೊಂದಿದ್ದು, ಕರ್ನಾಟಕದಲ್ಲಿ ಶೇ.22 ಹಾಗೂ ಜಿಲ್ಲೆಯ ಶೇ. 12ರಷ್ಟು ಹಸಿರು ಹೊದಿಕೆ ಹೊಂದಿದೆ. ಕೋವಿಡ್‌ ವೇಳೆ ಆಮ್ಲಜನಕದ ಕೊರತೆಯುಂಟಾಗಿ ಇದನ್ನು ಹೋಗಲಾಡಿಸಲು ಹೆಚ್ಚು ಸಸಿಗಳನ್ನು ನೆಟ್ಟು ಅವುಗಳನ್ನು ಮರಗಳನ್ನಾಗಿ ಬೆಳಸಬೇಕು ಎಂದು ಸಲಹೆ ನೀಡಿದರು.

ಇತ್ತಿಚೆಗೆ ನಮ್ಮ ಜಿಲ್ಲೆಯಲ್ಲಿ ಹೊಸ ಪ್ರಬೇಧಗಳ ಪ್ರಾಣಿ ಸಂಕುಲಗಳು ಕಂಡು ಬರುತ್ತಿವೆ. ಅವುಗಳ ಪರಿಚಯ ಮಾಡಲು ಇಲಾಖೆ ಮುಂದಾಗಿದೆ. ಮುಂಬರುವ ದಿನಗಳಲ್ಲಿ ಇಲಾಖೆಯಿಂದ ಚಿಣ್ಣರ ವನ ದರ್ಶನ ಆಯೋಜಿಸಲಾಗುತ್ತಿದ್ದು, ಸರ್ಕಾರಿ ಶಾಲೆಯ 50 ಮಕ್ಕಳು ಪ್ರವಾಸದಲ್ಲಿ ಭಾಗವಹಿಸಿ ಪ್ರಾಣಿ ಪಕ್ಷಿ ಸಸಿಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು.

ಎಸಿ ಗೋಟೂರು ಶಿವಪ್ಪ ಮಾತನಾಡಿ, ಈಗಿರುವ ಅರಣ್ಯ ಪ್ರದೇಶಗಳ ಸಂರಕ್ಷಣೆಗೆ ನಾವುಗಳು ಮುಂದಾಗಿ ಹೆಚ್ಚು ಮರಗಿಡಗಳನ್ನು ಬೆಳಸಬೇಕು ಎಂದು ಹೇಳಿದರು.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಪ್ರಬಂಧ ,ಆಶುಭಾಷಣ ಸ್ಪರ್ಧೆ, ಚಿತ್ರಕಲೆ ವಿಜೇತರಾದ ವಿವಿಧ ಶಾಲೆಯ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಸಹಾಯಕ ಸಂರಕ್ಷಣಾಧಿಕಾರಿ ಮಲ್ಲಿಕಾರ್ಜುನಪ್ಪ, ವಲಯ ಅರಣ್ಯಾಧಿಕಾರಿ ಎಂ.ಎಚ್‌,ಸುರೇಶ್‌, ಉಪವಲಯ ಅರಣ್ಯಾಧಿಕಾರಿ ಮುತ್ತುರಾಜ್‌, ತಹಸೀಲ್ದಾರ್‌ ಸಿಬ್ಗತ್ತವುಲ್ಲಾ, ಬಿಇಒ ಕೆ.ಎನ್‌.ಹನುಮಂತರಾಯಪ್ಪ, ಅಧಿಕಾರಿಗಳಾದ ಸಿದ್ದನಗೌಡ, ಶ್ರೀನಿವಾಸ್‌, ಮಧುಸೂದನ್‌, ಟಿ.ಲಕ್ಷ್ಮೀನರಸಯ್ಯ, ಮುರುಳಿ, ಪುರಸಭೆ ಮುಖ್ಯಾಧಿಕಾರಿ ಸುರೇಶ್, ಪುರಸಭೆ ಮಾಜಿ ಅಧ್ಯಕ್ಷ ಎನ್‌,ಗಂಗಣ್ಣ, ಎಂ.ವಿ.ಗೋವಿಂದರಾಜು, ಎಂ.ಕೆ.ನಂಜುಂಡರಾಜು, ಕೆಪಿಸಿಸಿ ಮೆಂಬರ್‌ ಸಿದ್ದಾಪುರ ರಂಗಶ್ಯಾಮಿ, ಸದಸ್ಯರಾದ ಸುಜಾತ, ನಾಗಲತಾ, ಲಾಲಪೇಟೆ ಮಂಜುನಾಥ್‌, ಮಂಜುನಾಥ ಆಚಾರ್‌, ಜಿಪಂ ಮಾಜಿ ಸದಸ್ಯ ಎಂ.ಎಚ್‌. ನಾರಾಯಣಪ್ಪ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಬಿ.ನಾಗೇಶ್‌ಬಾಬು, ಸಿಡಿಪಿಒ ಕಮಲಮ್ಮ, ಹಿರಿಯ ಸಾಹಿತಿ ಪ್ರೊ.ಮ.ಲ.ನ.ಮೂರ್ತಿ, ಮುಖಂಡರಾದ ಎಂ.ಎಸ್‌.ಮಲ್ಲಿಕಾರ್ಜುನಯ್ಯ ಇದ್ದರು.

Share this article