ಕನ್ನಡಪ್ರಭ ವಾರ್ತೆ ಮದ್ದೂರು
ಶಿಕ್ಷಣವು ಮಕ್ಕಳಿಗೆ ಜ್ಞಾನ ನೀಡುವ ಜೊತೆಗೆ ಇಂದಿನ ಸ್ಪರ್ಧಾತ್ಮಕ ಜಗತ್ತನ್ನು ಎದುರಿಸಲು ಅಗತ್ಯವಾದ ಜೀವನ ಕೌಶಲ್ಯ, ಸಾಮಾಜಿಕ ಅರಿವು ಮತ್ತು ಆತ್ಮವಿಶ್ವಾಸವನ್ನು ತುಂಬುತ್ತದೆ ಎಂದು ಎಇಟಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕ ಧರ್ಮೇಶ್ ಹೇಳಿದರು.ಪಟ್ಟಣದ ಎಚ್.ಕೆ.ವೀರಣ್ಣಗೌಡ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ, ಕನ್ನಡ ಸಂಘ ಉದ್ಘಾಟನೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಪುಸ್ತಕಗಳ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬ ಮಕ್ಕಳು ಯಾವುದೇ ತಾರತಮ್ಯವಿಲ್ಲದೆ ಗುಣಮಟ್ಟದ ಶಿಕ್ಷಣವನ್ನು ಪಡೆದುಕೊಳ್ಳುವ ಮೂಲಕ ತಮ್ಮ ಭವಿಷ್ಯದ ಜೀವನವನ್ನು ಯಶಸ್ಸುಗಳಿಸಿ ನಾಯಕತ್ವ ಗುಣ ಹಾಗೂ ಸಾಮಾಜಿಕ ಜವಾಬ್ದಾರಿ ಬೆಳೆಸಿಕೊಂಡಾಗ ಮಾತ್ರ ಶಿಕ್ಷಣದ ಉದ್ದೇಶ ಈಡೇರಿದಂತೆ ಎಂದರು.ಇತ್ತೀಚಿನ ದಿನಗಳಲ್ಲಿ ಮಕ್ಕಳು ಶಿಕ್ಷಣದ ಮಹತ್ವದ ಬಗ್ಗೆ ಋಣಾತ್ಮಕ ಭಾವನೆ ಬೆಳೆಸಿಕೊಳ್ಳುತ್ತಿರುವುದು ವಿಷಾದನೀಯ. ಶಿಕ್ಷಕರು ಹಾಗೂ ಪೋಷಕರು ಶಿಕ್ಷಣ ಸಂಸ್ಥೆಗಳೊಂದಿಗೆ ಕೈಜೋಡಿಸುವ ಮೂಲಕ ವೃತ್ತಿ ಆಧಾರಿತ ಶಿಕ್ಷಣದ ಜೊತೆಗೆ ಮೌಲ್ಯ ಆಧಾರಿತ ಶಿಕ್ಷಣವನ್ನು ಪಡೆದು ಒಳ್ಳೆಯ ಸಂಸ್ಕೃತಿವಂತರಾಗಿ ಸಮಾಜದ ಉತ್ತಮ ಪ್ರಜೆಗಳಾಗಿ ರೂಪುಕೊಳ್ಳಲು ಸಾಧ್ಯ ಎಂದರು.
ಪ್ರಸ್ತುತ ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಯುಗದಲ್ಲಿ ಮಕ್ಕಳು ಸಾಮಾಜಿಕ ಜಾಲತಾಣಗಳು ಮತ್ತು ಮೊಬೈಲ್ ಗಳಲ್ಲಿ ಹೆಚ್ಚು ಸಮಯ ಕಳೆಯುತ್ತಿರುವುದು ಮಕ್ಕಳ ಬೌದ್ಧಿಕ ಹಾಗೂ ಮಾನಸಿಕವಾಗಿ ದುಷ್ಪರಿಣಾಮ ಬೀರುತ್ತಿದೆ. ಶಿಕ್ಷಕರಷ್ಟೇ ಅಲ್ಲದೆ ಪೋಷಕರು ಸಹ ಮಕ್ಕಳ ಬಗ್ಗೆ ಗಮನಹರಿಸಬೇಕಾದ ಅನಿವಾರ್ಯತೆ ಇದೆ ಎಂದರು.ಪೋಷಕರು ತಮ್ಮ ಒತ್ತಡದ ಜೀವನ ಶೈಲಿಯಿಂದಾಗಿ ಮಕ್ಕಳಿಂದ ದೂರವಾಗುವುದರಿಂದ ಮಕ್ಕಳು ಸಾಮಾಜಿಕ ಜಾಲತಾಣಗಳ ದಾಸರಾಗುವ ಜೊತೆಗೆ ಮಾನಸಿಕವಾಗಿಯೂ ಖಿನ್ನತೆಗೆ ಒಳಗಾಗಿ ದುಶ್ಚಟಗಳಿಗೆ ಬಲಿಯಾಗುವುದಲ್ಲದೆ ಅಪರಾಧಿಯಾಗಿ ರೂಪುಗೊಳ್ಳುತ್ತಿದ್ದಾರೆ. ಆದ್ದರಿಂದ ತಂದೆ ತಾಯಿಗಳು ಮಕ್ಕಳಿಗೆ ಪ್ರೀತಿ ವಾತ್ಸಲ್ಯ ತೋರುವ ಮೂಲಕ ಸಮಾಜದಲ್ಲಿ ಒಳ್ಳೆಯ ಮನುಷ್ಯರಾಗಿ ಬೆಳೆಯುವಂತೆ ಮಾಡಬೇಕಾಗಿದೆ ಎಂದರು.
ಎಂ.ಎಚ್.ಚನ್ನೇಗೌಡ ವಿದ್ಯಾ ನಿಲಯದ ಗೌರವಾಧ್ಯಕ್ಷ ಕೆ.ಟಿ.ಚಂದು, ನೀಟ್ ಮತ್ತು ಸಿಇಟಿ ಸ್ಪರ್ಧಾ ಪರೀಕ್ಷೆಯ ಪುಸ್ತಕಗಳನ್ನು ಬಿಡುಗಡೆಗೊಳಿಸಿದರು. ಕಾರ್ಯದರ್ಶಿ ಸಿ.ಅಪೂರ್ವ ಚಂದ್ರ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಡಿ.ಪಿ.ಸ್ವಾಮಿ, ತಾಲೂಕು ಅಧ್ಯಕ್ಷ ಸುನೀಲ್ ಕುಮಾರ್, ಶಾಂತಿ ಪದವಿ ಪೂರ್ವ ಕಾಲೇಜು, ಪ್ರಾಂಶುಪಾಲ ಶಿವಪ್ಪ, ನೀಟ್ ಪರೀಕ್ಷಿಯ ಸಂಪನ್ಮೂಲ ವ್ಯಕ್ತಿಗಳಾದ ವಿಶ್ವನಾಥ್, ರವಿಕಿರಣ್, ಮಂಜುನಾಥ್, ಪ್ರಾಂಶುಪಾಲರಾದ ಯು.ಎಸ್.ಶಿವಕುಮಾರ್, ಜಿ.ಸುರೇಂದ್ರ, ಕಿರಣ್ ನಂದಿನಿ ಸೇರಿದಂತೆ ಇತರರು ಹಾಜರಿದ್ದರು.