ಶಿಕ್ಷಣ ದೇಶದ ಪ್ರಗತಿಗೆ ಅತ್ಯುತ್ತಮ ಅಸ್ತ್ರ: ನಿರಂಜನಮೂರ್ತಿ

KannadaprabhaNewsNetwork |  
Published : Jan 25, 2025, 01:04 AM IST
24ಸಿಎಚ್‌ಎನ್2ಚಾಮರಾಜನಗರ ತಾಲ್ಲೂಕಿನ ಹರವೆ ಗ್ರಾಮದ ಚನ್ನಬಸವೇಶ್ವರ  ಪ್ರತಿಷ್ಠಾನ ವಿರಕ್ತ ಮಠದ ವತಿಯಿಂದ ನಡೆದ ಚನ್ನಬಸವೇಶ್ವರ ಕನ್ನಡ ಮತ್ತು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಹಾಗೂ ಪ್ರೌಡಶಾಲೆಯ ೨೧ನೇ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಜೆಎಸ್‌ಎಸ್ ಮಹಾವಿದ್ಯಾಪೀಠ ಕಾಲೇಜು ಶಿಕ್ಷಣ ವಿಭಾಗದ ಸಹಾಯಕ ನಿರ್ದೆಶಕ ಬಿ.ನಿರಂಜನಮೂರ್ತಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಚಾಮರಾಜನಗರದ ಹರವೆ ಗ್ರಾಮದ ಚನ್ನಬಸವೇಶ್ವರ ಕನ್ನಡ ಮತ್ತು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಹಾಗೂ ಪ್ರೌಡಶಾಲೆಯ ೨೧ನೇ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಜೆಎಸ್‌ಎಸ್ ಮಹಾವಿದ್ಯಾಪೀಠ ಕಾಲೇಜು ಶಿಕ್ಷಣ ವಿಭಾಗದ ಸಹಾಯಕ ನಿರ್ದೆಶಕ ಬಿ.ನಿರಂಜನಮೂರ್ತಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಬಡತನ, ಕೀಳರಿಮೆ ಹೋಗಲಾಡಿಸಲು ಶಿಕ್ಷಣದಿಂದ ಮಾತ್ರ ಸಾಧ್ಯ, ದೇಶದ ಪ್ರಗತಿಗೆ ಅದೊಂದು ಅತ್ಯುತ್ತಮ ಅಸ್ತ್ರ ಎಂದು ಜೆಎಸ್‌ಎಸ್ ಮಹಾವಿದ್ಯಾಪೀಠ ಕಾಲೇಜು ಶಿಕ್ಷಣ ವಿಭಾಗದ ಸಹಾಯಕ ನಿರ್ದೆಶಕ ಬಿ.ನಿರಂಜನಮೂರ್ತಿ ಅಭಿಪ್ರಾಯಪಟ್ಟರು.ತಾಲೂಕಿನ ಹರವೆ ಗ್ರಾಮದ ಚನ್ನಬಸವೇಶ್ವರ ಪ್ರತಿಷ್ಠಾನ, ವಿರಕ್ತ ಮಠದ ವತಿಯಿಂದ ಶುಕ್ರವಾರ ನಡೆದ ಚನ್ನಬಸವೇಶ್ವರ ಕನ್ನಡ ಮತ್ತು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ 21ನೇ ಶಾಲಾವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶದ ಅಭಿವೃದ್ಧಿಗೆ ಶಿಕ್ಷಣ ಎಷ್ಟು ಅವಶ್ಯಕವೋ, ಹಾಗೇ ವಿದ್ಯಾರ್ಥಿಗಳ ಬದುಕಿಗೆ ಸಂಸ್ಕಾರಯುತ ಶಿಕ್ಷಣ ಅಷ್ಟೇ ಅವಶ್ಯಕ. ಇಂದಿನ ಯುವಪೀಳಿಗೆಗೆ ಸಂಸ್ಕೃತಿ ಉಳಿಸಿ, ಬೆಳೆಸುವ ಸಾಮಾಜಿಕ ಹೊಣೆಗಾರಿಕೆ ಅಗತ್ಯವಿದೆ ಎಂದರು. ಹರವೆ ಶ್ರೀಗಳು ಕಳೆದ 20 ವರ್ಷದ ಹಿಂದೆ ಚನ್ನಬಸವೇಶ್ವರ ಪ್ರತಿಷ್ಠಾನ ಸ್ಥಾಪಿಸಿ, ಪ್ರಸ್ತುತ 21ನೇ ವರ್ಷಕ್ಕೆ ಕಾಲಿಟ್ಟಿರುವುದು ಪ್ರಶಂಸನೀಯ ಎಂದರು.

ಆಶೀರ್ವಚನ ನೀಡಿದ ಚನ್ನಬಸವೇಶ್ವರ ಪ್ರತಿಷ್ಠಾನದ ಅಧ್ಯಕ್ಷ ಸರ್ಪಭೂಷಸ್ವಾಮೀಜಿ, ಪ್ರತಿಯೊಬ್ಬರು ಸ್ವಾವಲಂಬಿ ಬದುಕು ಸಾಗಿಸಲು ಶಿಕ್ಷಣ ಪಡೆಯಬೇಕಾದ ಅಗತ್ಯವಿದೆ. ಯಾವುದೇ ಕ್ಷೇತ್ರದಲ್ಲಿ ಸೇವೆ ಸಲ್ಲಿಸಬೇಕಾದರೂ, ಸಂಸ್ಕಾರಯುತ ಶಿಕ್ಷಣ ಅಗತ್ಯ ಎಂದರು. ಶಾಲಾಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್ ಮಾತನಾಡಿ, ಭಾರತದ ಸಂಸ್ಕೃತಿಯನ್ನು ಪ್ರಪಂಚದ ಇತರೇ ದೇಶಗಳು ಅನುಕರಣೆ ಮಾಡುತ್ತಿವೆ. ಇಂದು ಹೆಣ್ಣುಮಕ್ಕಳಿಗೆ ಭದ್ರತೆ ಒದಗಿಸುವ ಶಿಕ್ಷಣ ಸಂಸ್ಥೆಗಳು ಅಗತ್ಯವಿದ್ದು, ಅಂತಹ ಸಂಸ್ಥೆಯ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದರು.

ಹರವೆ ಚನ್ನಬಸವೇಶ್ವರ ವಿದ್ಯಾಸಂಸ್ಥೆ ಎಸ್‌ಎಸ್‌ಎಲ್‌ಸಿಯಲ್ಲಿ ಪ್ರತಿವರ್ಷ 100ವಿದ್ಯಾರ್ಥಿಗಳಿಗೆ 96 ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಿರುವುದು ಶಾಲೆಯಲ್ಲಿ ಕೊಡುವ ಗುಣಮಟ್ಟದ ಶಿಕ್ಷಣಕ್ಕೆ ಪೂರಕವಾಗಿದೆ ಎಂದರು.ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮದ ಮಾಜಿ ನಿರ್ದೇಶಕ ಎಂ.ಶಿವಮೂರ್ತಿ ಮಾತನಾಡಿ, ಮಕ್ಕಳು ಶೈಕ್ಷಣಿಕವಾಗಿ ಪ್ರಗತಿ ಹೊಂದಬೇಕಾದರೆ ಅವರಿಗೆ ಮೌಲ್ಯಯುತ ಶಿಕ್ಷಣ ಸಿಗಬೇಕು, ಆ ನಿಟ್ಟಿನಲ್ಲಿ ಮಠಮಾನ್ಯಗಳು ಶಿಕ್ಷಣ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡುತ್ತಿವೆ, ಪೋಷಕರು ತಮ್ಮ ಮಕ್ಕಳಿಗೆ ಮೊಬೈಲ್ ಕೊಡುವ ಅಭ್ಯಾಸ ಮಾಡಬಾರದು, ಟೀವಿ ವೀಕ್ಷಣೆಯಿಂದ ದೂರವಿರಿಸಬೇಕು ಎಂದು ಮನವಿ ಮಾಡಿದರು. ಉದ್ಘಾಟನಾ ಸಮಾರಂಭದ ನಂತರ ಶಾಲಾ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಕೆಎಂಎಫ್ ಹಾಗೂ ಚಾಮುಲ್ ನಿರ್ದೇಶಕ ಎಂ.ನಂಜುಂಡಸ್ವಾಮಿ, ಎಚ್.ಎಸ್.ಬಸವರಾಜು, ಸದಾಶಿವಮೂರ್ತಿ, ವಕೀಲರಾದ ಎಚ್.ಪಿ.ಮಹದೇವಪ್ಪ, ಬಿ.ಪ್ರಭುಸ್ವಾಮಿ, ಮಾತನಾಡಿದರು.

ತಾಪಂ ಮಾಜಿ ಸದಸ್ಯ ಬಿ.ಉದಯಕುಮಾರ್, ಬಿಇಒ ಹನುಮಶೆಟ್ಟಿ, ಚನ್ನಬಸವೇಶ್ವರ ಪ್ರತಿಷ್ಠಾನದ ಕಾರ್ಯದರ್ಶಿ ಎಚ್.ಎಸ್.ಗಿರೀಶ್, ಚನ್ನಬಸವೇಶ್ವರ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರೌಡಶಾಲಾ ಮುಖ್ಯಶಿಕ್ಷಕರು, ಹಿರಿಯ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರು,ಸಹಶಿಕ್ಷಕರು, ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಪೋಷಕರು ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ