ದುಃಖದ ಮಡುವಿನಲ್ಲಿ ಮುಳುಗಿದ ಹಿರಿಯೂರು

KannadaprabhaNewsNetwork |  
Published : May 11, 2026, 01:15 AM IST
ಚಿತ್ರದುರ್ಗ ಮೂರನೇ ಪುಟದ ಲೀಡ್  | Kannada Prabha

ಸಾರಾಂಶ

ಹಿರಿಯೂರು ನಗರದ ನೆಹರೂ ಮೈದಾನದಲ್ಲಿ ಸಚಿವ ಡಿ.ಸುಧಾಕರ್ ರವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಪಡೆದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ಅನಾರೋಗ್ಯದಿಂದ ಭಾನುವಾರ ಬೆಳಗ್ಗೆ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ನಿಧನರಾದ ಸಚಿವ ಡಿ.ಸುಧಾಕರ್ ಅವರ ಪಾರ್ಥಿವ ಶರೀರವ ಹಿರಿಯೂರಿಗೆ ತಂದು ನೆಹರೂ ಮೈದಾನದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಮಧ್ಯಾಹ್ನ 2 ಗಂಟೆಗೆ ಬೆಂಗಳೂರಿನಿಂದ ಹಿರಿಯೂರು ನಗರಕ್ಕೆ ಆಗಮಿಸಿದ ಸಚಿವ ಡಿ.ಸುಧಾಕರ್ ಮೃತದೇಹವನ್ನು ನಗರದ ರಂಜಿತಾ ಹೋಟೆಲ್ ಮುಂಭಾಗದಿಂದ ನೆಹರೂ ಮೈದಾನದವರೆಗೆ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಮೆರವಣಿಗೆಯಲ್ಲಿ ಕರೆತರಲಾಯಿತು.

ದಾರಿಯುದ್ಧಕ್ಕೂ ಸಚಿವ ಡಿ.ಸುಧಾಕರ್ ಅಭಿಮಾನಿಗಳು, ಕಾರ್ಯಕರ್ತರ ದೊಡ್ಡ ದಂಡೇ ಮೃತದೇಹದ ಜೊತೆಗೆ ಸಾಗಿತು. ಆನಂತರ ನೆಹರೂ ಮೈದಾನದಲ್ಲಿ ತಾಲೂಕು ಆಡಳಿತದ ವತಿಯಿಂದ ಸಿದ್ದಪಡಿಸಲಾಗಿದ್ದ ಸ್ಥಳದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಬೆಳಗ್ಗೆ 11 ಗಂಟೆಯಿಂದಲೇ ಮಹಿಳೆಯರು, ಮಕ್ಕಳು, ವೃದ್ಧರು ಸೇರಿದಂತೆ ಸಾವಿರಾರು ಜನರು ನೆಹರೂ ಮೈದಾನದಲ್ಲಿ ಕಾಯುತ್ತಿದ್ದರು.

ಸಚಿವರ ಮೃತದೇಹದ ವಾಹನ ಆವರಣದೊಳಕ್ಕೆ ಬರುತ್ತಿದ್ದಂತೆ ಅವರ ಅಭಿಮಾನಿಗಳು, ಕಾರ್ಯಕರ್ತರು ಜೋರಾಗಿ ಅಳತೊಡಗಿದರು. ಮಹಿಳಾ ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಎರಡು ಗಂಟೆಗೆ ಮೃತ ದೇಹ ನೆಹರೂ ಮೈದಾನಕ್ಕೆ ಬಂದಾಗಿನಿಂದ ಸಂಜೆ ಐದು ಗಂಟೆಯವರೆಗೂ ಸಚಿವರ ಪಾರ್ಥಿವ ಶರೀರವನ್ನು ನೋಡಲು ಜನರ ನೂಕು ನುಗ್ಗಲು ಇದ್ದೇ ಇತ್ತು. ಬಡವರು, ಅಲ್ಪ ಸಂಖ್ಯಾತರ ಕಣ್ಮಣಿಯಾಗಿದ್ದ ನಮ್ಮ ಶಾಸಕರು ಹೋದ ಮೇಲೆ ನಮಗಿನ್ಯಾರು ದಿಕ್ಕು ಎಂದು ರೋಧಿಸುತ್ತಿದ್ದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಂಸದ ಗೋವಿಂದ ಕಾರಜೋಳ, ಶಾಸಕರಾದ ರಘುಮೂರ್ತಿ, ಬಿ.ಜಿ.ಗೋವಿಂದಪ್ಪ, ವೀರೇಂದ್ರ ಪಪ್ಪಿ, ಮಾಜಿ ಶಾಸಕ ತಿಪ್ಪಾರೆಡ್ಡಿ, ಜಿಲ್ಲಾಧಿಕಾರಿ ವೆಂಕಟೇಶ್, ಸಿಇಒ ಆಕಾಶ್, ಎಡಿಸಿ ಕುಮಾರಸ್ವಾಮಿ, ಎಂಎಲ್‌ಸಿ ಡಿ.ಟಿ.ಶ್ರೀನಿವಾಸ್, ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಎಸ್.ಪಿ ರಂಜಿತ್ ಕುಮಾರ್ ಬಂಡಾರು, ಮಾಜಿ ಸಚಿವ ಎಚ್.ಏಕಾಂತಯ್ಯ, ಜೆಡಿಎಸ್ ಮುಖಂಡ ಎಂ.ರವಿಂದ್ರಪ್ಪ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಎನ್.ಆರ್.ಲಕ್ಷ್ಮೀಕಾಂತ್, ಕರ್ನಾಟಕ ರಾಜ್ಯ ಕಾಡುಗೊಲ್ಲರ ಸಂಘದ ರಾಜ್ಯಾಧ್ಯಕ್ಷ ರಾಜಣ್ಣ, ಮುಖಂಡರಾದ ಜಯರಾಮಯ್ಯ, ಬಿ.ಸೋಮಶೇಖರ್ ಸೇರಿದಂತೆ ಸಾವಿರಾರು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮುಖಂಡರು ಕಾರ್ಯಕರ್ತರು, ಸಚಿವರ ಅಭಿಮಾನಿಗಳು ಪಾರ್ಥಿವ ಶರೀರದ ದರ್ಶನ ಪಡೆದರು.

ಅಂತಿಮ ದರ್ಶನ ಪಡೆದ ನಂತರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ನನ್ನ ಆತ್ಮೀಯ ಸ್ನೇಹಿತ ಇಷ್ಟು ಚಿಕ್ಕವಯಸ್ಸಿನಲ್ಲೇ ಕೊನೆಯುಸಿರೆಳೆಯುವ ನಿರೀಕ್ಷೆ ಮಾಡಿರಲಿಲ್ಲ. ಆಸ್ಪತ್ರೆ ಸೇರುವ ಎರಡು ದಿನಗಳ ಹಿಂದೆ ಭೇಟಿಯಾಗಿದ್ರು. ಬಹಳ ಚಿಕ್ಕ ವಯಸ್ಸಿನಿಂದ ನಾವು ಇಬ್ಬರು ಸ್ನೇಹಿತರು. ಅವರ ಚಿಕ್ಕಪ್ಪ ಮುಖ್ಯ ಸಚೇತಕ ಆಗಿದ್ರು. ಆಗಿಂದ ಅವರನ್ನು ಬಲ್ಲೆ. ಅವರಿಗೆ ರೈತರ ಬಗ್ಗೆ ವಿಶೇಷ ಕಾಳಜಿ ಇತ್ತು. ಭದ್ರಾ ಮೇಲ್ದಂಡೆ ಯೋಜನೆ ಟ್ರಯಲ್ ರನ್‌ ಮಾಡಿದ್ರು. ಅದರ ಉದ್ಘಾಟನೆ ಮಾಡುವ ಸಂದರ್ಭದಲ್ಲಿ ಅವರೇ ಇಲ್ಲ. ದೊಡ್ಡ ಸಮಾಜ ಅಲ್ಲದೇ ಇದ್ದರೂ ಎಲ್ಲಾ ಜಾತಿ ಸಮುದಾಯವನ್ನು ಸಾಮಾಜಿಕ ನ್ಯಾಯದಡಿ ತೆಗೆದುಕೊಂಡು ಹೋಗ್ತಿದ್ರು ಎಂದು ಬಣ್ಣಿಸಿದರು. ನನಗಷ್ಟೇ ಅಲ್ಲ ನಮ್ಮ ಸರ್ಕಾರಕ್ಕೆ ದೊಡ್ಡ ಆಘಾತ ಇದು. ಸುಧಾಕರ್‌ಗೆ ಬೆಂಬಲಕ್ಕೆ ನಿಂತಿದ್ದೆವೋ ಹಾಗೇ ಅವರ ಕುಟುಂಬದ ಪರ ನಿಲ್ಲುತ್ತೇವೆ. ಸುಧಾಕರ್ ಜನಪ್ರಿಯತೆ ನೀವೆಲ್ಲ ಗಮನಿಸಬೇಕು. ಆತ ಜನಾನುರಾಗಿ ರಾಜಕಾರಣಿ ಎಂದರು.

ಡಿಕೆ ಶಿವಕುಮಾರ್ ಮಾಧ್ಯಮಗಳ ಜೊತೆ ಮಾತನಾಡುವ ವೇಳೆ ಶಿವಕುಮಾರ್ ರವರಿಗೆ ರಾಹುಲ್ ಗಾಂಧಿಯವರು ಫೋನ್ ಕರೆ ಮಾಡಿ ಸುಧಾಕರ್ ಪುತ್ರ ಸುಹಾಸ್ ರವರಿಗೆ ಸಾಂತ್ವನ ಹೇಳಿದರು. ಬಳಿಕ ಡಿ.ಕೆ.ಶಿವಕುಮಾರ್ ರವರ ಜೊತೆ ರಾಹುಲ್ ಗಾಂಧಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸುಧಾಕರ್ ಅಂತಿಮ ದರ್ಶನಕ್ಕೆ ಸಿಎಂ ಸಿದ್ದರಾಮಯ್ಯ
ತಾಯಂದಿರ ದಿನವೇ ನೆನಪಿನ ಬುತ್ತಿ ಕಟ್ಟಿಕೊಟ್ಟ ಮಾತೃಹೃದಯಿ