ಮುಖ್ಯವಾಹಿನಿಗೆ ಬರಲು ಶಿಕ್ಷಣದ ಅಗತ್ಯವಿದೆ

KannadaprabhaNewsNetwork |  
Published : May 11, 2026, 01:30 AM IST
 | Kannada Prabha

ಸಾರಾಂಶ

ಸಮಾಜದ ಮುಖ್ಯವಾಹಿನಿಗೆ ಬರಲು ಶಿಕ್ಷಣದ ಅಗತ್ಯವಿದೆ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಹೇಳಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಸಮಾಜದ ಮುಖ್ಯವಾಹಿನಿಗೆ ಬರಲು ಶಿಕ್ಷಣದ ಅಗತ್ಯವಿದೆ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಹೇಳಿದರು.

ನಗರದ ಕನ್ನಡಭವನದಲ್ಲಿ ಭಾವಸಾರ ಬ್ರಿಗೇಡ್ ಆಯೋಜಿಸಿದ್ದ ಮಾತಾ ಹಿಂಗುಲಾಂಬಿಕ ದೇವಿ ಜಯಂತ್ಯುತ್ಸವ ಹಾಗೂ ಭಾವಸಾರ ಬ್ರಿಗೇಡ್‌ನ ಎಂಟನೇ ವರ್ಷದ ವಾರ್ಷಿಕೋತ್ಸವ ಕಾರ‍್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಹಿಂದುಳಿದ ಸಮುದಾಯಗಳು ಸಮಾಜದಲ್ಲಿ ಸ್ವಾಭಿಮಾನದ ಬದುಕನ್ನು ಕಂಡುಕೊಳ್ಳುತ್ತಿವೆ. ಕೇವಲ ಜನಸಂಖ್ಯೆಯ ಆಧಾರದ ಮೇಲೆ ಸಮಾಜದಲ್ಲಿ ಗೌರವ ಸಿಗುವುದಿಲ್ಲ, ಬದಲಾಗಿ ನಮ್ಮ ನಡವಳಿಕೆಯ ಆಧಾರದ ಮೇಲೆ ಸಮಾಜ ನಮಗೆ ಗೌರವ ನೀಡುತ್ತದೆ. ನಾವು ಯಾರಿಗೂ ಕಡಿಮೆ ಇಲ್ಲ ಎಂಬ ಭಾವನೆ, ಆತ್ಮವಿಶ್ವಾಸ ಪ್ರತಿಯೊಬ್ಬರಲ್ಲೂ ಬರಬೇಕು. ಅದಕ್ಕೆ ಶಿಕ್ಷಣದ ಅವಶ್ಯಕತೆಯಿದೆ ಎಂದರು.

ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಕಳಕಳಿ ವ್ಯಕ್ತಪಡಿಸಿದ ಸಚಿವರು ದೇವರು ಶ್ರೀಮಂತ-ಬಡವ ಎನ್ನದೆ ಎಲ್ಲ ಮಕ್ಕಳಿಗೂ ಸಮಾನವಾದ ಬುದ್ಧಿಶಕ್ತಿ ನೀಡಿರುತ್ತಾನೆ. ಅದನ್ನು ಸರಿಯಾಗಿ ಬಳಸಿಕೊಂಡು ಉನ್ನತ ಸ್ಥಾನಕ್ಕೇರಬೇಕು. ಮಕ್ಕಳು ಶಿಕ್ಷಣದಿಂದ ವಂಚಿತರಾದರೆ ಅವರ ಭವಿಷ್ಯ ಅಂಧಕಾರದಲ್ಲಿ ಇರುತ್ತದೆ. ಸಾಮಾನ್ಯವಾಗಿ ಬಡತನದಲ್ಲಿ ಹುಟ್ಟಿದ ಮಕ್ಕಳೇ ಹೆಚ್ಚು ಪರಿಶ್ರಮಪಟ್ಟು ವಿದ್ಯಾವಂತರಾಗುತ್ತಾರೆ ಅವರಿಗೆ ಸರಿಯಾದ ಮರ‍್ಗರ‍್ಶನ ಬೇಕು ಎಂದರು. ಇತಿಹಾಸ ತಿಳಿದವರು ಮಾತ್ರ ಇತಿಹಾಸ ಸೃಷ್ಟಿಸಲು ಸಾಧ್ಯ. ನಮ್ಮ ಪೂರ್ವಜರ ತತ್ವ, ಸಿದ್ಧಾಂತ ಮತ್ತು ಉಪದೇಶಗಳನ್ನು ಹೊಸ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು ಸಮಾಜದ ಸೇವೆ ಮಾಡಲು ಮತ್ತು ಸಂಘಟನೆಯನ್ನು ಬಲಪಡಿಸಲು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರಬೇಕು. ಯುವಶಕ್ತಿಯಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂದು ಕರೆ ನೀಡಿದರು.

ಶಾಸಕ ಜ್ಯೋತಿ ಗಣೇಶ್ ಮಾತನಾಡಿ

ಯಾವುದೇ ಸಮುದಾಯವಾಗಲಿ, ಸಂಘಟನೆಯಾಗಲಿ ಅಭಿವೃದ್ಧಿ ಹೊಂದಬೇಕು ಎಂದರೆ ಅದಕ್ಕೆ ಎಲ್ಲರ ಪರಿಶ್ರಮ ಅಗತ್ಯ. ಭಾವಸಾರ ಕ್ಷತ್ರಿಯ ಸಮಾಜದ ಅನೇಕರು ಸಮಾಜದ ಅಭಿವೃದ್ಧಿಗೆ ಒಂದು ಕಡೆ ಸೇರಿ ಇಂತಹ ಕರ‍್ಯಕ್ರಮಗಳನ್ನು ಮಾಡುತ್ತಿರುವುದು ಶ್ಲಾಘನೀಯವಾಗಿದ್ದು ಸಮಾಜದ ಅಭಿವೃದ್ಧಿಗೆ ನಾನು ಇವರ ಜೊತೆಯಲ್ಲಿರುತ್ತೇನೆ ಎಂದರು. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಬ್ರಿಗೇಡ್ ವತಿಯಿಂದ ಸನ್ಮಾನಿಸಲಾಯಿತು.

ಎಐಬಿಕೆ ಮಹಾಸಭಾದ ರಾಜ್ಯ ಹಿರಿಯ ಉಪಾಧ್ಯಕ್ಷ ಗುರುಪ್ರಸಾದ್ ಪಿಸ್ಸೆ, ಸತ್ಯನಾರಾಯಣ ರಾವ್ ಅಂಬರ್‌ಕರ್, ವಲಯ ಅಧ್ಯಕ್ಷ ಸತ್ಯನಾರಾಯಣ ಅಷ್ಟಕರ್, ವಿವಿಧ ತಾಲೂಕು ಘಟಕದ ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷರು, ಮಹಿಳಾ ಮಂಡಳಿ, ಭಜನಾ ಮಂಡಳಿ, ಯುವಕ ಮಂಡಳಿಯ ಪದಾಧಿಕಾರಿಗಳು, ಭಾವಸಾರ ಬ್ರಿಗೇಡ್‌ನ ಪದಾಧಿಕಾರಿಗಳು, ಸಮಾಜದ ಮುಖಂಡರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಇಂದಿನ ಅಗತ್ಯ: ಡಾ.ಪ್ರಭಾಕರ ರಾವ್
ಮೇ 23ರಂದು ಬಗರ್‌ ಹುಕುಂ ಸಂತ್ರಸ್ತರ ಸಮಾವೇಶ: ವೈ.ಎಸ್.ವಿ.ದತ್ತ