ಹೊಳಲ್ಕೆರೆ ಕನ್ನಡಪ್ರಭ ವಾರ್ತೆ
ಸರ್ಕಾರಿ ಶಾಲೆಗೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ. ಮಕ್ಕಳ ಸರ್ವತೋಮುಖ ಏಳ್ಗೆಗೆ ಶಿಕ್ಷಣ ಅತಿ ಅವಶ್ಯಕ ಎಂದು ಶಾಸಕ ಡಾ.ಎಂ. ಚಂದ್ರಪ್ಪ ಹೇಳಿದರು.ಪಟ್ಟಣದ ಸಂವಿಧಾನ ಸೌಧದಲ್ಲಿ ಎಂ.ಎಂ.ಸರ್ಕಾರಿ ಪ್ರೌಢಶಾಲೆ ಹಾಗೂ ಎನ್.ಇ.ಎಸ್ ಪ್ರಾಥಮಿಕ ಶಾಲೆಗಳು ಆಯೋಜಿಸಿದ್ದ, ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸರ್ಕಾರಿ ಶಾಲೆಗಳು ಉತ್ತಮ ಕಟ್ಟಡ ಶೌಚಾಲಯ ಪ್ರಯೋಗಾಲಯ ಮೂಲಭೂತ ಸೌಕರ್ಯಗಳನ್ನು ಹೊಂದಿರಬೇಕು. ಮಕ್ಕಳ ಶೈಕ್ಷಣಿಕ ಪ್ರಗತಿಗೆ ಇವೆಲ್ಲ ಅಗತ್ಯ. ಕಳೆದ ವರ್ಷ ಈ ಸರ್ಕಾರಿ ಶಾಲೆಗೆ ಎರಡು ಬಸ್‌ಗಳನ್ನು ನೀಡಲಾಗಿದೆ. ಸುಮಾರು 20 ಹಳ್ಳಿಗಳಿಂದ ಬಸ್ ಮೂಲಕ ಶಾಲೆಗೆ ಬರುತ್ತಿದ್ದಾರೆ, ಇದರಿಂದ ಎಂ.ಎಂ.ಹಾಗೂ ಎನ್ ಇಎಸ್ ಸರ್ಕಾರಿ ಶಾಲೆಗಳಲ್ಲಿ ಒಂದು ಸಾವಿರ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಈ ಶಾಲೆ ತಾಲೂಕಿನಲ್ಲೇ ಮಾದರಿ ಶಾಲೆಯಾಗಿದೆ. ವಿದ್ಯಾರ್ಥಿಗಳ ಸಂಖೈ ಹೆಚ್ಚಾಗುವ ಸಾಧ್ಯತೆ ಇದ್ದು, ಮತ್ತೆ 2 ಬಸ್‌ಗಳನ್ನು ನೀಡಲಾಗುವುದು ಎಂದರು.
ಅದಕ್ಕಾಗಿ ಸರ್ಕಾರಿ ಎಂಎಂ ಹಾಗೂ ಎನ್ಇಎಸ್ ಶಾಲೆಗೆ ಸುಸಜ್ಜಿತ ಹೈಟಿಕ್ ಬಹುಮಹಡಿ ಕಟ್ಟಡವನ್ನು ಕಾಲೇಜು ಇರುವ ಆವರಣ ದಲ್ಲಿಯೇ ಕಟ್ಟಿಸಲಾಗಿದೆ. ಇಲ್ಲಿ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸ ಮಾಡಲು ಪದವಿ ಕಾಲೇಜು ವೃತ್ತಿಪರ ಕೌಶಲ ಪಡೆಯಲು ಕಾಲೇಜು ಸಹ ನಿರ್ಮಾಣಗೊಂಡಿದ್ದು ಪಠ್ಯೇತರ ಚಟುವಟಿಕೆ ಗಳಿಗೆ ಆಟಾಂಗಣ, ಈಜುಕೊಳ ನಿರ್ಮಾಣ ಮಾಡಲಾಗುತ್ತಿದೆ. ಇಂತಹ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಶಾಲಾ ಸಂಕೀರ್ಣ ರಾಜ್ಯ ದಲ್ಲಿಯೇ ಮೊದಲನೆಯದಾಗಿದೆ. ಎಲ್ಲ ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಏನೇ ತೊಂದರೆ ಇದ್ದರೂ ನನ್ನ ಬಳಿ ಹೇಳಿ ಪರಿಹಾರ ಮಾಡುತ್ತೇನೆ. ಅನಗತ್ಯವಾಗಿ ಖಾಸಗಿ ಶಾಲೆಗಳಿಗೆ ಹಣ ಖರ್ಚು ಮಾಡಿ ನಿಮ್ಮ ಮಕ್ಕಳನ್ನು ಕಳಿಸದೆ ಸರ್ಕಾರಿ ಶಾಲೆಗಳು ಮಾದರಿ ಶಾಲೆಗಳಾಗಲು ನಾವೆಲ್ಲರು ಸಹಕಾರ ಮಾಡೋಣ ಎಂದು ಹೇಳಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿ ಕಾರ್ಯಕ್ರಮಗಳು ನಡೆದವು. ಪುರಸಭೆ ಸದಸ್ಯ ವಿಜಯಸಿಂಹ ಖ್ರಾಟೋತ್ ಮಾತನಾಡಿದರು. ಪುರಸಭೆ ಸದಸ್ಯರಾದ ಪಿ.ಹೆಚ್ ಮುರುಗೇಶ್, ಆರ್.ಎ ಆಶೋಕ್ , ಬಿ.ಇ ಓ ಶ್ರೀನಿವಾಸ್, ಇಸಿಒ ಕೋಟ್ರೇಶ್ , ಹಿರಿಯ ವಿದ್ಯಾರ್ಥಿ ಸಂಘದ ಗೀರಿಶ್, ಎಸ್‌ಡಿಎಂಸಿ ಅಧ್ಯಕ್ಷ ಶಂಕರಪ್ಪ, ಮುಖ್ಯ ಶಿಕ್ಷಕ ಜಿ.ಪ್ರಕಾಶ್, ಸುಕನ್ಯಾ, ಷೇರ್ ಅಲಿ, ಮಾಲತೇಶ್, ಎಸ್ ಎಂ.ಮಾರುತಿ , ಎಲ್.ಬಸವರಾಜ್, ಕೆ.ಎಂ.ಮೋಹನ್ ಮತ್ತಿತರರು ಉಪಸ್ಥಿತರಿದ್ದರು .