ಕನ್ನಡಪ್ರಭ ವಾರ್ತೆ ತುರುವೇಕೆರೆ
ಪಟ್ಟಣದ ಮೂಲೆಶಂಕರೇಶ್ವರ ದೇವಾಲಯದ ಆವರಣದಲ್ಲಿ ಎಸ್‌ಎಲ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಮೂಲೆ ಶಂಕರೇಶ್ವರ ದೇವಾಲಯ ಸಮಿತಿ, ಪತಂಜಲಿ ಯೋಗ ಸಮಿತಿಯ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ವಿದ್ಯಾ ಶಂಕರ ಕೌಶಲ್ಯ ತರಬೇತಿ ಹಾಗೂ ವ್ಯಕ್ತಿತ್ವ ವಿಕಸನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬುದ್ದಿವಂತಿಕೆ ಹಾಗೂ ಕೌಶಲ್ಯಗಳು ಸಮುದಾಯದ ಹಿತಕ್ಕಿಂತ ಸ್ವಾರ್ಥ ಸಾಧನೆಗೆ ಬಳಕೆಯಾಗುವುದೇ ಹೆಚ್ಚಾಗಿದೆ. ಅವುಗಳ ಹರಿವು ಮತ್ತು ಉಪಯೋಗ ವ್ಯಾವಹಾರಿಕ ಉದ್ದೇಶಗಳಿಗೆ ಮೀಸಲಾಗುತ್ತಿದೆ. ಶಿಕ್ಷಣ ಕೇವಲ ಇಂತಹ ಅಡ್ಡದಾರಿಯ ಕೌಶಲ್ಯಗಳನ್ನು ಕಲಿಸುವ ಕಾರ್ಯಾಗಾರ ಎನಿಸಬಾರದು. ಶಿಕ್ಷಣ ವ್ಯಕ್ತಿಯೊಬ್ಬನ ಸಮಗ್ರ ವ್ಯಕ್ತಿತ್ವವನ್ನು ರೂಪಿಸುವ, ಜ್ಞಾನದ ಅನಂತ ಶಾಖೆಗಳನ್ನು ಶೋಧಿಸುವ, ಅನುಸಂಧಾನದ ನಿರಂತರ ಪ್ರಕ್ರಿಯೆಯಾಗಬೇಕು. ಅದಕ್ಕೆ ಪ್ರತಿಯೊಬ್ಬ ಶಿಕ್ಷಕನೂ ಶತಶತಮಾನಗಳ ದೂರದೃಷ್ಟಿಯುಳ್ಳ ಪ್ರವಾದಿಯಾಗಬೇಕು ಎಂದರು.ಶಿಕ್ಷಣ ವ್ಯವಸ್ಥೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಅವರು, ಸರ್ಕಾರಗಳ ಪಾಲಿಗೆ ಶಿಕ್ಷಣ ಇಲಾಖೆ ಒಂದು ಅನುತ್ಪಾದಕ ಕ್ಷೇತ್ರ ಎನಿಸಿರುವುದು ದುರಂತ. ಪ್ರಜೆಗಳನ್ನು ಪ್ರಜ್ಞಾವಂತರನ್ನಾಗಿ ಮಾಡುವ ಶಿಕ್ಷಣಕ್ಕೆ ಸಿಗಬೇಕಾದ ಪ್ರಾಮುಖ್ಯ ಸಿಗುತ್ತಿಲ್ಲ. ಇಂತಹ ಹೊತ್ತಿನಲ್ಲಿ ದೂರದ ಅಮೇರಿಕಾದಿಂದ ಬಂದ ಗುರುರಾಜ್, ಬಾಲಕೃಷ್ಣ ಸಹೋದರರು ಶಿಕ್ಷಣದ ಕಾಯಕಲ್ಪಕ್ಕೆ ಕೈಜೋಡಿಸಿರುವುದು ಅನುಕರಣೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್ ಮಾತನಾಡಿ, ಎಸ್‌ಎಸ್‌ಎಲ್‌ಸಿ ಫಲಿತಾಂಶ ಉತ್ತಮಪಡಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ಈ ಬಾರಿ ತಾಲೂಕು ಜಿಲ್ಲೆಗೆ ಎರಡನೇ ಸ್ಥಾನ ಗಳಿಸಿದೆ. ಇಲಾಖೆಯೊಂದಿಗೆ ಸಮುದಾಯ ಕೈ ಜೋಡಿಸಿದರೆ ಇನ್ನೂ ಹೆಚ್ಚಿನ ಸಾಧನೆ ಮಾಡಬಹುದು ಎಂದರು.