ತಾಯಂದಿರ ದಿನವೇ ನೆನಪಿನ ಬುತ್ತಿ ಕಟ್ಟಿಕೊಟ್ಟ ಮಾತೃಹೃದಯಿ

KannadaprabhaNewsNetwork |  
Published : May 11, 2026, 01:15 AM IST
ಸುಧಾಕರ್ ಸುದ್ದಿ ಹಿರಿಯೂರು222 | Kannada Prabha

ಸಾರಾಂಶ

ಹಿರಿಯೂರು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಗುವಿನ ಆರೋಗ್ಯ ವಿಚಾರಿಸುತ್ತಿರುವುದು.

ರಮೇಶ್ ಬಿದರಕೆರೆ

ಕನ್ನಡಪ್ರಭ ವಾರ್ತೆ ಹಿರಿಯೂರು

ಸಚಿವ ಡಿ.ಸುಧಾಕರ್ ಅಗಲಿಕೆಯಿಂದ ಅವರ ಅಭಿಮಾನಿಗಳು, ಕಾರ್ಯಕರ್ತರು ಧಿಗ್ಬ್ರಮೆಗೊಂಡಿದ್ದಾರೆ. ತಿಂಗಳಿನಿಂದ ಪಕ್ಷದ ಕಾರ್ಯಕರ್ತರ ಕಣ್ಣಂಚಿನಲ್ಲಿದ್ದ ಹನಿಗಳು ಭಾನುವಾರ ಕೆನ್ನೆಗಿಳಿದುಬಿಟ್ಟವು.

ಸುಧಾಕರ್ ಮಾಡಿದ ದಾನ ಧರ್ಮಗಳಿಗೆ ಲೆಕ್ಕವಿಡಲಾಗುವುದಿಲ್ಲ. ಕಷ್ಟ ಎಂದು ಬಂದ ಲಕ್ಷಾಂತರ ಜನರ ಕಣ್ಣೀರು ಒರೆಸಿದ ಉದಾಹರಣೆಗಳಿವೆ. ಶಾಲೆ ಫೀಸ್ ಕಟ್ಟಿಲ್ಲ, ಆಸ್ಪತ್ರೆ ಸೇರಿಸಿದ್ದೇವೆ, ಮದುವೆ, ಅಪಘಾತ, ಜಾತ್ರೆ, ನಾಟಕ, ಟೂರ್ನಮೆಂಟ್, ಹಬ್ಬ ಹರಿದಿನ, ರಾಜ್ಯೋತ್ಸವ, ಗಣೇಶ ಹೀಗೆ ನೂರಾರು ಕಾರಣಗಳನ್ನಿಟ್ಟುಕೊಂಡು ದಿನಂಪ್ರತಿ ಬರುತ್ತಿದ್ದ ಜನಕ್ಕೆ ಎಂದೂ ಇಲ್ಲ ಎನ್ನಲಿಲ್ಲ. ಅವರ ದಾನದ ಬಗ್ಗೆ ಇಂದಿಗೂ ಎರಡು ಮಾತಿಲ್ಲ.

ಎಲ್ಲಿದೆಯಪ್ಪ ದುಡ್ಡು ಅನ್ನುತ್ತಲೇ ಎದುರಿಗಿದ್ದವರ ಕಷ್ಟಕ್ಕೆ ಸ್ಪಂದಿಸಿ ಮುಂದಕ್ಕೆ ಹೋಗುತ್ತಿದ್ದರು. ಇದು ಸುಧಾಕರ್ ರವರ ಸಹಾಯದ ಪರಿ. ರಾಜಕೀಯ ಲಾಭ ಗಣನೆಗೆ ತೆಗೆದುಕೊಳ್ಳದೆ ಅವರು ಮಾಡುತ್ತಿದ್ದ ಸಹಾಯಗಳನ್ನು ಎಲ್ಲರ ಬಾಯಲ್ಲಿ ಹರಿದಾಡುತ್ತಿವೆ. ಸುಧಾಕರ್ ರವರಲ್ಲಿ ತಾಯಿಯ ಗುಣವಿತ್ತು. ಸಾವಿರಾರು ಬಡ ಮಕ್ಕಳ ಶಾಲೆ ಶುಲ್ಕ ಕಟ್ಟಿದ, ಸಾವಿರಾರು ಜನರ ಆಸ್ಪತ್ರೆ ಬಿಲ್ ಪಾವತಿ ಮಾಡಿದ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದರು.

ಕಷ್ಟ ಎಂದು ಬಂದವರ ಪಕ್ಷ ಯಾವುದು ಎಂದು ಎಂದೂ ಕೇಳಲಿಲ್ಲ. ಆಸ್ಪತ್ರೆ ಬಿಲ್ಲು ಮತ್ತು ಮಕ್ಕಳ ಶಾಲಾ ಶುಲ್ಕಕ್ಕೆ ಸಹಾಯ ಬೇಕು ಎಂದವರಿಗೆ ಕೇಳುವವರ ಊಹೆಗೂ ಮೀರಿದ ಸಹಾಯ ಮಾಡಿದ್ದಾರೆ. ಕಾಲಿನ ಆಪರೇಷನ್‌ಗೆ ಹೋಗುವ ಮುನ್ನಾ ಒಂದೆರಡು ವಾರದ ಹಿಂದೆಯೂ ಸಹ ಅನ್ಯ ಪಕ್ಷದ ಕಾರ್ಯಕರ್ತನಿಗೆ ಆಸ್ಪತ್ರೆಗೆಂದು ಹಣ ನೀಡಿದ್ದಾರೆ. ಹಿಂಬಾಲಕರಾರೋ ಅವರು ನಮಗೆ ಮತ ಹಾಕಿಲ್ಲ ಸರ್ ಎಂದರೆ ಕಾಯಿಲೆಗಳು ಪಕ್ಷ ನೋಡಿ ಬರುತ್ತವೇನೋ ಮೂರ್ಖ ಎಂದಿದ್ದಾರೆ. ಈ ರೀತಿಯ ಮಾನವೀಯ ಮುಖಗಳೇ ಅವರನ್ನು ಜನಪ್ರಿಯತೆಯ ಉತ್ತುಂಗಕ್ಕೆ ಏರಿಸಿತ್ತು.

ಚಳ್ಳಕೆರೆ ಮತ್ತು ಹಿರಿಯೂರಿನಲ್ಲಿ ತಮ್ಮ ಅಭಿವೃದ್ಧಿಪರ ನಿಲುವುಗಳಿಂದಲೇ ಗೆಲ್ಲುತ್ತಾ ಬಂದಿದ್ದರು. ಜಾತಿ ಬಲವಿಲ್ಲದೆ ನಾಲ್ಕು ಬಾರಿ ಶಾಸಕರಾಗುವುದು ಅಸಾಧ್ಯ. ಆದರೆ ಡಿ.ಸುಧಾಕರ್ ಕೇವಲ ನೂರಿನ್ನೂರು ಸ್ವಜಾತಿಯ ಮತಗಳಿರುವ ಹಿರಿಯೂರು ಕ್ಷೇತ್ರದಲ್ಲಿ 90 ಸಾವಿರ ಮತ ಪಡೆದಿದ್ದರು. ಅತೀವ ದೈವಭಕ್ತರಾಗಿದ್ದ ಅವರು ಪೂಜೆ ಪುನಸ್ಕಾರಗಳಿಲ್ಲದೆ ಮನೆಯಿಂದ ಎಂದೂ ಹೊರ ಹೊರಡುತ್ತಿರಲಿಲ್ಲ. ದೇವರ ಮೇಲಿನ ಅವರ ಭಕ್ತಿಯು ನೋಡುಗರಲ್ಲಿ ಆಶ್ಚರ್ಯ ಹುಟ್ಟಿಸುತ್ತಿತ್ತು.

ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧೆಡೆ ಸಾವಿರಾರು ದೇವಾಲಯಗಳ ಅಭಿವೃದ್ಧಿಗೆ ಸರ್ಕಾರದ ವತಿಯಿಂದ ಜೊತೆಗೆ ವೈಯಕ್ತಿಕವಾಗಿಯೂ ಧನ ಸಹಾಯ ಮಾಡಿದ್ದರು. ತಮ್ಮ ಕೊನೆಯ ದಿನಗಳಲ್ಲಿ ಜೆಜಿ ಹಳ್ಳಿ ಹಾಗೂ ಐಮಂಗಲ ಭಾಗದ ಜನರ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲಿಕ್ಕಾಗಿ ಅವಿರತ ಓಡಾಟ ನಡೆಸಿದ್ದರು. ಆದರೆ ಕಾರ್ಯಕರ್ತರ ಮತ್ತು ಅಭಿಮಾನಿಗಳ ಕಣ್ಣಲ್ಲಿ ನೀರಾಗಿ ಹರಿದು ಹೋದರು.

--

ಬಾಕ್ಸ್:ಸಚಿವ ಸುಧಾಕರ ನಿಧನಕ್ಕೆ ಮಹಿಳೆಯರ ಕಣ್ಣೀರು

ಸಚಿವರ ನಿಧನ ಹಿನ್ನೆಲೆಯಲ್ಲಿ ನಗರದ ನೆಹರೂ ಮೈದಾನದಲ್ಲಿ ನೂರಾರು ಮಹಿಳೆಯರು ಕಣ್ಣೀರಿಟ್ಟರು. ಸಚಿವರನ್ನು ನೆನೆದು ಭಾವುಕರಾಗಿ ಗಳಗಳನೆ ಅತ್ತರು. ನಮಗೆಲ್ಲಾ ಸಚಿವರು ಅಣ್ಣನಂತಿದ್ದರು. ಸಂಕಷ್ಟಕ್ಕೆ ಸ್ಪಂದಿಸುವ ಆಪತ್ಬಾಂದವರಾಗಿದ್ದರು. ಕಷ್ಟವೆಂದು ಅವರ ಬಳಿಗೆ ತೆರಳಿದ ಎಲ್ಲರಿಗೂ ಸಹಾಯ ಮಾಡುತ್ತಿದ್ದರು. ಸ್ತ್ರೀಶಕ್ತಿ ಸಂಘಗಳು ಸೇರಿದಂತೆ ವಿವಿಧ ಸಂಘಗಳಿಗೆ ಉತ್ತೇಜನ ನೀಡಿ ಮಹಿಳೆಯರ ಸಬಲೀಕರಣಕ್ಕೆ ಶ್ರಮಿಸಿದ ನಮ್ಮ ನಾಯಕರ ಅಗಲಿಕೆ ನಮಗೆಲ್ಲಾ ತುಂಬಾ ನೋವು ತಂದಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದುಃಖದ ಮಡುವಿನಲ್ಲಿ ಮುಳುಗಿದ ಹಿರಿಯೂರು
ಸುಧಾಕರ್ ಅಂತಿಮ ದರ್ಶನಕ್ಕೆ ಸಿಎಂ ಸಿದ್ದರಾಮಯ್ಯ