ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದ ಪ್ರೇಮಾಮೃತಂ ಸಭಾಭವನದಲ್ಲಿ ಭಾನುವಾರ ಆಯೋಜನೆಗೊಂಡ ಶ್ರೀ ಸತ್ಯಸಾಯಿ ಲೋಕ ಸೇವಾ ಗುರುಕುಲಂ ಸಮೂಹ ಸಂಸ್ಥೆಗಳ ವಾರ್ಷಿಕ ಕ್ರೀಡಾ ಮತ್ತು ಸಾಂಸ್ಕೃತಿಕ ಉತ್ಸವದ ಸಮಾರೋಪದಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಿ ಮಾತನಾಡಿದರು.
ಆಹಾರ ಉತ್ಪಾದನೆಯಲ್ಲಿ ಸಾಧನೆವರ್ತಮಾನದ ಭಾರತವು ಶಿಕ್ಷಣ ಮತ್ತು ಆಹಾರ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ಬಡ ರಾಷ್ಟ್ರವೆಂಬ ಹಣೆಪಟ್ಟಿಯನ್ನು ಕಳಚಿ ಅಭಿವೃದ್ಧಿ ಶೀಲ ದೇಶವೆಂಬ ಹೆಗ್ಗಳಿಕೆಯನ್ನು ಪಡೆದಿದೆ. ಇದಕ್ಕೆ ಕಾರಣ ನಮ್ಮಲ್ಲಾದ ಶಿಕ್ಷಣ ಮತ್ತು ಆಹಾರ ಕ್ರಾಂತಿ. ಆಹಾರಕ್ಕಾಗಿ ಪರ ರಾಷ್ಟ್ರಗಳನ್ನು ಅವಲಂಬಿಸಿದ್ದ ಭಾರತವು ಇಂದು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸಿದೆ. ಭಾರತವು ಜಗತ್ತಿನಲ್ಲಿಯೇ ಅತಿ ದೊಡ್ಡ ಮಾನವ ಶಕ್ತಿ ಸಂಪನ್ನ ರಾಷ್ಟ್ರವಾಗಿದೆ. ಇದಕ್ಕೆಲ್ಲ ಕಾರಣ ಶಿಕ್ಷಣ. ಆದುದರಿಂದ ಎಲ್ಲಾ ವಿಕಾಸಗಳ ಅಡಿಪಾಯ ಶಿಕ್ಷಣವಾಗಿದೆ ಎಂದರು.
ಶಿಕ್ಷಣದಿಂದ ಸಬಲತೆ ಸಾಧ್ಯ
ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದ್ದ ಸದ್ಗುರು ಶ್ರೀ ಮಧುಸೂದನ ಸಾಯಿ ಮಾತನಾಡಿ, ಪ್ರಜೆಗಳು ಶಕ್ತಿ ಶಾಲಿಗಳಾಗಿದ್ದರೆ ದೇಶವು ಪ್ರಬಲವಾಗಿರುತ್ತದೆ. ಶಿಕ್ಷಣವು ಎಲ್ಲಾ ರೀತಿಯಲ್ಲೂ ಪ್ರತಿಯೊಬ್ಬರನ್ನು ಸಬಲರನ್ನಾಗಿ ಮಾಡುತ್ತದೆ. ಶಿಕ್ಷಣವೆಂದರೆ ಕೇವಲ ಓದು ಬರಹ ಅಲ್ಲ. ಸಂಸ್ಕಾರದಿಂದ ಮಿಳಿತವಾದ ಭಾವನಾತ್ಮಕ ಸಮತೋಲನವನ್ನು ಸಾಧಿಸುವ ಮೂಲ ಮಂತ್ರ. ಶಾಸ್ತ್ರ, ಶಸ್ತ್ರ, ಗುಣ ಸಂಪನ್ನತೆ ಮತ್ತು ಪರೋಪಕಾರ ಧೋರಣೆ ಶಿಕ್ಷಣದ ಗುರಿಯಾಗಬೇಕು. ಇದನ್ನು ಅನುಷ್ಠಾನಕ್ಕೆ ತರುವ ಪ್ರಯತ್ನವನ್ನು ತಮ್ಮ ಸಂಸ್ಥೆಯು ಮಾಡುತ್ತಿದೆ ಎಂದರು.ಬದುಕಿನಲ್ಲಿ ಆತ್ಮವಿಶ್ವಾಸ ಮುಖ್ಯ
ಯಾರೂ ಕೂಡ ಯಾವುದೇ ವಿಚಾರದಲ್ಲಿ ಹಿಂಜರಿಯಬಾರದು. ಆತ್ಮವಿಶ್ವಾಸ ಮತ್ತು ಧೈರ್ಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹಿಂಜರಿದವರು ಗೆಲ್ಲಲಾರರು, ಗೆದ್ದವರು ಹಿಂದಕ್ಕೆ ಸರಿಯಬಾರದು. ಸಮಾಜದಿಂದ ಪಡೆದ ಶಿಕ್ಷಣವನ್ನು ಸಮಾಜದ ಹಿತಕ್ಕಾಗಿ ಬಳಸಬೇಕು. ಸಮಾಜ, ಸಂಘ ಮತ್ತು ಸರಕಾರ ಒಗ್ಗಟ್ಟಿನಿಂದ ಶ್ರಮಿಸಿದರೆ ಅಭ್ಯುದಯವನ್ನು ಸಾಧಿಸಲು, ಸಾಧ್ಯ ಎಂದು ತಿಳಿಸಿದರು.ಕಾರ್ಯಕ್ರಮದ ದಿಕ್ಸೂಚಿ ನುಡಿ ಮತ್ತು ಪ್ರಾಸ್ತಾವಿಕ ಉಪನ್ಯಾಸವನ್ನು ಗೈದ ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಬಿ ಎನ್ ನರಸಿಂಹಮೂರ್ತಿ ಅವರು ಮಾತನಾಡಿ ಸಂಸ್ಥೆಯ ಧ್ಯೇಯ ಧೋರಣೆಗಳನ್ನು ವಿವರಿಸಿದರು.
ಸಮಾರೋಪ ಸಮಾರಂಭದಲ್ಲಿ ಸಮಗ್ರ ಪಂಗಡ ಪ್ರಶಸ್ತಿ, ಸಹಭಾಗಿ ಪುರಸ್ಕಾರ ಮತ್ತು ಪಂಗಡ ಪ್ರಶಸ್ತಿಗಳು ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಶ್ರೀ ಸತ್ಯಸಾಯಿ ಆರೋಗ್ಯ ಮತ್ತು ಶಿಕ್ಷಣ ಟ್ರಸ್ಟ್ ನ ಅಧ್ಯಕ್ಷ ಡಾ.ಸಿ.ಶ್ರೀನಿವಾಸ್, ಕ್ರಿಕೆಟ್ ದಂತಕತೆ ಜಿ.ಆರ್.ವಿಶ್ವನಾಥ್ , ಆಮಂತ್ರಿತ ಗಣ್ಯರು, ಪೋಷಕರು, ವಿದ್ಯಾರ್ಥಿ ವಿದ್ಯಾರ್ಥಿನಿಯರು ಶಿಕ್ಷಕ ಶಿಕ್ಷಕಿಯರು, ವಿವಿಧ ಸಂಸ್ಥೆಗಳ ಮುಖ್ಯಸ್ಥರು, ಸಾರ್ವಜನಿಕರು ಇದ್ದರು.