ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ಶಿಕ್ಷಣವೇ ದಾರಿದೀಪ

KannadaprabhaNewsNetwork |  
Published : Sep 29, 2026, 02:00 AM IST
ಬಾಟಂ | Kannada Prabha

ಸಾರಾಂಶ

ಚಳ್ಳಕೆರೆ ನಗರದ ಯಾದವ ಹಾಸ್ಟೆಲ್‌ನಲ್ಲಿ ನಡೆದ ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರು, ಸಮಾಜದ ವಿವಿಧ ಕ್ಷೇತ್ರದ ಗಣ್ಯರ ಸನ್ಮಾನ ಕಾರ್ಯಕ್ರಮವನ್ನು ಸಚಿವ ಟಿ.ರಘುಮೂರ್ತಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಬದಲಾದ ಕಾಲಘಟ್ಟದಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡಬೇಕಾಗಿದೆ. ತಳ ಸಮುದಾಯಗಳು ಸಮಾಜದ ಮುಖ್ಯವಾಹಿನಿಗೆ ಬರಲು ಆ ಮೂಲಕ ಪ್ರಬುದ್ಧತೆ ಹೊಂದಲು ಶಿಕ್ಷಣವೊಂದೇ ದಾರಿದೀಪ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಟಿ.ರಘುಮೂರ್ತಿ ಹೇಳಿದರು.

ನಗರದ ಯಾದವ ಹಾಸ್ಟೆಲ್ ಆವರಣದಲ್ಲಿ ಗೊಲ್ಲ ನೌಕರರ ಸಂಘ 2025-26ನೇ ಸಾಲಿನ ಎಸ್‍ಎಸ್‍ಎಲ್‍ಸಿ, ಪಿಯುಸಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರು, ಸಮಾಜದ ವಿವಿಧ ಕ್ಷೇತ್ರದ ಗಣ್ಯರ ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಈ ಭಾಗದ ಎಲ್ಲಾ ಕೆರೆಗಳಿಗೆ ನೀರು ಹರಿಸಿ ಈ ಭಾಗದ ಜನರ ಬದುಕು ಹಸನು ಮಾಡುವ ನಿಟ್ಟಿನಲ್ಲಿ ಭದ್ರ ಮೇಲ್ದಂಡೆ ಯೊಜನೆ ಮೂಲಕ ನೀರು ತರುವ ಕಾರ್ಯ ಮಾಡಲಾಗಿದೆ. ವಾಣಿ ವಿಲಾಸ ಸಾಗರದಿಂದ ವೇದಾವತಿ ನದಿಗೆ ನೀರು ಹರಿಸಲಾಗಿದೆ. ಇದರಿಂದ ಬಯಲು ಸೀಮೆಯಲ್ಲಿ ಅಂತರ್ಜಲಮಟ್ಟ ಹೆಚ್ಚಿ ಜನರು ಬದುಕು ಕಟ್ಟಿಕೊಳ್ಳುವಂತಾಗಲಿ. ಕಳೆದ ಹಲವಾರು ವರ್ಷಗಳಿಂದ ಸಮಾಜಕ್ಕೆ ಸೇವೆ ಮಾಡಿದ್ದೇನೆ. ಸಮಾಜವೂ ಸಹ ನನ್ನೊಂದಿಗೆ ನಿಂತಿದೆ. ಮತ್ತಷ್ಟು ಅಭಿವೃದ್ಧಿಗೆ ಶ್ರಮಿಸುವ ಭರವಸೆ ನೀಡಿದರು.

ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿದ್ದ ಡಾಬಸ್‍ಪೇಟೆ ವನಕಲ್ಲು ಮಠದ ಪೀಠಾಧ್ಯಕ್ಷ ಬಸವ ರಮಾನಂದ ಸ್ವಾಮೀಜಿ ಮಾತನಾಡಿ, ಬುಡಕಟ್ಟು ಜನಾಂಗವಾದ ಗೊಲ್ಲ ಸಮುದಾಯಕ್ಕೆ ಅಗತ್ಯ ಸೌಲಭ್ಯಗಳು ಬೇಕಿದೆ. ವಿದ್ಯಾರ್ಥಿ ಭವನ, ಕೃಷ್ಣಭವನ ಕಟ್ಟಡ ಪೂರ್ಣ, ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿ ಗಳ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡಬೇಕೆಂದರು.

ಈ ಕಾರ್ಯಕ್ರಮ ಜನಾಂಗದ ಎಲ್ಲರಿಗೂ ಹೊಸ ಆತ್ಮವಿಶ್ವಾಸ ತುಂಬಿದೆ. ನಮ್ಮ ಸಮಾಜದ ಮಕ್ಕಳು ಉತ್ತಮ ಪ್ರಗತಿಯಲ್ಲಿ ಮುನ್ನಡೆಯುತ್ತಿರುವುದು ಹೆಮ್ಮೆಯ ವಿಷಯ. ನಿವೃತ್ತ ನೌಕರರ ಜೊತೆಗೆ ವಿವಿಧ ಕ್ಷೇತ್ರದ ಸಾಧಕರಿಗೆ ಅಭಿನಂದನೆ ಸಲ್ಲಿಸಿದ್ದೀರಿ. ಜನಾಂಗದ ಸರ್ವತೋಮುಖ ಅಭಿವೃದ್ಧಿಗೆ ಎಲ್ಲಾ ರೀತಿಯ ಪ್ರಾಮಾಣಿಕ ಪ್ರಯತ್ನಗಳು ನಡೆಯುತ್ತಾ ಬಂದಿವೆ. ಇಂತಹ ಕಾರ್ಯಕ್ರಮಗಳು ಹೆಚ್ಚು, ಹೆಚ್ಚು ನಡೆಯಬೇಕಿದೆ. ಯಾದವ ಸಮುದಾಯದ ಬೇರೆ ಎಲ್ಲಾ ಸಮುದಾಯಗಳಂತೆ ತನ್ನ ಅಭಿವೃದ್ದಿಯ ಬಗ್ಗೆ ಹೆಚ್ಚು ಒತ್ತು ನೀಡುತ್ತಿರುವುದು ಇದರಿಂದ ವ್ಯಕ್ತವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗೊಲ್ಲ ನೌಕರರ ಸಂಘದ ತಾಲೂಕು ಅಧ್ಯಕ್ಷ ಕೆ.ಎಸ್.ಶ್ರೀಕಾಂತ್ ಮಾತನಾಡಿ, ಪ್ರತಿವರ್ಷ ಪ್ರತಿಭಾ ಪುರಸ್ಕಾರ ಅಭಿನಂದನಾ ಕಾರ್ಯಕ್ರಮಕ್ಕೆ ಇಡೀ ಸಮಾಜ ಒಗ್ಗಟ್ಟಿನಿಂದ ಈ ಕಾರ್ಯ ನೆರವೇರಿಸುತ್ತಿದೆ.

ಈ ಕಾರ್ಯಕ್ಕೆ ಹಲವಾರು ರೀತಿಯಲ್ಲಿ ಎಲ್ಲರೂ ಸಹಕಾರ ನೀಡಿದ್ದಾರೆ. ಇಂತಹ ಕಾರ್ಯಕ್ರಮಗಳು ನಡೆಸುವ ಮೂಲಕ ನಾವೆಲ್ಲರು ಸಮಾಜದಲ್ಲಿ ಉತ್ತಮ ಗೌರವವನ್ನು ಗಳಿಸಿಕೊಳ್ಳಲು ಸಾಧ್ಯ. ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಈ ಕ್ಷೇತ್ರದ ಶಾಸಕ, ಸಚಿವ ಟಿ.ರಘುಮೂರ್ತಿ ಸದಾ ನಮಗೆ ಬೆಂಬಲ ನೀಡುತ್ತಿರುವುದು ಅಭಿನಂದನೀಯವೆಂದರು.

ಕಾರ್ಯಕ್ರಮದಲ್ಲಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ಗೊಲ್ಲ ಸಮಾಜದ ಅಧ್ಯಕ್ಷ ಟಿ.ರವಿಕುಮಾರ್, ಮಾಜಿ ಜಿಪಂ ಅಧ್ಯಕ್ಷೆ ಶಾಂತಮ್ಮ, ಕಾಡುಗೊಲ್ಲರ ಸಂಘದ ಅಧ್ಯಕ್ಷ ಬೂದಿಹಳ್ಳಿ ರಾಜಣ್ಣ, ಡಾ.ಕೆ.ಮಹೇಶ್ವರಪ್ಪ, ಪರಶುರಾಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಟಿ.ಶಶಿಧರ, ಹುಲಿಕುಂಟೆ ಕಾಂತರಾಜು ಮುಂತಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾರ್ಖಾನೆ ವಿಸ್ತರಣೆ, ಮಾಲಿನ್ಯ ವಿರೋಧಿಸಿ 48 ಗಂಟೆ ಕೊಪ್ಪಳ ಬಂದ್ ಕರೆ
ಸುರಕ್ಷಿತ ಗರ್ಭಪಾತ, ಶ್ರವಣದೋಷ ತಡೆಗೆ ಅರಿವು ಅಗತ್ಯ: ಡಾ. ರಾಜೇಶ್